ADVERTISEMENT

‘ಸಾಮಾಜಿಕ ಸ್ವಾತಂತ್ರ್ಯಕ್ಕೆ ಹೋರಾಟ ಅನಿವಾರ್ಯ’- ಸಿದ್ದನಗೌಡ ಪಾಟೀಲ

ಪತ್ರಿಕಾ ಭವನದ 21ನೇ ವಾರ್ಷಿಕೋತ್ಸವ ಹೋರಾಟಗಾರ ಸಿದ್ದನಗೌಡ ಪಾಟೀಲ ಕರೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 6:42 IST
Last Updated 6 ನವೆಂಬರ್ 2022, 6:42 IST
ಮಡಿಕೇರಿಯ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ‘ಕೊಡಗು ಪತ್ರಿಕಾ ಭವನದ 21ನೇ ವಾರ್ಷಿಕೋತ್ಸವ’ ಸಮಾರಂಭದಲ್ಲಿ ಲೇಖಕ ಹಾಗೂ ಹೋರಾಟಗಾರ ಸಿದ್ದನಗೌಡ ಪಾಟೀಲ ಮಾತನಾಡಿದರು
ಮಡಿಕೇರಿಯ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ‘ಕೊಡಗು ಪತ್ರಿಕಾ ಭವನದ 21ನೇ ವಾರ್ಷಿಕೋತ್ಸವ’ ಸಮಾರಂಭದಲ್ಲಿ ಲೇಖಕ ಹಾಗೂ ಹೋರಾಟಗಾರ ಸಿದ್ದನಗೌಡ ಪಾಟೀಲ ಮಾತನಾಡಿದರು   

ಮಡಿಕೇರಿ: ‘ಇಂದು ಪತ್ರಕರ್ತರು ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಹಾಗೂ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ’ ಎಂದು ಲೇಖಕ ಹಾಗೂ ಹೋರಾಟಗಾರ ಸಿದ್ದನಗೌಡ ಪಾಟೀಲ ಕರೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ‘ಕೊಡಗು ಪತ್ರಿಕಾ ಭವನದ 21ನೇ ವಾರ್ಷಿಕೋತ್ಸವ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಈಗ ಮಾಧ್ಯಮಗಳು ಕಾರ್ಪೋ ರೇಟ್ ಉದ್ಯಮಿಗಳ ವಶವಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದ ಅವರು, ‘ಪತ್ರಕರ್ತರು ದಿನಗೂಲಿಗಳಾಗಿ ಕಾರ್ಯ ನಿರ್ವಹಿಸಬೇಕಿದೆ. ಇದರ ಮಧ್ಯೆಯೂ ಅವರು ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸಬೇಕಿದೆ’ ಎಂದರು.

ADVERTISEMENT

‘ಕೋಮು ಸಂಘರ್ಷದ ಸಮಯ ದಲ್ಲಿ ಮತ್ತೊಂದು ಮನೆಗೆ ಸಂಘರ್ಷ ಹರಡದ ಹಾಗೆ ಎಚ್ಚರಿಕೆಯಿಂದ ಸುದ್ದಿ ಬರೆಯಬೇಕು. ‘ನಮ್ಮಲ್ಲೇ ಮೊದಲು’ ಎಂಬ ಧಾವಂತದಲ್ಲಿ ಅಮಾನವೀಯ ವಾಗಿ ವರ್ತಿಸಬಾರದು’ ಎಂದು ಕಿವಿಮಾತು ಹೇಳಿದರು.

‘ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ₹ 10 ಲಕ್ಷ ಕೋಟಿ ಬಂಡವಾಳ ಹರಿದು ಬಂತು ಎಂದು ವರ್ಣರಂಜಿತವಾಗಿ ವರದಿ ಮಾಡುವ ವೇಳೆ ಸರ್ಕಾರ ಉದ್ಯಮಿಗಳ ₹ 10 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿತು ಎಂಬ ಅಂಶವನ್ನೂ ಗಣನೆಗೆ ತೆಗೆದುಕೊಳ್ಳಬೇಕಿತ್ತು. ದೊಡ್ಡ ಕಾರಿಡಾರ್ ನಿರ್ಮಾಣ ವೇಳೆ ಆಪೋಶನ ಗೊಳ್ಳುವ ಕೃಷಿಭೂಮಿ, ಜಲಮೂಲಗಳ ವರದಿಯೂ ಇರಬೇಕು’ ಎಂದರು.

‘ಯಾವುದೇ ತಾಲ್ಲೂಕುಗಳ 20 ಕಿ.ಮೀ ವ್ಯಾಪ್ತಿಯಲ್ಲಿರುವ ಭೂಮಿ ಇಂದು ರೈತರ ಬಳಿ ಇಲ್ಲ. ಕೃಷಿಯಿಂದ ಜಿಡಿಪಿಗೆ ಬರುತ್ತಿರುವ ವರಮಾನ ಕುಸಿಯುತ್ತಿದೆ. ಇದಕ್ಕಾಗಿ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆದಾರರ ಪ್ರವೇಶಕ್ಕೆ ಅವಕಾಶ ನೀಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪತ್ರಿಕೋದ್ಯಮ ಎನ್ನುವುದಕ್ಕಿಂತ ಪತ್ರಿಕಾ ರಂಗ ಎನ್ನುವುದು ಸೂಕ್ತ. ಪತ್ರಿಕಾ ಕ್ಷೇತ್ರವು ಯಾವತ್ತೂ ಜನ ಸಮುದಾಯಕ್ಕೆ ಉತ್ತರಾಯಿತ್ವವನ್ನು ಹೊಂದಿರಬೇಕು’ ಎಂದು ಹೇಳಿದರು.

ಕೌಸರ್ ರಚಿಸಿದ ಪತ್ರಿಕಾಭವನ ಮ್ಯಾನೆಜಿಂಗ್ ಟ್ರಸ್ಟಿಯಾಗಿದ್ದ ದಿವಂಗತ ಮನುಶೆಣೈ ಅವರ ಡಿಜಿಟಲ್ ಕಲಾಕೃತಿಯನ್ನು ಪತ್ರಿಕಾಭವನ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು. ಮುನುಶೆಣೈ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಟ್ರಸ್ಟ್‌ನ ಸ್ಥಾಪಕ ವ್ಯವಸ್ಥಾಪನಾ ಟ್ರಸ್ಟಿ ಟಿ.ಪಿ.ರಮೇಶ್, ಪತ್ರಕರ್ತ ಕೆ.ವಿ.ಪರಮೇಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್, ಪ್ರಧಾನ ಕಾರ್ಯದರ್ಶಿ ಉಜ್ವಲ್‍ರಂಜಿತ್, ಟ್ರಸ್ಟ್ ಖಜಾಂಚಿ ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಟ್ರಸ್ಟಿ ಎಚ್.ಟಿ.ಅನಿಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.