ADVERTISEMENT

ತಲಕಾವೇರಿ ಜಾತ್ರೆಗೆ ಬಿರುಸಿನ ಸಿದ್ದತೆ

ಕುಂಡಿಕೆಯ ಸುತ್ತ ಸುಮಾರು 10 ಅಡಿ ಎತ್ತರದ ಬ್ಯಾರಿಕೇಡ್, 5 ಎಲ್‌ಇಡಿ ಪರದೆಗಳ ಅಳವಡಿಕೆ

ಸಿ.ಎಸ್.ಸುರೇಶ್
Published 16 ಅಕ್ಟೋಬರ್ 2025, 4:20 IST
Last Updated 16 ಅಕ್ಟೋಬರ್ 2025, 4:20 IST
ಜಾತ್ರೆಯ ಅಂಗವಾಗಿ ಸಿದ್ದಗೊಂಡ ತಲಕಾವೇರಿ ಕ್ಷೇತ್ರ.
ಜಾತ್ರೆಯ ಅಂಗವಾಗಿ ಸಿದ್ದಗೊಂಡ ತಲಕಾವೇರಿ ಕ್ಷೇತ್ರ.   

ನಾಪೋಕ್ಲು: ಅ. 17ರಂದು ಶುಕ್ರವಾರ ಮಧ್ಯಾಹ್ನ 1.44ಕ್ಕೆ ಮಕರ ಲಗ್ನದಲ್ಲಿ ಆಗಲಿರುವ ಕಾವೇರಿ ಪವಿತ್ರ ತೀರ್ಥೋದ್ಭವದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಭಕ್ತರಿಂದ ಜಾತ್ರೆಗೆ ಮೆರುಗು ಹೆಚ್ಚುತ್ತದೆ.  ಜಾತ್ರೆಗಾಗಿ ಜಿಲ್ಲಾಡಳಿತದಿಂದ ಸಿದ್ದತೆಗಳು ಭರದಿಂದ ನಡೆಯುತ್ತಿವೆ.

ತೀರ್ಥೋದ್ಭವ ಮಧ್ಯಾಹ್ನ ಆಗುತ್ತಿರುವುದರಿಂದ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರು ಬರುವ ನಿರೀಕ್ಷೆ ಇದೆ. ಹೀಗಾಗಿ, ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಜಿಲ್ಲಾಧಿಕಾರಿ ವೆಂಕಟರಾಜಾ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಹಿಂದೆ ಸಭೆಯಲ್ಲಿ ಸೂಚಿಸಿದಂತೆ ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.

ADVERTISEMENT

ತೀರ್ಥೋದ್ಭವ ವೀಕ್ಷಣೆಗೆ ದೇವಾಲಯಗಳಲ್ಲಿ 5 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ತಲಕಾವೇರಿಗೆ ತೆರಳುವ ದಾರಿಯಲ್ಲಿ 4 ಕಡೆ ಮೊಬೈಲ್ ಶೌಚಾಲಯಗಳನ್ನು ಅಳವಡಿಸಲಾಗಿದೆ.

ಜಾತ್ರೆಯ ಅಂಗವಾಗಿ ಬಿಗಿಭದ್ರತೆಗಾಗಿ ಪೋಲಿಸ್ ಇಲಾಖೆಯಿಂದ ಕುಂಡಿಕೆಯ ಸುತ್ತ ಸುಮಾರು 10 ಅಡಿ ಎತ್ತರದಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ದೇವಾಲಯಗಳಲ್ಲಿ 45 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಜಾತ್ರೆಗೆಂದೇ ಹೆಚ್ಚುವರಿಯಾಗಿ 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.

