ADVERTISEMENT

ವಸಂತದಲ್ಲೀಗ ಹಲಸಿನ ಸಂಭ್ರಮ

ಕೊಡಗು ಜಿಲ್ಲೆಯಲ್ಲಿ ಯಥೇಚ್ಛವಾಗಿ ಕಂಡು ಬರುತ್ತಿದೆ ಹಲಸಿನ ಹಣ್ಣು

​ಪ್ರಜಾವಾಣಿ ವಾರ್ತೆ
Published 11 ಮೇ 2025, 5:50 IST
Last Updated 11 ಮೇ 2025, 5:50 IST
ಮಡಿಕೇರಿಯ ಕೂರ್ಗ್ ವಿಲೇಜ್‌ನಲ್ಲಿ ಈಚೆಗೆ ಹಲಸಿನ ಮರದಲ್ಲಿ ಸಮೃದ್ಧ ಹಲಸಿನ ಹಣ್ಣುಗಳು ಬಿಟ್ಟಿರುವುದು ಕಂಡು ಬಂತು
ಮಡಿಕೇರಿಯ ಕೂರ್ಗ್ ವಿಲೇಜ್‌ನಲ್ಲಿ ಈಚೆಗೆ ಹಲಸಿನ ಮರದಲ್ಲಿ ಸಮೃದ್ಧ ಹಲಸಿನ ಹಣ್ಣುಗಳು ಬಿಟ್ಟಿರುವುದು ಕಂಡು ಬಂತು   

ಸೋಮವಾರಪೇಟೆ: ವಸಂತ ಋತುವಿನ ಆಗಮನವಾಗುತ್ತಿದ್ದಂತೆ ನವಿಲು ಗರಿಗೆದರಿ ನಿಂತಂತೆ ಪರಿಸರವೆಲ್ಲವೂ ಜಗ್ಗನೇ ತನ್ನ ಅಪಾರ ಸೌಂದರ್ಯ ರಾಶಿಯಿಂದ ನೋಡುಗರನ್ನು ಬರಸೆಳೆಯುತ್ತದೆ. ಕುಸುಮಗಳ ರಾಶಿ ಒಂದೆಡೆಯಾದರೆ, ಮತ್ತೊಂದೆಡೆ  ಪ್ರಕೃತಿಯಲ್ಲಿ ಕೊಡಗಿನಲ್ಲೇ ವಿಶೇಷ ಎನ್ನಬಹುದಾದ ಹಣ್ಣು ಹಂಪಲುಗಳು ಕಂಗೊಳಿಸುತ್ತವೆ.

ಎಲ್ಲೆಡೆ ಬರುವ ಹಣ್ಣುಗಳ ರಾಜ ಮಾವಿನ ಜೊತೆಗೆ ಹಲಸಿನ ಆಗಮನವೂ ಆಗುತ್ತದೆ. ಕೊಡಗಿನಲ್ಲಿ ಯಥೇಚ್ಛವಾಗಿ ಕಾಫಿ ತೋಟಗಳಿರುವುದರಿಂದ ಇಲ್ಲಿ ಹೆಚ್ಚಾಗಿ ಹಲಸಿನ ಮರಗಳಿವೆ. ಹಾಗಾಗಿ, ವಸಂತನ ಆಗಮನಕ್ಕಾಗಿ ಹಲಸು ಪ್ರಿಯರು ಕಾಯುತ್ತಿರುತ್ತಾರೆ.

ಈಗ ಎಲ್ಲೆಡೆ ಸಮೃದ್ಧ ಹಲಸು ಬಂದಿದೆ. ಬಡವರ ಹಸಿವು ನೀಗುವ ಹಣ್ಣು ಎಂದೇ ಹೆಸರಾದ ಹಲಸನ್ನು ಇಷ್ಟಪಡದವರೇ ಇಲ್ಲ. ಇಲ್ಲಿ ಕೇವಲ ಹಲಸಿನ ಹಣ್ಣು ಮಾತ್ರವಲ್ಲ, ಹಲಸಿನ ಕಾಯಿ, ಮಿಡಿಗಳಿಂದಲೂ ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ.

