ADVERTISEMENT

ಕೊಡಗು | 'ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಟೀಕೆ'

ಸಭೆಯ ಮಧ್ಯೆ ಅರಣ್ಯ ಸಚಿವರಿಗೆ ಕರೆ ಮಾಡಿದ ಸಚಿವ ಎನ್.ಎಸ್. ಭೋಸರಾಜು

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 15:46 IST
Last Updated 27 ಜೂನ್ 2025, 15:46 IST
ಮಡಿಕೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು
ಮಡಿಕೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು   

ಮಡಿಕೇರಿ: ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಎಲ್ಲ ಜನಪ್ರತಿನಿಧಿಗಳು ಸಾಮೂಹಿಕವಾಗಿ ಕಿಡಿಕಾರಿದರು ಮಾತ್ರವಲ್ಲ, ಒಂದರ ಮೇಲೋಂದರಂತೆ ಪ್ರಶ್ನೆಗಳನ್ನು ಕೇಳುವ ಮೂಲಕ ಅಧಿಕಾರಿಗಳನ್ನು ತಬ್ಬಿಬ್ಬುಗೊಳಿಸಿದರು.

ಈ ದೃಶ್ಯ ಇಲ್ಲಿ ಶುಕ್ರವಾರ ನಡೆದ ಕೊಡಗು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂಡು ಬಂತು. ಇಡೀ ಸಭೆ ತನ್ನ ಬಹುಪಾಲು ಸಮಯವನ್ನು ಅರಣ್ಯ ಇಲಾಖೆಯ ಪ್ರಗತಿ ‍ಪರಿಶೀಲನೆಗೆ ಮೀಸಲಟ್ಟಿದ್ದು ವಿಶೇಷವಾಗಿತ್ತು.

ಅನುಪಾಲನಾ ವರದಿಯನ್ನು ಓದುತ್ತಿದ್ದ ಅಧಿಕಾರಿಯನ್ನು ಅರ್ಧಕ್ಕೆ ತಡೆದ ಶಾಸಕ ಎ.ಎಸ್. ಪೊನ್ನಣ್ಣ, ‘ಇಷ್ಟು ತಿಂಗಳಿನಲ್ಲಿ ಕಾಡಾನೆಗಳು ಎಷ್ಟು ಮಂದಿಯ ಮೇಲೆ ದಾಳಿ ನಡೆಸಿವೆ, ಎಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಎಷ್ಟು ಮಂದಿ ಗಾಯಗೊಂಡಿದ್ದಾರೆ, ಪರಿಹಾರ ಎಷ್ಟು ವಿತರಣೆಯಾಗಿದೆ ಎಂಬ ಮಾಹಿತಿಯೇ ಇಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

ತೋಟದೊಳಗೆ ಕಾಡಾನೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ, ದಾಳಿಯೂ ಹೆಚ್ಚುತ್ತಿದೆ, ಕಂದಕಗಳ ನಿರ್ವಹಣೆಯೂ ಸರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾಗರಹೊಳೆಯ 28 ಹಾಡಿಗಳಿಗೆ ಮೂಲಸೌಕರ್ಯ ಕೊಟ್ಟು, ಇನ್ನುಳಿದ 6 ಹಾಡಿಗಳಿಗೆ ಕೊಡದಂತೆ ತಡೆಯುತ್ತಿರುವುದಾದರೂ ಏಕೆ’ ಎಂದೂ ಪ್ರಶ್ನಿಸಿದರು.

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ಕುಶಾಲನಗರದಿಂದ ಮಡಿಕೇರಿ ವಲಯಕ್ಕೆ, ಮಡಿಕೇರಿಯಿಂದ ಕುಶಾಲನಗರ ವಲಯಕ್ಕೆ ಕಾಡಾನೆಗಳನ್ನು ಓಡಿಸುವ ಕೆಲಸ ಮಾತ್ರ ನಡಯುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಮಧ್ಯೆ ಸಮನ್ವಯತೆ ಇಲ್ಲ’ ಎಂದು ಕಿಡಿಕಾರಿದರು.

‘ಮರ ಕಡಿಯಲು ಅನುಮತಿ ನೀಡಿ, ಮರವನ್ನು ವಶಪಡಿಸಿಕೊಂಡು ಹರಾಜು ಮಾಡಿ, ಹಣ ಬಿಡುಗಡೆ ಮಾಡುವಾಗ ರೆವಿನ್ಯೂ ಸ್ಕೆಚ್ ಸರಿ ಇಲ್ಲ ಎಂದು ಹೇಳಿರುವ ಅನೇಕ ಪ್ರಕರಣಗಳು ನಡೆದಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ‘ಕಾಡಿನಲ್ಲಿರುವ ಅಕೇಶಿಯಾ ಹಾಗೂ ನೀಲಗಿರಿ ಮರಗಳನ್ನು ತೆಗೆದು ಹಣ್ಣಿನ ಮರಗಳನ್ನು ನೆಡಬೇಕು ಎಂದು ಸರ್ಕಾರಿ ಆದೇಶ ಹೊರಡಿಸಿ 10 ವರ್ಷಗಳೇ ಕಳೆದಿವೆ. ಎಷ್ಟು ಮರಗಳನ್ನು ತೆಗದಿದ್ದೀರಿ’ ಎಂದು ಪ್ರಶ್ನಿಸಿದರು.

