ADVERTISEMENT

ವಿಜೃಂಭಣೆಯ ಪನ್ನಂಗಾಲ ತಮ್ಮೆ ಉತ್ಸವ

ಯವಕಪಾಡಿಯಲ್ಲಿ ನಡೆದ ಗ್ರಾಮೀಣ ಉತ್ಸವದಲ್ಲಿ ನೂರಾರು ಭಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 5:01 IST
Last Updated 14 ಏಪ್ರಿಲ್ 2019, 5:01 IST
ಯವಕಪಾಡಿ ಗ್ರಾಮದಲ್ಲಿ ಪನ್ನಂಗಾಲ ತಮ್ಮೆ ದೇವರ ಉತ್ಸವ ನಡೆಯಿತು
ಯವಕಪಾಡಿ ಗ್ರಾಮದಲ್ಲಿ ಪನ್ನಂಗಾಲ ತಮ್ಮೆ ದೇವರ ಉತ್ಸವ ನಡೆಯಿತು   

ನಾಪೋಕ್ಲು: ಸಮೀಪದ ಯವಕಪಾಡಿ ಗ್ರಾಮದಲ್ಲಿ ಪನ್ನಂಗಾಲ ತಮ್ಮೆ ದೇವಿಯ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಉತ್ಸವದ ಆರಂಭದಲ್ಲಿ ಗ್ರಾಮದ ಅಂಜಪರವಂಡ ಕುಟುಂಬದ ಐನ್ ಮನೆಯಿಂದ ಭಂಡಾರಪೆಟ್ಟಿಗೆಯನ್ನು ದೇವಾಲಯಕ್ಕೆ ತರಲಾಯಿತು. ಪನ್ನಂಗಾಲ ತಮ್ಮೆ ದೇವಾಲಯದಲ್ಲಿ ಪೂಜೆ, ಅಭಿಷೇಕ, ಸಾಂಪ್ರದಾಯಿಕ ಆಚರಣೆಗಳು ನೆರವೇರಿದವು. ಓಲೆಗರಿಯಲ್ಲಿ ತಯಾರಿಸಿದ ಎರಡು ಕೊಡೆಗಳನ್ನು ಕೊಡೆ ಹಬ್ಬದಲ್ಲಿ ಬಳಸಲಾಯಿತು. ಈ ಕೊಡೆಯಲ್ಲಿ ಪನ್ನಂಗಾಲ ತಮ್ಮೆ ದೇವಿ ನೆಲೆಸಿದ್ದು, ಅಣ್ಣನಾದ ಇಗ್ಗುತ್ತಪ್ಪ ಮನೆಗೆ ತಂಗಿಯನ್ನು ಕರೆತರುವ ಪದ್ಧತಿಯನ್ನು ಉತ್ಸವದ ರೂಪದಲ್ಲಿ ಆಚರಿಸಲಾಗುತ್ತಿದೆ. ಅಣ್ಣನನ್ನು ಬಿಟ್ಟು ಹೋಗಲು ಮನಸ್ಸಿಲ್ಲದ ತಂಗಿಯು ಮಾರ್ಗ ಮಧ್ಯೆ ಸಿಗುವ ಭತ್ತದ ಗದ್ದೆಯಿಂದ ಹಿಂತಿರುಗಿ ಹೋಗಲು ಯತ್ನಿಸುವ ದೃಶ್ಯ ಭಕ್ತಿಭಾವದಿಂದ ಕೂಡಿದ್ದು, ಭಕ್ತರನ್ನು ರೋಮಾಂಚನಗೊಳಿಸಿತು.

ಶುಕ್ರವಾರ ಮಧ್ಯಾಹ್ನ ಪಾಡಿ ಇಗ್ಗುತ್ತಪ್ಪ ದೇವಾಲಯ ಸಮೀಪದ ಅಮ್ಮಂಗೇರಿಯಿಂದ ಬಿದಿರಿನ ಹೊಸ ಕೊಡೆಯನ್ನು ಪನ್ನಂಗಾಲ ತಮ್ಮೆ ದೇವಾಲಯದ ಸಮೀಪದ ಗದ್ದೆಗೆ ಸಾಂಪ್ರದಾಯಿಕ ರೀತಿಯಲ್ಲಿ ತರಲಾಯಿತು. ಹರಕೆಯ ಎತ್ತುಗಳೊಂದಿಗೆ ದೇವಾಲಯಕ್ಕೆ ಭಕ್ತರು ಬಂದಾಗ ದೇವರ ಮೂರ್ತಿ ಹಾಗೂ ಕೊಡೆ ಮೆರವಣಿಗೆ ನಡೆಯಿತು.

ADVERTISEMENT

ಈ ಸಂದರ್ಭದಲ್ಲಿ ಭಕ್ತರು ಭಾವಪರವಶದಿಂದ ತಲೆಗೆ ಕತ್ತಿಯಿಂದ ಹೊಡೆದುಕೊಂಡು ಆವೇಶಭರಿತರಾಗಿ ನರ್ತಿಸಿದರು. ಯವಕಪಾಡಿ ಗ್ರಾಮದ ಅಂಜಪರವಂಡ, ಕರ್ತಂಡ, ಐರೀರ, ಅಪ್ಪಾರಂಡ ಕುಟುಂಬಸ್ಥರು ಪರಿಶಿಷ್ಟ ಜಾತಿಯ ಒಂಬತ್ತು ಕುಡಿಗಳು ಹಾಗೂ ಒಂದು ಕುಡಿಯರ ಕುಟುಂಬದವರ ಉಸ್ತುವಾರಿಯಲ್ಲಿ ಕೊಡೆ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಸಂಜೆ ದೇವರ ಜಳಕ ಹಾಗೂ ರಾತ್ರಿ ಕರಿಚೌಂಡಿ ಬಾರಣೆ ನಡೆಯಿತು. ಕುರುಂದ ಆಟ ಹಾಗೂ ವಿವಿಧ ಪೂಜಾ ಕಾರ್ಯಗಳೊಂದಿಗೆ ಎರಡು ದಿನಗಳ ಪನ್ನಂಗಾಲ ತಮ್ಮೆ ಉತ್ಸವವು ಶನಿವಾರ ಕೊನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.