ADVERTISEMENT

ಕೆಸರುಮಯ ರಸ್ತೆಯಲ್ಲಿ ವಿದ್ಯಾರ್ಥಿಗಳ ಹರಸಾಹಸ

ದೇವರಪುರ ಗಿರಿಜನ ಹಾಡಿಯ ಗೋಳು ಕೇಳುವವರಿಲ್ಲ

ಜೆ.ಸೋಮಣ್ಣ
Published 26 ಜೂನ್ 2022, 16:28 IST
Last Updated 26 ಜೂನ್ 2022, 16:28 IST
ಗೋಣಿಕೊಪ್ಪಲು ಬಳಿಯ ದೇವರಪುರ ಗಿರಿಜನ ಹಾಡಿಯ ರಸ್ತೆ ಕೆಸರುಮಯವಾಗಿರುವುದು
ಗೋಣಿಕೊಪ್ಪಲು ಬಳಿಯ ದೇವರಪುರ ಗಿರಿಜನ ಹಾಡಿಯ ರಸ್ತೆ ಕೆಸರುಮಯವಾಗಿರುವುದು   

ಗೋಣಿಕೊಪ್ಪಲು: ಸಮೀಪದ ದೇವರಪುರ ಗಿರಿಜನ ಹಾಡಿ ರಸ್ತೆ ಕೆಸರುಮಯವಾಗಿದ್ದು ನಡೆದಾಡಲು ಕಷ್ಟಕರವಾಗಿದೆ. ನೂರಾರು ಮನೆಗಳಿರುವ ಹಾಡಿ ರಸ್ತೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಹರಸಾಹಸಪಡುತ್ತಿದ್ದಾರೆ. ಕೆಸರಿನಲ್ಲಿ ಕಾಲುಗಳು ಹೂತು ಹೋಗಿ ಇನ್ನಿಲ್ಲದ ಪಡಿಪಾಡಿಲು ಅನುಭವಿಸುತ್ತಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.

ಕೆಸರಿನಲ್ಲಿ ಹೂತು ಹೋಗುವ ಭಯದಿಂದ ಆಟೊ ಚಾಲಕರೂ ಇತ್ತ ಸುಳಿಯುತ್ತಿಲ್ಲ. ಪೋಷಕರು ಕೂಲಿಗೆ ಹೋಗುವ ಮುನ್ನ ಒಂದು ಕಿ.ಮೀ ದೂರ ತಮ್ಮ ಮಕ್ಕಳನ್ನು ಎತ್ತುಕೊಂಡು ಬಂದು ರಸ್ತೆ ದಾಟಿಸುತ್ತಿದ್ದಾರೆ. ಇದರ ನಡುವೆ ಕಾಡಾನೆಗಳು ಇನ್ನಿಲ್ಲದ ಉಪಟಳ ಕೊಡುತ್ತಿವೆ. ರಸ್ತೆಯ ಎಡ ಬಲದಲ್ಲಿ ಕಾಡಾನೆಗಳು ಹಗಲಿನಲ್ಲಿಯೇ ರಸ್ತೆ ದಾಟುತ್ತಿರುತ್ತವೆ. ಆನೆಗಳು ಎದುರಾದರೆ ಕೆಸರು ರಸ್ತೆಯಲ್ಲಿ ಓಡಲು ಆಗದೇ ಜೀವ ಕೈಯಲ್ಲಿ ಹಿಡಿದು ನಡೆದಾಡುವ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಹಾಡಿಯ ಹಿರಿಯ ಅಜ್ಜಿ ಪಂಜರಿ ಯರವರ ಗಂಗೆ.

ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಕೂಲಿ ಕೆಲಸಕ್ಕೆ ತೆರಳುವ ಮಹಿಳೆಯರು, ಆಸ್ಪತ್ರೆಗೆ ತೆರಳುವ ವೃದ್ಧರು ಕೆಸರು ರಸ್ತೆಯಿಂದಾಗಿ ತೀರ ಬವಣೆ ಅನುಭವಿಸುತ್ತಿದ್ದಾರೆ. ಗರ್ಭಿಣಿಯರು ಮತ್ತು ವೃದ್ಧರು ಹಾಗೂ ಅನಾರೋಗ್ಯಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಟೊ ಕೂಡ ಬರುತ್ತಿಲ್ಲ.

