ನಾಪೋಕ್ಲು: ಮೂರು-ನಾಲ್ಕು ದಿನಗಳಿಂದ ಅಬ್ಬರಿಸಿದ್ದ ಮಳೆರಾಯ ಶನಿವಾರ ಕೊಂಚ ವಿರಾಮಕ್ಕೆ ತೆರಳಿದ್ದರೂ, ಕಾವೇರಿ ನದಿಯಲ್ಲಿ ಪ್ರವಾಹ ಇಳಿಮುಖವಾಗಿಲ್ಲ. ಬೆಟ್ಟಶ್ರೇಣಿಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ನದಿತಟದ ಹಲವು ದೇವಾಲಯಗಳು ಜಲರಾಶಿಯ ನಡುವೆ ಹುದುಗಿವೆ. ಕೆಲವು ದೇವಾಲಯಗಳಲ್ಲಿ ನಿತ್ಯಪೂಜೆಯೂ ನಿಂತು ಹೋಗಿವೆ.
ಸಮೀಪದ ಪಾಲೂರು ಗ್ರಾಮದ ಹರಿಶ್ಚಂದ್ರ ದೇವಾಲಯ ಕಾವೇರಿ ನದಿ ಪ್ರವಾಹದಿಂದಾಗಿ ಸಂಪರ್ಕ ಕಡಿತಗೊಂಡು ಜಲರಾಶಿಯ ನಡುವೆ ಇದೆ. ಕಳೆದ ಹಲವು ದಿನಗಳಿಂದ ಕಾವೇರಿ ಪ್ರವಾಹ ದೇವಾಲಯದ ಸುತ್ತಲೂ ಆವರಿಸಿಕೊಂಡಿದ್ದು ಸಂಪರ್ಕ ಇಲ್ಲವಾಗಿದೆ. ಇದೀಗ ಸುಮಾರು ಒಂದು ಫರ್ಲಾಂಗ್ ದೂರದವರೆಗೆ ಕಾವೇರಿ ಪ್ರವಾಹ ನೀರು ನಿಂತಿದ್ದು, ನಿತ್ಯದ ಪೂಜೆ ಮಾಡಲು ಅರ್ಚಕರಿಗೆ ದೇವಾಲಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಇದೇ ಪರಿಸ್ಥಿತಿಯಿಂದಾಗಿ ನಿತ್ಯದ ಪೂಜೆ ಸ್ಥಗಿತಗೊಂಡಿದೆ. ದೇವಾಲಯ ತುಸು ಎತ್ತರದದಲ್ಲಿ ಇರುವುದರಿಂದ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ.
ಕಾವೇರಿಯ ಉಗಮಸ್ಥಾನ ತಲಕಾವೇರಿ ಕ್ಷೇತ್ರದ ದೇವಾಲಯಗಳು ಭಕ್ತರನ್ನು ಆಕರ್ಷಿಸಿದರೆ, ಇತ್ತ ತಲಕಾವೇರಿಯಿಂದ 8 ಕಿ.ಮೀ ತಳದಲ್ಲಿರುವ ಭಾಗಮಂಡಲದ ಭಗಂಡೇಶ್ವರ ದೇವಾಲಯವೂ ಭಕ್ತರನ್ನು ಸೆಳೆಯುತ್ತದೆ. ಭಾಗಮಂಡಲದಲ್ಲಿ ಕನ್ನಿಕೆ, ಕಾವೇರಿ, ಸುಜ್ಯೋತಿಗಳ ಸಂಗಮ ತ್ರಿವೇಣಿ ಸಂಗಮದಿಂದ ಪ್ರಸಿದ್ಧವಾಗಿದೆ. ಮಳೆಗಾಲದಲ್ಲಿ ಕಾವೇರಿ, ಕನ್ನಿಕೆಯರು ರಭಸವಾಗಿ ಉಕ್ಕಿ ಹರಿದಾಗ ಭಗಂಡೇಶ್ವರ ದೇವಾಲಯದ ಸುತ್ತಲೂ ಜಲರಾಶಿ ತುಂಬುತ್ತದೆ. ಈಚೆಗೆ ದೇವಾಲಯದ ಮೆಟ್ಟಿಲುಗಳವರೆಗೂ ಕಾವೇರಿ ಪ್ರವಾಹ ಏರಿತ್ತು. ಭಾಗಮಂಡಲವು ಭಗಂಡೇಶ್ವರ, ಸುಬ್ರಹ್ಮಣ್ಯ ಹಾಗೂ ಮಹಾವಿಷ್ಣು ದೇಗುಲ ಸಂಕೀರ್ಣಗಳಿಂದ ಪ್ರಸಿದ್ಧವಾಗಿದೆ. ಕೇರಳದ ಕಲಾಶೈಲಿ ಮಾದರಿಯನ್ನು ಹೋಲುವ ಈ ದೇವಾಲಯವೂ ಮಳೆಗಾಲದಲ್ಲಿ ರಭಸದ ಮಳೆಗೆ ವರ್ಷಂಪ್ರತಿ ಜಲಾವೃತವಾಗುತ್ತದೆ.