ADVERTISEMENT

ಇಲ್ಲಿ ಹಲವು ಕಡೆಗಳಲ್ಲಿ ಸಿಗುವ ಕಾಡು ಮಾವು ಮತ್ತು ಹಲಸಿನ ಹಣ್ಣು ಹೆರಳವಾಗಿ ಸಿಗುತ್ತದೆ. ಮಾವಿನ ಕಾಯಿ ಇದ್ದಾಗಲೇ ಅದನ್ನು ಉಪ್ಪಿನಕಾಯಿ, ಹಣ್ಣದಾಗ ತಿನ್ನಲು ಮತ್ತು ಸಾಂಬಾರ್ ತಯಾರಿಸಿ ಬಳಸುತ್ತಾರೆ.

ಹಲಸಿನ ಕಾಯಿ ಚಿಪ್ಸ್, ಸಾಂಬಾರ್, ಕಬಾಬ್ ಸೇರಿದಂತೆ, ಹಣ್ಣನ್ನು ಬಳಸುವುದು ಸಾಮಾನ್ಯ. ಇದರೊಂದಿಗೆ ಹಲಸಿನ ಬೀಜದಲ್ಲಿ ಹೇರಳವಾದ ಪೌಷ್ಠಿಕಾಂಶ ಇರುವುದರಿಂದ ಅದನ್ನು ಹಲವು ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಹಲಸಿನ ಬೀಜವನ್ನು ಸಂಗ್ರಹಸಿ ಒಣಗಿಸಿ ತುಂಬಿಸಿಟ್ಟುಕೊಳ್ಳುವ ಮೂಲಕ ಮಳೆಗಾಲದಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ.

ಕಳೆದೆರಡು ವರ್ಷಗಳ ಹಿಂದೆ ಶನಿವಾರಸಂತೆ ಭಾಗದಲ್ಲಿ ಹಲಸಿನ ಹಣ್ಣಿನ ಸುವಾಸನೆಗೆ ಕಾಡಾನೆ ಹಿಂಡುಗಳು ತೋಟಗಳಿಗೆ ಬಂದು ಬೆಳೆಗಳನ್ನು ನಾಶಪಡಿಸುತ್ತಿತ್ತು. ಇದರಿಂದ ರೋಸಿದ ಅಲ್ಲಿನ ರೈತರು ತಮ್ಮ ತೋಟದಲ್ಲಿರುವ ಹಲಸಿನ ಹಣ್ಣನ್ನು, ಹೊರಜಿಲ್ಲೆಯಿಂದ ಬರುವ ‌ಸರಕು ಸಾಗಣೆ ವಾಹನ ಚಾಲಕರಿಗೆ ಉಚಿತವಾಗಿ ಹಂಚಲಾರಂಭಿಸಿದ್ದರು. ಉಚಿತವಾಗಿ ಪಡೆದವರು ತಮ್ಮೂರುಗಳಲ್ಲಿ ಅವುಗಳನ್ನು ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರು.

ಈಗಲೇ ಹಸಲಿನ ಘಮಲು ಕಾಡಾನೆಗಳನ್ನು ಸೂಜಿಗಲ್ಲಿನಂತೆ ಸೆಳೆಯುವುದುಂಟು. ಹಾಗಾಗಿಯೇ, ಹಲವೆಡೆ ತೋಟಗಳಲ್ಲಿ, ರಸ್ತೆಗಳಲ್ಲಿ ಕಾಡಾನೆಗಳ ಸಂಚಾರ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ.

ಹಲಸಿನ ಕಾಯಿಯನ್ನು ಮೌಲ್ಯವರ್ದಿತ ಉತ್ಪನ್ನವನ್ನಾಗಿ ಮಾಡಿ ಮಾರಾಟ ಮಾಡಲು ಸಿದ್ಧಪಡಿಸಿರುವುದು.
ಹಲಸಿನ ಚಿಪ್ಸ್
ಕಾಡು ಮಾವಿನ ಹಣ್ಣಿನ ಸಾಂಬಾರು
ಕಾಡುಮಾವಿನ ಮರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.