
ಸಿದ್ದಾಪುರ: ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ತಣಲ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಶಾಸಕ ಎ.ಎಸ್. ಪೊನ್ನಣ್ಣ ಪ್ರಸಂಶಿಸಿದರು.
ಸಿದ್ದಾಪುರದಲ್ಲಿ ತಣಲ್ ಸಂಸ್ಥೆ ವತಿಯಿಂದ ನಡೆಸುತ್ತಿರುವ ಡಯಾಲಿಸಿಸ್ ಕೇಂದ್ರಕ್ಕೆ ಆರ್ಥಿಕ ನೆರವಿಗಾಗಿ ಆಯೋಜಿಸಿದ್ದ ‘ಬಿರಿಯಾನಿ ಚಾಲೆಂಜ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೂತ್ರಪಿಂಡ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಎಲ್ಲರಿಗೂ ಡಯಾಲಿಸಿಸ್ ಮಾಡುವುದು ಅಸಾಧ್ಯವಾಗಿದೆ. ಈ ನಡುವೆ ಬಡವರಿಗಾಗಿ ತಣಲ್ ಸಂಸ್ಥೆಯು ಕಡಿಮೆ ವೆಚ್ಚದಲ್ಲಿ ಹಾಗೂ ಇನ್ನು ಕೆಲವರಿಗೆ ಉಚಿತವಾಗಿ ಡಯಾಲಿಸಿಸ್ ಮಾಡುತ್ತಿರುವುದು ಉತ್ತಮ ಕಾರ್ಯ ಎಂದರು.
ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಎಂಟು ಡಯಾಲಿಸಿಸ್ ಯಂತ್ರಗಳಿದ್ದು, ಅಲ್ಲಿಯೂ ಹೆಚ್ಚು ರೋಗಿಗಳು ಬರುತ್ತಿದ್ದಾರೆ. ತಾನು ಕೂಡ ಅಮ್ಮತ್ತಿಯ ಆರ್.ಐ.ಎಚ್.ಪಿ ಆಸ್ಪತ್ರೆಗೆ ಉಚಿತವಾಗಿ ಡಯಾಲಿಸಿಸ್ ಯಂತ್ರ ನೀಡಿರುವೆ. ತಣಲ್ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಹಕಾರ ನೀಡುವೆ ಎಂದು ಪೊನ್ನಣ್ಣ ಭರವಸೆ ನೀಡಿದರು.
ತಣಲ್ ಸಂಸ್ಥೆಯ ಪ್ರಮುಖರಾದ ಬಶೀರ್ ಮಾತನಾಡಿ, ಡಯಾಲಿಸಿಸ್ ಕೇಂದ್ರಕ್ಕೆ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದು ಇವರ ಖರ್ಚು ವೆಚ್ಚಗಳನ್ನು ಭರಿಸುವ ಉದ್ದೇಶದಿಂದ ‘ಬಿರಿಯಾನಿ ಚಾಲೆಂಜ್’ ಎಂಬ ಹೆಸರಿನಲ್ಲಿ ಬಿರಿಯಾನಿ ಮಾರಾಟ ಮಾಡಿ ಅದರ ಲಾಭವನ್ನು ಮೂತ್ರಪಿಂಡ ತೊಂದರೆ ಇರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ. ಈ ಬಾರಿ ಸುಮಾರು 12,000 ಬಿರಿಯಾನಿ ಪ್ಯಾಕೆಟ್‌ಗಳನ್ನು ತಯಾರಿಸಿ ಹಂಚಲಾಗುತ್ತಿದೆ. ಈ ಸಮಾಜಮುಖಿ ಕಾರ್ಯಗಳಿಗೆ ಯುವಕರು, ಸಾರ್ವಜನಿಕರು ಹೆಚ್ಚಿನ ಶ್ರಮ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ತಣಲ್ ಸಂಸ್ಥೆಯ ಸಮಾಜಮುಖಿ ಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಜಿ.ಪಂ ಮಾಜಿ ಸದಸ್ಯ ಎಂ.ಎಸ್. ವೆಂಕಟೇಶ್, ಜಿಲ್ಲಾ ಎಸ್‌ಎನ್‌ಡಿಪಿ ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ಸಿದ್ದಾಪುರ ಸಂತ ಜೋಸೆಫ್ ಚರ್ಚ್ ಧರ್ಮ ಗುರು ಫಾದರ್ ಮೈಕಲ್‌ಮರಿ, ಗ್ರಾ.ಪಂ. ಉಪಾಧ್ಯಕ್ಷ ಪಳನಿ ಸ್ವಾಮಿ, ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರತಿಶ್, ಸಿದ್ದಾಪುರ ಹಾಗೂ ನೆಲ್ಲಿ ಹುದಿಕೇರಿ ಗ್ರಾಮದ ಮಸೀದಿಗಳ ಧರ್ಮ ಗುರುಗಳು, ಗ್ರಾ.ಪಂ ಸದಸ್ಯರು ಮತ್ತು ತಣಲ್ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.
ಬಿರಿಯಾನಿ ಚಾಲೆಂಜ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರಕಿದ್ದು, ಸುಮಾರು 12 ಸಾವಿರ ಬಿರಿಯಾನಿ ವಿತರಿಸಲಾಯಿತು. ಸಿದ್ದಾಪುರ ಸೇರಿ ಸುತ್ತಮುತ್ತಲ ಭಾಗದ ಯುವಕ ಸಂಘ ಹಾಗೂ ಸ್ವ ಸಹಾಯ ಸಂಘಟನೆಗಳು ಬಿರಿಯಾನಿ ವಿತರಿಸಿದವು. ದಾನಿಗಳು ಕೂಡ ಬಿರಿಯಾನಿ ಖರೀದಿಸಿ ಬಡ ವಿದ್ಯಾರ್ಥಿಗಳು, ರೋಗಿಗಳಿಗೆ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.