ADVERTISEMENT

ಕಲ್ಲು ಹಾಗೂ ಹೊಂಡದಿಂದ ಕೂಡಿದ್ದ ರಸ್ತೆಗೆ ಜನರೇ ಸೇರಿಕೊಂಡು ಮಣ್ಣು ತುಂಬಿಸಿದ್ದರು. ಈಗ ಇದೇ ರಸ್ತೆ ಮಳೆಗೆ ಕೆಸರು ಮಯವಾಗಿ ಹೈರಾಣೆದ್ದು ಹೋಗಿದೆ.

ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಹಾಡಿಯಲ್ಲಿ ಯರವರು, ಜೇನುಕುರುಬರು ಸೇರಿದಂತೆ 200ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ಇವರೆಲ್ಲರೂ ಕಾಫಿ ತೋಟದ ಕಾರ್ಮಿಕರಾಗಿದ್ದಾರೆ. ದೇವರಕಾಡು ಪೈಸಾರಿಗೆ ಸೇರಿದ ಈ ಜಾಗದಲ್ಲಿ 40 ವರ್ಷಗಳ ಹಿಂದೆ ಅಂದಿನ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ಜೆ.ಎ.ಕರುಂಬಯ್ಯ, ಸದಸ್ಯರಾಗಿದ್ದ ಸಿ.ಎಸ್.ಅರುಣ್ ಮಾಚಯ್ಯ ಗಿರಿಜನರಿಗೆ ಗುಡಿಸಲು ಕಟ್ಟಿಕೊಂಡು ವಾಸಿಸಲು ಅವಕಾಶ ಮಾಡಿಕೊಟ್ಟರು.

‘ಸ್ಥಳೀಯ ಕಾಫಿ ಬೆಳೆಗಾರರು ಹಾಡಿಗೆ ರಸ್ತೆ ಮೂಲ ಸೌಕರ್ಯಗಳನ್ನು ಕಲ್ಪಿಸದಂತೆ ಗ್ರಾಮ ಪಂಚಾಯಿತಿಗೆ ತಡೆ ಒಡ್ಡಿದರು. ಇದೂ ಸಾಲದು ಎಂಬಂತೆ ಈ ಜಾಗದಿಂದ ಗಿರಿಜನರನ್ನು ಎತ್ತಂಗಡಿ ಮಾಡಿಸಲು ದೇವರಕಾಡು ಎಂಬ ನೆಪ ಒಡ್ಡಿ ಹಾಡಿ ಜನರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ಇದರಿಂದ ಗ್ರಾಮ ಪಂಚಾಯಿತಿ ಯಾವುದೇ ಮೂಲ ಸೌಲಭ್ಯ ಕಲ್ಪಿಸದಂತೆ ನೋಡಿಕೊಂಡಿದ್ದಾರೆ’ ಎಂದು ಹಾಡಿ ಮುಖಂಡ ಪಂಜರಿಯರವರ ಸುಬ್ರಮಣಿ ಹೇಳಿದರು.

‘ಗಿರಿಜನ ಸ್ಥಳೀಯ ದೇವಸ್ಥಾನ ಸಮಿತಿಯವರು ಗಿರಿಜನರು ವಾಸಿಸುತ್ತಿರುವ ಜಾಗದ ಬಗ್ಗೆ ನ್ಯಾಯಾಯಲದಲ್ಲಿ ಮೊಕದ್ದಮೆ ಹೂಡಿರುವುದರಿಂದ ಗ್ರಾಮ ಪಂಚಾಯಿತಿಯಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಆಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಅಧ್ಯಕ್ಷೆ ಶಾರದ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.