ಕುಶಾಲನಗರ: ಸಮೀಪದ ಕೂಡಿಗೆಯ ಕೊಡಗು ಸೈನಿಕ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಕೆಡೆಟ್ ಅತುಲ್ ಕುಮಾರ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಆಯೋಜಿಸುವ ಅತ್ಯಂತ ಪ್ರತಿಷ್ಠಿತ ಯುವ ವಿಜ್ಞಾನಿ ಕಾರ್ಯಕ್ರಮ (ಯುವಿಕಾ)ಗೆ ಆಯ್ಕೆಯಾಗಿದ್ದಾರೆ.
ಮೇ 19ರಿಂದ 30ರವರೆಗೆ 12 ದಿನಗಳು ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರ (ಯುಆರ್‌ಎಸ್‌ಸಿ)ದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ವಿದ್ಯಾರ್ಥಿಯ ಆಯ್ಕೆಯು ಶಾಲೆಯ ಇತಿಹಾಸದಲ್ಲಿಯೇ ಮೊದಲಾಗಿದ್ದು, ವಿದ್ಯಾರ್ಥಿಯ ಪ್ರತಿಭೆ ಹಾಗೂ ಸಾಧನೆಯನ್ನು ಗುರುತಿಸಿ ಇಸ್ರೊ ಆಯ್ಕೆ ಮಾಡಿದ್ದು, ಶಾಲೆಯ ಅಧಿಕಾರಿಗಳಲ್ಲಿ, ಶಿಕ್ಷಕ ಸಮುದಾಯದಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದೆ.
ಪ್ರಾಂಶುಪಾಲ ಕರ್ನಲ್ ಅಮರ್ಜೀತ್ ಸಿಂಗ್ ಮಾತನಾಡಿ, ‘ಅತುಲ್ ಆಯ್ಕೆಯು ಸೈನಿಕ ಶಾಲೆಯು ಹೆಮ್ಮೆಪಡುವ ಕ್ಷಣವಾಗಿದ್ದು, ಅತುಲ್ ಕುಮಾರ್ ಯೂವಿಕಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದರೊಂದಿಗೆ ಶಾಲೆಯ ಗೌರವವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಲಭಿಸಿರುವ ಈ ಸುವರ್ಣಾವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು, ಯುವ ವಿಜ್ಞಾನಿಯಾಗಿ ಹೊರ ಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಸಂತಸ ವ್ಯಕ್ತಪಡಿಸಿದರು.
‘ಈ ಸಾಧನೆಯು ಇತರೆ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂದು ಹಾರೈಸಿದ ಅವರು, ಈ ಐತಿಹಾಸಿಕ ಸಾಧನೆ, ಶಾಲೆಯ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಿ ಉಳಿಯಲಿದೆ’ ಎಂದು ತಿಳಿಸಿದರು.
ಪ್ರಾಂಶುಪಾಲರು, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಮತ್ತು ಉಪಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ ಕೆಡೆಟ್ ಅತುಲ್ ಕುಮಾರ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.