ADVERTISEMENT

ಕೊಡಗು | ಆತ್ಮಹತ್ಯೆ ತಡೆ; ಅತ್ಯಾಧುನಿಕ ಚಿಕಿತ್ಸೆ ಲಭ್ಯ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಮಾನಸಿಕ ರೋಗಕ್ಕೆ ಚಿಕಿತ್ಸೆ ಲಭ್ಯ

ಕೆ.ಎಸ್.ಗಿರೀಶ್
Published 10 ಸೆಪ್ಟೆಂಬರ್ 2025, 7:44 IST
Last Updated 10 ಸೆಪ್ಟೆಂಬರ್ 2025, 7:44 IST
.
.   

ಮಡಿಕೇರಿ: ಇಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಆತ್ಮಹತ್ಯೆ ಯೋಚನೆಯನ್ನು ಕೇವಲ ಅರ್ಧಗಂಟೆಯಲ್ಲಿ ಕಡಿಮೆ ಮಾಡುವಂತಹ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ.

‘ಐವಿ ಇನ್‌ಫ್ಯೂಷನ್‌’ ಎಂದು ಕರೆಯಲಾಗುವ ಚಿಕಿತ್ಸೆಯಲ್ಲಿ ಚುಚ್ಚುಮದ್ದುವೊಂದನ್ನು ಡ್ರಿಪ್‌ನಲ್ಲಿ ಹಾಕಿ ನೀಡಲಾಗುತ್ತದೆ. ಕೇವಲ ಅರ್ಧಗಂಟೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಯೋಚನೆ ಕ್ಷೀಣವಾಗುತ್ತದೆ. ಆನಂತರ ಅವರಿಗೆ ಮಾತ್ರೆಗಳೂ ಸೇರಿದಂತೆ ವಿವಿಧ ಬಗೆಯ ಚಿಕಿತ್ಸೆಗಳನ್ನು ನೀಡಿ, ಆಪ್ತಸಮಾಲೋಚನೆ ಮಾಡಿ ಆತ್ಮಹತ್ಯೆ ಯೋಚನೆಯಿಂದ ಮುಕ್ತರನ್ನಾಗಿ ಮಾಡುತ್ತದೆ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗ.

ಸದ್ಯ, ಇಲ್ಲಿ ಹೊರರೋಗಿ ಸೇವೆಯೂ ಲಭ್ಯ, ಒಳರೋಗಿ ಸೇವೆಯೂ ಲಭ್ಯ. ಮಾತ್ರೆ, ಆಪ್ತಸಮಾಲೋಚನೆ ಮಾತ್ರವಲ್ಲ ವಿದ್ಯುತ್ ಕಂಪನ ಚಿಕಿತ್ಸೆ, ಅತ್ಯಾಧುನಿಕವಾದ ‘ಐವಿ ಇನ್‌ಫ್ಯೂಷನ್‌’ ಚಿಕಿತ್ಸೆಯೂ ಲಭ್ಯವಿದೆ. ದಿನದ 24 ಗಂಟೆಗಳ ಕಾಲ ಈ ವಿಭಾಗ ಕಾರ್ಯನಿರ್ವಹಿಸುತ್ತಿದೆ.