ಯಾವುದೇ ಪ್ರಶ್ನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡದೇ ಇದ್ದಾಗ ಕೋಪಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆಯವರನ್ನು ಮೊಬೈಲ್ ಮೂಲಕ ಸಂಪ‍ರ್ಕಿಸಿ ‘ಬೆಂಗಳೂರಿನಲ್ಲಿ ಶಾಸಕರು, ಅರಣ್ಯ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆಯಬೇಕು ಹಾಗೂ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆಡಿಪಿ ಸಭೆಗೆ ಬಾರದಿರುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಬೇಕು’ ಎಂದು ಹೇಳಿದರು.

‘ನೀಟ್’ ಪರೀಕ್ಷೆಯಲ್ಲಿ 84ನೇ ರ‍್ಯಾಂಕ್ ಪಡೆದ ನಿಧಿ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕ ಹಾಗೂ ಶಾಸಕ ಎ.ಮಂಜು, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಬ್ದುಲ್ ನಬಿ ಭಾಗವಹಿಸಿದ್ದರು.

ನೀಟ್ ಪರೀಕ್ಷೆಯ ಸಾಧಕಿ ನಿಧಿ ಅವರಿಗೆ ಸನ್ಮಾನ ಹಾಡಿ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ಸೂಚನೆ ಸಭೆಯಲ್ಲಿ ಹಲವು ವಿಷಯಗಳ ಪ್ರಸ್ತಾಪ

ಇತರೆ ಸೂಚನೆಗಳು * ಮಾನವ ಮತ್ತು ವನ್ಯಪ್ರಾಣಿ ಸಂಘರ್ಷವನ್ನು ತಡೆಯಲು ಅರಣ್ಯ ಅಧಿಕಾರಿಗಳು ಅಗತ್ಯ ಕಾರ್ಯಯೋಜನೆ ರೂಪಿಸಬೇಕು * ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸಬೇಕು. * ಧಾರಾಕಾರ ಮಳೆಯಿಂದ ಹಾಳಾಗಿರುವ ರಸ್ತೆಗಳ ಗುಂಡಿಮುಚ್ಚುವ ಕಾರ್ಯ ಮಾಡಬೇಕು * ಸರ್ಕಾರದಲ್ಲಿ ಹಣವಿದ್ದು ಸಮರ್ಪಕವಾಗಿ ಖರ್ಚು ಮಾಡಿದಲ್ಲಿ ಅನುದಾನ ಬಿಡುಗಡೆಯಾಗಲಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು * ವಿದ್ಯುತ್ ಕಂಬಗಳು ವಿದ್ಯುತ್ ಪರಿವರ್ತಕಗಳ ದಾಸ್ತಾನು ಇಟ್ಟುಕೊಳ್ಳಬೇಕು. *  ಭತ್ತ ಹಾಗೂ ಮುಸುಕಿನ ಜೋಳ ಬಿತ್ತನೆ ಬೀಜ ವಿತರಣೆ ಹಾಗೂ ಕಾಲ ಕಾಲಕ್ಕೆ ರಸಗೊಬ್ಬರ ಪೂರೈಕೆ ಮಾಡಬೇಕು

‘ನೊ ಆ್ಯಕ್ಷನ್ ಒನ್ಲಿ ನೋಟಿಂಗ್’– ಶಾಸಕ ತರಾಟೆ ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ಏನೇ ಹೇಳಿದರೂ ಅರಣ್ಯ ಇಲಾಖೆಯ ಅಧಿಕಾರಿಗಳು ‘ನೋಟಿಂಗ್’ ಎನ್ನುತ್ತಾರೆ. ಆದರೆ ‘ನೋ ಆ್ಯಕ್ಷನ್’ ಎಂದು ಅವರ ಕಾರ್ಯವೈಖರಿಯನ್ನು ಬಣ್ಣಿಸಿದರು. ಇದಕ್ಕೆ ಉದಾಹರಣೆಯಾಗಿ ಹೇಳುವುದಾದರೆ ‘ಕೆದಕಲ್ ಭಾಗದಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗಿದೆ ಎಂದು ಜನರು ದೂರು ನೀಡಿದರು. ನಾನೂ ಸ್ಥಳ ಪರಿಶೀಲಿಸಿ ಎಂದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಇನ್ನೂ ಭೇಟಿಯನ್ನೇ ನೀಡಿಲ್ಲ ಎಂದು ಕಿಡಿಕಾರಿದರು.