ಅ. 16ರಿಂದಲೇ ದೇವಾಲಯಗಳು ವಿದ್ಯುತ್ ಅಲಂಕಾರದಿಂದ ಕಂಗೊಳಿಸಲಿವೆ. 17ರಂದು ಪವಿತ್ರ ಕಾವೇರಿ ತೀರ್ಥೋದ್ಭವದ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ, ಅರೆಭಾಷೆ ಮತ್ತು ಕೊಡವ ಸಾಹಿತ್ಯ ಅಕಾಡೆಮಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಎರಡೂ ದೇವಾಲಯಗಳಲ್ಲಿ ₹ 6.70ಲಕ್ಷ ವೆಚ್ಚದಲ್ಲಿ ಹೂವಿನ ಅಲಂಕಾರ ಕೈಗೊಳ್ಳಲಾಗಿದೆ.  ದೇವಾಲಯ ಸಂಕೀರ್ಣವನ್ನು ಸಾವಿರಕ್ಕೂ ಅಧಿಕ ಬಲ್ಬ್‌ಗಳಿಂದ ಅಲಂಕರಿಸಲಾಗಿದೆ. ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದ್ದು ದೇವಾಲಯಗಳು ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿವೆ.

ತಲಕಾವೇರಿಯಲ್ಲಿ ಈ ಬಾರಿ ಅರ್ಚಕರಾದ ಗುರುರಾಜ್ ಮತ್ತು ರವಿರಾಜ್ ನೇತ್ರತ್ವದಲ್ಲಿ ಪೂಜೆಗಳು ನಡೆಯಲಿವೆ. ಕೊಡಗು ಏಕೀಕರಣ ರಂಗದಿಂದ ಒಂದು ತಿಂಗಳು ಅನ್ನದಾನ ನಡೆಯಲಿದೆ. ಭಾಗಮಂಡಲ ದೇವಾಲಯ  ಅನ್ನದಾನ ನೀಡಲಿದೆ. ಕುಂಡಿಕೆಯ ಸುತ್ತ 40ಕ್ಕೂ ಅಧಿಕ ಹೈಮಾಸ್ಟ್‌ ದೀಪಗಳು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಾಗಮಂಡಲದಿಂದ ತಲಕಾವೇರಿವರೆಗೆ ಉಚಿತ ಸಾರಿಗೆ ಬಸ್‌ ವ್ಯವಸ್ಥೆ ಇರುತ್ತದೆ. ತಲಕಾವೇರಿಯಲ್ಲಿ ಗೋಪುರದಿಂದ ದೇವಾಲಯದವರೆಗೆ ಭಕ್ತರು ನಡೆದಾಡಲು ಅನುಕೂಲವಾಗುವಂತೆ ಒಂದು ಪಾರ್ಶ್ವದಲ್ಲಿ ಶಾಶ್ವತ ಚಾವಣಿ ನಿರ್ಮಿಸಲಾಗಿದೆ. ದಟ್ಟಣೆ ನಿಯಂತ್ರಿಸುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ಅಳವಡಿಸುವ ಕಾರ್ಯ ನಡೆಯುತ್ತಿದೆ.

ಭಾಗಮಂಡಲ ದೇವಾಲಯದ ವತಿಯಿಂದ ಅನ್ನದಾನ ಯಥಾಸ್ಥಿತಿಯಲ್ಲಿ ನಡೆಯಲಿದೆ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲಾಗಿದೆ. ಕರಿಕೆ ಜಂಕ್ಷನ್‌ನಿಂದ ಭಾಗಮಂಡಲ ದೇವಾಲಯದವರೆಗೆ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಲಾಗಿದೆ. ತ್ರಿವೇಣಿ ಸಂಗಮದಲ್ಲಿ ಪಿಂಡಪ್ರದಾನ ಅ. 17ರಂದು ಮೂರು ಗಂಟೆವರೆಗೆ ನಡೆಯಲಿದೆ. ತ್ರಿವೇಣಿ ಸಂಗಮದಲ್ಲಿ ಹೂಳೆತ್ತುವ ಕಾರ್ಯ ಮುಗಿದಿದೆ.