ADVERTISEMENT

‘ಆಸ್ಪತ್ರೆಯಲ್ಲಿ ಮೂವರು ಮನೋರೋಗ ತಜ್ಞ ವೈದ್ಯರು, ತಲಾ ಒಬ್ಬರು ಮನಶಾಸ್ತ್ರಜ್ಞರು ಹಾಗೂ ಮನಶಾಸ್ತ್ರ ಸಾಮಾಜಿಕ ತಜ್ಞರು ಇದ್ದಾರೆ. ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗುವ ಎಲ್ಲರಿಗೂ ಇವರು ಚಿಕಿತ್ಸೆ ನೀಡುತ್ತಾರೆ. ಆತ್ಮಹತ್ಯೆ ಯತ್ನಿಸಿದವರಿಗೆ ದೈಹಿಕ ಚಿಕಿತ್ಸೆ ನೀಡಿ ಅವರು ಸಂಪೂರ್ಣ ಗುಣಮುಖರಾದ ಬಳಿಕ ಮಾನಸಿಕ ಆರೋಗ್ಯ ವಿಭಾಗದಲ್ಲಿ ದಾಖಲಿಸಿಕೊಂಡು ಅವರಿಗೆ ಮಾನಸಿಕ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ನಿವೃತ್ತ ಮೇಜರ್‌ ಡಾ.ಎನ್‌.ವಿ.ರೂಪೇಶ್ ಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಪಿಎಲ್‌ ಪಡಿತರ ಚೀಟಿ, ಆಧಾರ್ ಕಾರ್ಡ್‌ ಇದ್ದರೆ ಎಬಿಆರ್‌ಕೆ ಅಡಿ ಉಚಿತ ಚಿಕಿತ್ಸೆ ಲಭ್ಯವಿದೆ. ಇಲ್ಲದಿದ್ದರೆ, ತೀರಾ ಕಡಿಮೆ ಶುಲ್ಕ ಕಡಿಮೆ ಪಡೆಯಲಾಗುತ್ತದೆ.

ಇನ್ನು ತಾಲ್ಲೂಕು ಮಟ್ಟದಲ್ಲೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಚಿಕಿತ್ಸೆ ಲಭ್ಯವಿದೆ. ಇದಕ್ಕೆಂದೇ 6 ಮಂದಿ ತಜ್ಞರನ್ನು ಒಳಗೊಂಡ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ತಂಡವು ರಚನೆಯಾಗಿದೆ. ನಿರ್ದಿಷ್ಟ ದಿನಗಳಂದು ಇವರು ಎಲ್ಲ ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಚಿಕಿತ್ಸೆ ನೀಡುತ್ತಾರೆ. ಎಲ್ಲೆಡೆ ಕೇವಲ ಆತ್ಮಹತ್ಯೆ ಮಾತ್ರವಲ್ಲ, ಎಲ್ಲ ಬಗೆಯ ಮಾನಸಿಕ ರೋಗಗಳಿಗೆ ಔಷಧ ಲಭ್ಯವಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಆನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಡಿಕೇರಿ ಆಸ್ಪತ್ರೆಯಲ್ಲಿದೆ ಮಾನಸಿಕ ಆರೋಗ್ಯ ವಿಭಾಗ ಹೊಸ ಕಟ್ಟಡ ಕೊಠಡಿ ಸಂಖ್ಯೆ 11ರಲ್ಲಿ ವೈದ್ಯರು ಲಭ್ಯ ಟೆಲಿಮನಸ್ ಸಂಖ್ಯೆ 14416

‘ಟೆಲಿ ಮನಸ್’ ಸಹಾಯವಾಣಿ ಲಭ್ಯ ಭಾರತದಲ್ಲಿ 11 ಕೋಟಿಗೂ ಹೆಚ್ಚು ಜನರು ಮಾನಸಿಕ ಆರೋಗ್ಯದ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ಅವರಲ್ಲಿ ಸುಮಾರು ಶೇ 80ರಷ್ಟು ಜನರು ಮಾನಸಿಕ ಆರೋಗ್ಯ ಸೇವೆಯನ್ನು ಪಡೆಯುತ್ತಿಲ್ಲ. ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆಯ ಮೂಲಕ ತಮ್ಮ ಜೀವನವನ್ನು ಕೊನೆಗೊಳಿಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಬಹುದು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಯಾವುದೇ ವ್ಯಕ್ತಿ ತಾರತಮ್ಯವನ್ನು ಎದುರಿಸಬಾರದು. ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಮಾನಸಿಕ ತೊಂದರೆ ಮತ್ತು ಸಂಬಂಧಿತ ಮಾನಸಿಕ ಸಮಸ್ಯೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮೂಲಗಳು ಹೇಳುತ್ತವೆ. 14416 ಸಂಖ್ಯೆಗೆ ಕರೆ ಮಾಡಿ ಸಲಹೆ ಪಡೆಯಬಹುದು.