‘ಲೈನ್‌ಮನೆಗಳಲ್ಲಿ ಬಾಲಗರ್ಭಿಣಿಯರು ಜಾಗೃತಿ ಮೂಡಿಸಿ’  ಸಮಿತಿ ಸದಸ್ಯೆ ಎಚ್.ಎಂ.ಕಾವೇರಿ ಅವರು ಜಿಲ್ಲೆಯಲ್ಲಿ ಬಾಲಕಿಯರು ಗರ್ಭಿಣಿಯಾಗುತ್ತಿರುವ ವಿಷಯ ಪ್ರಸ್ತಾಪಿಸಿ ಸಭೆಯ ಗಮನ ಸೆಳೆದರು. ಮಾತ್ರವಲ್ಲ ಶಾಲೆಯಲ್ಲೇ ಹೆರಿಗೆಯಾಗಿರುವ ಕುರಿತು ಮಾಹಿತಿ ಬಂದಿದೆ ಎಂದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಲೈನ್‌ಮನೆಗಳಲ್ಲಿ ಹಾಡಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಸಚಿವ ಎನ್‌.ಎಸ್‌.ಭೋಸರಾಜು ಸೂಚಿಸಿದರು.

ಅನುದಾನಿತ ಶಾಲಾ ಶಿಕ್ಷಕರಿಗೆ ತೊಂದರೆ ಕೊಡದಿರಿ; ಭೋಜೇಗೌಡ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಜಿಲ್ಲೆಯಲ್ಲಿ ಅನುದಾನಿತ ಶಾಲೆಗಳು ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ ಡಿಡಿಪಿಐ ರಂಗಧಾಮಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ಸಂಬಳ ನಿಲ್ಲಿಸುವುದು ಬೇಡ ಶಾಲೆಗಳಿಗೆ ವಿದ್ಯಾರ್ಥಿಗಳು ದಾಖಲಾಗದೇ ಹೋದರೆ ಬೇರೆ ಶಾಲೆಗಳಿಗೆ ನಿಯೋಜಿಸಿ ಅನುದಾನಿತ ಶಾಲೆಗಳು ಶಿಕ್ಷಣ ನೀಡುವಲ್ಲಿ ಪ್ರಧಾನ ಪಾತ್ರ ವಹಿಸಿವೆ ಎಂಬುದನ್ನು ಮರೆಯಬಾರದು ಈ ಶಾಲೆಗಳಿಗಾಗಿ ಹಿರಿಯರು ಉದಾರವಾಗಿ ಜಾಗ ನೀಡಿ ಆರಂಭಿಸಿದರು. ಈಗ ಮುಚ್ಚುವುದು ಸರಿಯಲ್ಲ ಎಂದರು. ಇದೇ ವೇಳೆ ಅವರು ಗುಡ್ಡಗಾಡು ಪ್ರದೇಶಗಳಲ್ಲಿ ಅನುದಾನಿತ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ  ಕುರಿತು ಇರುವ ನಿಯಮದಲ್ಲಿ ಸಡಿಲ ತರಬೇಕು ಎಂದು ಸಚಿವ ಭೋಸರಾಜು ಅವರಲ್ಲಿ ಮನವಿ ಮಾಡಿದರು.

ನಾಡಗೀತೆಗೆ ಅವಮಾನ; ಭೋಜೇಗೌಡ ಆಕ್ಷೇಪ ಸಭೆಯ ಆರಂಭದಲ್ಲೇ ನಾಡಗೀತೆಯ ದ್ವನಿಮುದ್ರಿಕೆಯನ್ನು ಹಾಕಲಾಯಿತು. ಇದು ಸರಿ ಇಲ್ಲ ಕೆಲವೊಂದು ಸಾಲುಗಳು ಬಿಟ್ಟು ಹೋಗಿದೆ ಎಂದು ವಿಧಾನಪರಿಷತ್ ಸದಸ್ಯ ಭೋಜೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಮಕ್ಕಳಿಂದ ನಾಡಗೀತೆ ಹಾಡಿಸದೇ ಧ್ವನಿಮುದ್ರಿಕೆ ಹಾಕಿದ್ದು ಶೋಭೆಯಲ್ಲ ಎಂದರು. ಸಚಿವರ ಆಪ್ತ ಸಹಾಯಕರಿಗೆ ಸ್ವಾಗತ ಕೋರಿದ್ದಕ್ಕೂ ಆಕ್ಷೇಪ ವ್ಯಕ್ತಪಡಿಸಿ ಅವರು ಸಭೆಯಲ್ಲಿ ಶಿಷ್ಟಾಚಾರ ಪಾಲಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.