ಜಾತ್ರೆಯ ಅಂಗವಾಗಿ ತಲಕಾವೇರಿ ಕ್ಷೇತ್ರದ ಕುಂಡಿಕೆಯ ಸುತ್ತ ಬ್ಯಾರಿಕೇಡ್ ಅಳವಡಿಸಿರುವುದು.
ತಲಕಾವೇರಿಯಲ್ಲಿ ಗೋಪುರದಿಂದ ದೇವಾಲಯದವರೆಗೆ   ಭಕ್ತರು ನಡೆದಾಡಲು ಅನುಕೂಲವಾಗುವಂತೆ ಒಂದು ಪಾರ್ಶ್ವದಲ್ಲಿ  ಶಾಶ್ವತ ಚಾವಣಿ ನಿರ್ಮಿಸಲಾಗಿದೆ.
ಭಾಗಮಂಡಲ-ತಲಕಾವೇರಿ ರಸ್ತೆಯಲ್ಲಿ  ಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದರು.
ಈ ಬಾರಿ ಭಾರಿ ಬಿಗಿ ಭದ್ರತೆ | ₹ 6.70 ಲಕ್ಷ ವೆಚ್ಚದಲ್ಲಿ ಹೂವಿನ ಅಲಂಕಾರ | ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ

ಪ್ಲಾಸ್ಟಿಕ್ ನಿಷೇಧ

ನಾಪೋಕ್ಲು: ಕಾವೇರಿ ತೀರ್ಥೋದ್ಭವಕ್ಕೆ ಸಂಬಂಧಿಸಿದಂತೆ ಭಾಗಮಂಡಲ ತಲಕಾವೇರಿ ಕ್ಷೇತ್ರಗಳಲ್ಲಿ ಅಂತಿಮ ಹಂತದ ಸಿದ್ಧತೆಗಳು ಬುಧವಾರ ಬಿರುಸಿನಿಂದ ನಡೆದವು. ಪ್ಲಾಸ್ಟಿಕ್‌ನ್ನು ನಿಷೇಧಿಸಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಅವರು ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ತಲಕಾವೇರಿ ಕ್ಷೇತ್ರದಲ್ಲಿ ಅಂತಿಮ ಹಂತಗಳು ಸಿದ್ಧತೆಗಳು ನಡೆದಿದ್ದು ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡಿವೆ. ಪೆಂಡಾಲ್‌ಗಳನ್ನು ಬಳಸಲಾಗಿದೆ. ಕಾವೇರಿ ತೀರ್ಥ ಪಡೆಯಲು 6 ಡ್ರಮ್‌ಗಳನ್ನು ಬಳಸಿಕೊಳ್ಳಲಾಗುವುದು. ಈ ವರ್ಷ ಬಿಂದಿಗೆ ಬಾಟಲಿಗಳನ್ನು ಕೊಂಡೊಯ್ಯುವಂತಿಲ್ಲ. ತೀರ್ಥೋದ್ಭವದ ಬಳಿಕ ಇದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಪ್ಲಾಸ್ಟಿಕ್ ಬಳಸುವಂತಿಲ್ಲ. ಹಣ್ಣು ಕಾಯಿಸೇವೆ ಎಂದಿನಂತೆ ದೇವಾಲಯದ ಮೇಲ್ಭಾಗದಲ್ಲಿ ನಡೆಯುತ್ತದೆ. ಪ್ರಶಾಂತ್ ಆಚಾರ್ಯ ತೀರ್ಥೋದ್ಭವದ ಸಂಕಲ್ಪ ಮಾಡಲಿದ್ದು 11.30 ರ ನಂತರ ಪೂಜಾ ಕೈಂಕರ್ಯಗಳು ನಡೆಯಲಿವೆ. ಕುಂಡಿಕೆ ಬಳಿ 8 ರಿಂದ 10 ಅರ್ಚಕರ ತಂಡ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವಚ್ಛತೆಯೊಂದಿಗೆ ಹಾಗೂ ಕ್ಷೇತ್ರಗಳಲ್ಲಿ ದೀಪಾಲಂಕಾರದೊಂದಿಗೆ ತೀರ್ಥೋದ್ಭವದ ಸಂಭ್ರಮಕ್ಕೆ ಕ್ಷೇತ್ರಗಳು ಅಣಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.