ADVERTISEMENT

‘ಅಲ್ಪಸಂಖ್ಯಾತರ ವಿರೋಧಿ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರ’

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಅಮೀನ್ ಮೊಹಿಸಿನ್ ಆರೋಪ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 5:42 IST
Last Updated 26 ಜೂನ್ 2025, 5:42 IST
ಅಮೀನ್‌ ಮೊಹಿಸಿನ್‌
ಅಮೀನ್‌ ಮೊಹಿಸಿನ್‌   

ಮಡಿಕೇರಿ: ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಮೃದು ಹಿಂದುತ್ವದ ಧೋರಣೆ ಅನುಸರಿಸುವ ಮೂಲಕ ಸಂಘ ಪರಿವಾರದ ನಿಯಂತ್ರಣದಲ್ಲಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಅಮೀನ್ ಮೊಹಿಸಿನ್ ಆರೋಪಿಸಿದರು.

‘ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ಎ.ಬಿ.ರಮೇಶ್ ಬಂಡಿ ಸಿದ್ದೇಗೌಡ ಅವರು ನೀಡಿರುವ ಹೇಳಿಕೆ ಇದಕ್ಕೆ ಸಾಕ್ಷಿ. ಕಾಂಗ್ರೆಸ್‌ ಸರ್ಕಾರ ನಿಜವಾಗಿ ಅಲ್ಪಸಂಖ್ಯಾತರ ಪರವಾಗಿದ್ದರೆ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬೇಕಾದರೆ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಆ ಪಕ್ಷಕ್ಕೆ ಮತ ಹಾಕಿದ್ದಾರೆ ಎನ್ನುವುದನ್ನು ಮರೆಯಬಾರದು. ಮುಸ್ಲಿಮರಿಗೆ ಚುನಾವಣೆ ವೇಳೆ ನೀಡಿದಂತಹ ಯಾವುದೇ ಭರವಸೆಗಳನ್ನೂ ಸರ್ಕಾರ ಈಡೇರಿಸಿಲ್ಲ’ ಎಂದು ಅವರು ದೂರಿದರು.

ADVERTISEMENT

ರದ್ದುಗೊಂಡಿರುವ ಹಿಜಾಬ್ ಮತ್ತು ಶೇ 4ರ ಮೀಸಲಾತಿ ಮರುಸ್ಥಾಪನೆಗೆ ಸರ್ಕಾರ ನಿರ್ಲಕ್ಷ ತೋರುತ್ತಿದೆ.ಈಗಾಗಲೇ ನಡೆಸಿದ ಜಾತಿ ಜನಗಣತಿ ವರದಿಯ ಅಂಶಗಳ ಅನುಸಾರ ಉದ್ಯೋಗ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಮೀಸಲಾತಿ ಪ್ರಕಟಿಸಿ ಅಭಿವೃದ್ಧಿ ಪರ ಚಿಂತನೆ ಮಾಡಬೇಕಾದ ಸರ್ಕಾರ ಯಾರದ್ದೋ ಒತ್ತಡಕ್ಕೆ ಮಣಿದು ಮತ್ತೊಮ್ಮೆ ಜಾತಿ ಜನಗಣತಿ ನಡೆಸಲು ಮುಂದಾಗಿದೆ. ಇದರ ಹಿಂದೆ ಪ್ರಭಾವಿಗಳ ಲಾಬಿ ನಡೆದಿರುವ ಸಂಶಯವಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಟೀಕಿಸಿದರು.

ಮರು ಜಾತಿ ಜನಗಣತಿ ಪ್ರಕ್ರಿಯೆಯನ್ನು ಸರ್ಕಾರ ತಕ್ಷಣ ಕೈಬಿಡಬೇಕು. ಈಗಾಗಲೇ ಪೂರ್ಣಗೊಂಡಿರುವ ವರದಿ ಆಧಾರಿಸಿ ಸೌಲಭ್ಯಗಳ ಹಂಚಿಕೆ ಮುಂದುವರಿಸಬೇಕು. ಎಸ್‌ಸಿ ಎಸ್‌ಟಿಗಳ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಎಸ್‌ಡಿಪಿಐ ಉಪಾಧ್ಯಕ್ಷೆ ನಫೀಸಾ ಅಕ್ಬರ್ ಮಾತನಾಡಿ, ‘ಮುಸ್ಲಿಂ ಮೀಸಲಾತಿ ಕುರಿತು ಸರ್ಕಾರ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಎಸ್‌ಡಿಪಿಐ ಸದಸ್ಯರಾದ ಮೇರಿ ವೇಗಸ್ ಹಾಗೂ ಜಲೀಲ್ ಭಾಗವಹಿಸಿದ್ದರು.

ಅಮೀನ್‌ ಮೊಹಿಸಿನ್‌

‘ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ನಗರಸಭೆ ವಿಫಲ

’ ಎಸ್‌ಡಿಪಿಐ ಕಾರ್ಯದರ್ಶಿ ಬಷೀರ್ ಅಹಮ್ಮದ್ ಮಾತನಾಡಿ ಮಳೆಗಾಲದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಮಡಿಕೇರಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ. ಬಡವರಿಗೆ ನಿವೇಶನ ನೀಡದೆ ಕಾನೂನನ್ನು ಗಾಳಿಗೆ ತೂರಿ ಶ್ರೀಮಂತರಿಗೆ ಸಹಕಾರ ನೀಡಲಾಗುತ್ತಿದೆ. ನಗರೋತ್ಥಾನದ ಕಾಮಗಾರಿ ನಡೆಯುತ್ತಿಲ್ಲ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.