ತಲಕಾವೇರಿಯಂತೆ ಬಲಮುರಿಯೂ ಸಹ ಪುಣ್ಯಸ್ಥಳ. ಬಲಮುರಿಯಲ್ಲಿರುವ ಕಣ್ಣೇಶ್ವರ ಹಾಗೂ ಅಗಸ್ತ್ಯೇಶ್ವರ ದೇವಾಲಯಗಳಿವೆ. ಕಾವೇರಿ ನದಿಯ ಎಡಭಾಗದಲ್ಲಿ ಕಣ್ಣೇಶ್ವರ ಹಾಗೂ ಬಲಭಾಗದಲ್ಲಿ ಅಗಸ್ತ್ಯೇಶ್ವರ ದೇವಾಲಯಗಳಿದ್ದು, ಸುಂದರವಾದ ಪರಿಸರದಿಂದ ಕೂಡಿದೆ. ಇಲ್ಲಿ ಪಿಂಡ ಪ್ರದಾನ ಮಾಡಿದರೆ ತಲಕಾವೇರಿಯಲ್ಲಿ ಮಾಡಿದಷ್ಟೇ ಪುಣ್ಯ ಬರುತ್ತದೆ ಎಂಬುದು ಸ್ಥಳೀಯರ ನಂಬಿಕೆ. ನದಿತಟದಲ್ಲಿರುವ ಅಗಸ್ತ್ಯೇಶ್ವರ ದೇವಾಲಯವೂ ಮಳೆಗಾಲದಲ್ಲಿ ಜಲಾವೃತವಾಗುತ್ತದೆ. 2018ರ ಭೀಕರ ಮಳೆಗೆ ಇಲ್ಲಿನ ಅರ್ಚಕರು ಮನೆ ಕಳೆದುಕೊಂಡಿದ್ದರು.
ಪುರಾಣದ ಪ್ರಕಾರ ಕಾವೇರಿ ಮಾತೆಯು ತಾನು ಹರಿದು ಇಲ್ಲಿಗೆ ಬರುವುದಾಗಿ ದೇವಕಾಂತ ಮಹಾರಾಜನಿಗೆ ಸೂಚನೆ ನೀಡಿದ್ದರು. ತನ್ನ ಮಾತಿನಂತೆ ಕಾವೇರಿ ನದಿಯಾಗಿ ಒಲಂಪುರಿಗೆ ಹರಿದು ಬರುವಾಗ ರಭಸದ ಪ್ರವಾಹ ಏರ್ಪಟ್ಟಿತು. ಕಾವೇರಿಯನ್ನು ತಡೆಯಲು ಬಂದ ಮಹಿಳೆಯರ ಸೀರೆ ನೆರಿಗೆಗಳು ಹಿಂದಕ್ಕೆ ಸರಿದವು. ಹಿಂದಕ್ಕೆ ಹೋದ ಸೀರೆಯ ಸೆರಗನ್ನು ಬಲಭಾಗಕ್ಕೆ ಗಂಟು ಹಾಕಿ ಮಹಿಳೆಯರು ಉಟ್ಟುಕೊಂಡಿದ್ದರಿಂದ ಇಲ್ಲಿಗೆ ಬಲಮುರಿ ಎಂಬ ಹೆಸರು ಬಂತು. ಮಳೆಗಾಲದಲ್ಲಿ ಬಲಮುರಿಯು ಜಲಾವೃತವಾಗಿ ಅಗಸ್ತ್ಯೇಶ್ವರ ದೇವಾಲಯ ಜಲರಾಶಿಯ ನಡುವೆ ಸಿಲುಕುತ್ತದೆ.
ಮಳೆಯ ರಭಸ ಹೆಚ್ಚಿದಂತೆ ನದಿ ತಟದ ಹಲವು ದೇವಾಲಯಗಳಿಗೆ ಜಲದಿಗ್ಭಂಧನ ತಪ್ಪಿದ್ದಲ್ಲ.
ನಿರಂತರ ಮಳೆ ಸುರಿಯುತ್ತಿದ್ದು ಕಾವೇರಿ ಪ್ರವಾಹದಿಂದಾಗಿ ಕಳೆದ ಕೆಲವು ದಿನಗಳಿಂದ ದೇವಾಲಯಕ್ಕೆ ತೆರಳಲಾಗದೇ ಪೂಜೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಾವೇರಿಗೆ ಅಕ್ಕಿ ಹೂವು ಕುಂಕುಮ ಇಟ್ಟು ನಿತ್ಯ ಪೂಜೆ ಮಾಡಲಾಗುತ್ತಿದೆಅರುಣ್ ಕುಮಾರ್ ಮುಖ್ಯ ಅರ್ಚಕ ಪಾಲೂರು ಹರಿಶ್ಚಂದ್ರ ದೇವಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.