ಆತ್ಮಹತ್ಯೆಗೆ ಯತ್ನಿಸಿದವರು ದುರ್ಬಲರಲ್ಲ ಆತ್ಮಹತ್ಯೆಗೆ ಯತ್ನಿಸಿದವರು ಯಾವುದೇ ವಿಧದಲ್ಲೂ ದುರ್ಬಲರಲ್ಲ. ಅವರನ್ನು ದುರ್ಬಲರು ಎಂದು ಹೀಯಾಳಿಸುವ ಮನೋಭಾವವನ್ನು ಬಿಡಬೇಕು ಎಂದು ಕೊಡಗು  ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಮೇಜರ್‌ ಡಾ.ಎನ್‌.ವಿ.ರೂಪೇಶ್ ಗೋಪಾಲ್ ಹೇಳುತ್ತಾರೆ. ಮಿದುಳಿನಲ್ಲಿ ಉಂಟಾಗುವ ರಾಸಾಯನಿಕಗಳ ಏರುಪೇರು ಒತ್ತಡ ಅನುವಂಶೀಯತೆ ಮಾನಸಿಕ ಕಾಯಿಲೆಗಳಿಂದ ಆತ್ಮಹತ್ಯೆ ಯೋಚನೆ ಬರುತ್ತದೆ. ಖಿನ್ನತೆಗೆ ಇದರಲ್ಲಿ ಪ್ರಥಮ ಸ್ಥಾನ. ಮಾದಕವಸ್ತುಗಳ ಸೇವನೆಯಿಂದಲೂ ಈ ಬಗೆಯ ಯೋಚನೆಗಳು ಬರಬಹುದು. ಒಂದು ವೇಳೆ ಆತ್ಯಹತ್ಯೆ ಮಾಡಿಕೊಂಡರೆ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ. ಆ ಸಮಸ್ಯೆ ಮತ್ತು ಸಂಕಟಗಳು ಕುಟುಂಬದವರಿಗೆ ಮತ್ತು ಸಮಾಜಕ್ಕೆ ಎದುರಾಗುತ್ತದೆ. ಹಾಗಾಗಿ ಯಾರಿಗಾದರೂ ಆತ್ಮಹತ್ಯೆಯ ಯೋಚನೆಗಳು ಬಂದರೆ ಅವರು  ಅದನ್ನು ತುರ್ತು ಸ್ಥಿತಿ ಎಂದು ಪರಿಗಣಿಸಿ ಆಸ್ಪತ್ರೆಗೆ ಬರಬೇಕು. ಅವರ ಸ್ಥಿತಿಯನ್ನು ಆಧರಿಸಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸುತ್ತೇವೆ. ದಿನದ 24 ಗಂಟೆಗಳ ಕಾಲವೂ ಮಾನಸಿಕ ಆರೋಗ್ಯ ವಿಭಾಗ ಚಿಕಿತ್ಸೆಗೆ ಲಭ್ಯವಿದೆ ಎಂದು ಹೇಳಿದರು. ಆತ್ಮಹತ್ಯೆ ಯೋಚನೆಯನ್ನು ವ್ಯಕ್ತಿ ಮಾಡುವುದಲ್ಲ. ಮಿದುಳಿನಲ್ಲಿ ಉಂಟಾಗುವ ರಾಸಾಯನಿಕಗಳ ಏರುಪೇರಿನಿಂದ ತಾನೆ ತಾನಾಗಿ ಯಾರಿಗೆ ಬೇಕಾದರೂ ಬರಬಹುದು. ಹಾಗಾಗಿ ಅವರನ್ನು ದೂಷಿಸಬಾರದು ಎಂದು ತಿಳಿಸಿದರು. ಆತ್ಮಹತ್ಯೆ ಯತ್ನ ಕಾನೂನುಬಾಹಿರವಾಗಿದ್ದರೂ ಶಿಕ್ಷೆ ಇಲ್ಲ ಆದರೆ ಚಿಕಿತ್ಸೆ ನೀಡಲಾಗುತ್ತದೆ. ಹಾಗಾಗಿ ಆತ್ಮಹತ್ಯೆ ಯೋಚನೆ ಬಂದರೂ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.