ADVERTISEMENT

ಸರ್ಕಾರಿ ಭೂಮಿಯ ಮಾಹಿತಿ ನೀಡದಿದ್ದರೆ ಹೋರಾಟ; ಕಂದೇಗಾಲ ಶ್ರೀನಿವಾಸ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 14:11 IST
Last Updated 28 ಜುಲೈ 2024, 14:11 IST

ಮಡಿಕೇರಿ: ಸರ್ಕಾರಿ ಭೂಮಿಯ ಮಾಹಿತಿ ನೀಡದಿದ್ದಲ್ಲಿ ಭೂಹೀನರೊಡಗೂಡಿ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಕಂದೇಗಾಲ ಶ್ರೀನಿವಾಸ್ ಒತ್ತಾಯಿಸಿದರು.

ರಾಜ್ಯಾದ್ಯಂತ ಈಗಾಗಲೇ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುವ ರೈತರುಗಳಿಗೆ ಭೂಮಿ ಮಂಜೂರು ಮಾಡಲು ಸಮಿತಿಗಳನ್ನು ರಚಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜೊತೆಗೆ, ಜಿಲ್ಲೆ, ತಾಲೂಕುಗಳಲ್ಲಿ ಪ್ರತಿ ವರ್ಷವೂ ಭೂ ಹಂಚಿಕೆಗೆ ಸಂಬಂಧಿಸಿದಂತೆ ಜುಲೈ 1ರೊಳಗೆ ಸರ್ಕಾರಿ ಭೂಮಿಯ ಮಾಹಿತಿ ಪ್ರಕಟಿಸಬೇಕು ಎಂದು ನಿಯಮ ಇದೆ. ಆದರೆ, ಈವರೆಗೂ ಯಾವುದೇ ಪ್ರಕ್ರಿಯೆಗಳು ಜಿಲ್ಲೆ ಮತ್ತು ತಾಲೂಕಿನ ಕಂದಾಯ ಇಲಾಖೆ ವತಿಯಿಂದ ನಡೆದಿಲ್ಲ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಜಿಲ್ಲೆಯಲ್ಲಿ ಭೂರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ದುರ್ಬಲ ಸಮುದಾಯಗಳಿಗೆ ಹಂಚಲು ಲಭ್ಯವಿರುವ ಸರ್ಕಾರಿ ಭೂಮಿಯ ವಿವರವನ್ನು ಸಾರ್ವಜನಿಕವಾಗಿ ಜಿಲ್ಲಾಡಳಿತ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ಪೈಸಾರಿ ಭೂಮಿಯನ್ನು ಸರ್ಕಾರ ಉಳ್ಳವರಿಗೆ ಗುತ್ತಿಗೆ ನೀಡುತ್ತಿದೆ. ಇದು ಭೂರಹಿತ ದಲಿತರು ಮತ್ತು ಆದಿವಾಸಿಗಳನ್ನು ಭೂಹೀನರನ್ನಾಗಿ ಮಾಡುವ ಹುನ್ನಾರವಾಗಿದೆ. ಸರ್ಕಾರ ಕೂಡಲೇ ಈ ಕಾಯ್ದೆಯನ್ನು ಹಿಂಪಡೆದು ಭೂಮಿ ಇಲ್ಲದವರಿಗೆ ನೀಡಬೇಕು ಎಂದು ಮನವಿ ಮಾಡಿದರು.

ಸಂಘದ ರಾಜ್ಯ ಕಾರ್ಯದರ್ಶಿ ಈ.ಸಣ್ಣಪ್ಪ, ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್.ಮಂಜುನಾಥ್, ಸಣ್ಣ ಬೆಳೆಗಾರರ ಒಕ್ಕೂಟದ ಮುಖಂಡ ಕೆ.ಟಿ.ಆನಂದ್, ಚಂಗಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.