ADVERTISEMENT

ಲೋಕಾಯುಕ್ತ ಡಿವೈಎಸ್‌ಪಿ ಮುಂದೆ ಕಣ್ಣೀರು ಹಾಕಿದ ಮಹಿಳೆ

ಪೌತಿ ಖಾತೆ ಮಾಡಿಕೊಡಲು 2 ವರ್ಷದಿಂದ ಅಲೆಸಿದ ಅಧಿಕಾರಿಗಳು!

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 6:33 IST
Last Updated 13 ಜುಲೈ 2024, 6:33 IST
ಮಡಿಕೇರಿಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಪವನ್‌ಕುಮಾರ್ ಬಳಿ ಶುಕ್ರವಾರ ಮನವಿ ಸಲ್ಲಿಸಿದರು
ಮಡಿಕೇರಿಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಪವನ್‌ಕುಮಾರ್ ಬಳಿ ಶುಕ್ರವಾರ ಮನವಿ ಸಲ್ಲಿಸಿದರು   

ಮಡಿಕೇರಿ: ‍ಪೌತಿ ಖಾತೆ ಮಾಡಿಕೊಡಲು ಅಧಿಕಾರಿಗಳು ₹ 50 ಸಾವಿರ ಲಂಚ ಕೇಳುತ್ತಿದ್ದು, 2 ವರ್ಷದಿಂದ ಸತಾಯಿಸುತ್ತಿದ್ದಾರೆ. ಮಗಳ ಮದುವೆ ಮಾಡಬೇಕಿದ್ದು, ಹಣಕಾಸಿಗೆ ತುಂಬಾ ತೊಂದರೆಯಾಗಿದೆ ಎಂದು ಮಹಿಳೆಯೊಬ್ಬರು ಲೋಕಾಯುಕ್ತ ಡಿವೈಎಸ್‌ಪಿ ಪವನ್‌ಕುಮಾರ್ ಮುಂದೆ ಕಣ್ಣೀರು ಸುರಿಸಿದರು.

ಇಲ್ಲಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಈ ಘಟನೆ ನಡೆಯಿತು.

ಪೊನ್ನಂಪೇಟೆಯಲ್ಲಿ 5 ಸೆಂಟ್ ಜಾಗ ಇದೆ. ಪೌತಿ ಖಾತೆ ಮಾಡಲು ಅಧಿಕಾರಿಗಳು ₹ 50 ಸಾವಿರ ಕೇಳುತ್ತಿದ್ದು, ಸತಾಯಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದು, ಪೊನ್ನಂಪೇಟೆಗೆ ಹೋಗಿ ಬರಲು ತುಂಬಾ ತೊಂದರೆಯಾಗಿದೆ ಎಂದು ಅವರು ಕಣ್ಣೀರು ಹಾಕುತ್ತಲೇ ತಮ್ಮ ಸಮಸ್ಯೆಯನ್ನು ಬಿಡಿಸಿಟ್ಟರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಪವನ್‌ಕುಮಾರ್, ‘ಕಾಲಮಿತಿಯಲ್ಲಿ ಆದ್ಯತೆ ಮೇರೆಗೆ ಈ ಕಾರ್ಯ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿ, ಮನವಿ ಸ್ವೀಕರಿಸಿದರು.

ಅಹವಾಲು ಆಲಿಕೆ ಕಾರ್ಯಕ್ರಮದಲ್ಲಿ ಬಹುತೇಕ ಕಂದಾಯ ಇಲಾಖೆ ಬಗೆಗಿನ ಕುಂದುಕೊರತೆಗಳೇ ಕೇಳಿ ಬಂದವು. ಖಾತೆ ಮಾಡುವುದಕ್ಕೆ ಅಲೆಸುವುದು, ಭ್ರಷ್ಟಾಚಾರ ಮೊದಲಾದ ದೂರುಗಳು ಪ್ರಸ್ತಾವವಾದವು.

ಮಹಾಲಕ್ಷ್ಮಿ ಎಂಬುವವರು ಜಾಗದ ಖಾತೆ ಮಾಡಿಕೊಡದೆ ಒಂದುವರೆ ವರ್ಷದಿಂದ ಅಲೆದಾಡಿಸುತ್ತಿದ್ದಾರೆ. ಜಾಗದ ಖಾತೆ ಮಾಡಿಸಿಕೊಡುವಂತೆ ಲೋಕಾಯುಕ್ತರಲ್ಲಿ ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪೌರಾಯುಕ್ತ ವಿಜಯ್, ‘ಹೊಸದಾಗಿ ಖಾತೆ ಆಗಬೇಕಿದೆ. ಶೀಘ್ರ ಖಾತೆ ಮಾಡಿಕೊಡಲಾಗುವುದು’ ಎಂದು ಹೇಳಿದರು.

ಸೋಮವಾರಪೇಟೆ ತಾಲ್ಲೂಕಿನ ಬಿಳಿಗೇರಿ ಗ್ರಾಮದ ಪಿ.ಕೆ.ವಸಂತ ಅವರು ಜಾಗವನ್ನು ದುರಸ್ತಿ ಮಾಡಿಕೊಡುವಂತೆ ಹಲವು ವರ್ಷಗಳಿಂದ ಸೋಮವಾರಪೇಟೆ ತಾಲ್ಲೂಕು ಕಚೇರಿಯಲ್ಲಿ ಮನವಿ ಮಾಡಿದರೂ ಸಹ ಕೆಲಸಗಳು ಆಗಿಲ್ಲ. ಈ ಸಂಬಂಧ ಕೆಲಸ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ತಕ್ಷಣವೇ ಸ್ಪಂದಿಸಲಾಗುವುದು ಎಂದು ಪವನ್‌ಕುಮಾರ್ ಭರವಸೆ ನೀಡಿದರು.

ಮತ್ತೊಬ್ಬ ಮನವಿದಾರರು ಜಾಗದ ಖಾತೆ ಬದಲಾವಣೆ ಮಾಡಿಕೊಡಬೇಕಿದ್ದು, ಈ ಸಂಬಂಧ ಎಷ್ಟೇ ಮನವಿ ಮಾಡಿದರೂ ಸಹ ಇನ್ನೂ ಕೆಲಸವಾಗಿಲ್ಲ ಎಂದು ದೂರಿದರು.

ಈ ವೇಳೆ ಮಾತನಾಡಿದ ಲೋಕಾಯುಕ್ತ ಡಿವೈಎಸ್‍ಪಿ ಪವನ್ ಕುಮಾರ್, ‘ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಂದ ದೂರುಗಳು ಬರುವುದು ಕಡಿಮೆಯಾಗಿದೆ. ಇದರಿಂದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಮತ್ತು ಬದಲಾವಣೆಯಾಗುತ್ತಿರುವುದು ಕಂಡುಬರುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಿದಲ್ಲಿ ಕಲ್ಯಾಣ ರಾಜ್ಯ ನಿರ್ಮಾಣ ಮಾಡಬಹುದು. ಒಳ್ಳೆಯ ಕೆಲಸ ಮಾಡಿದ್ದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ ಎಂದರು.

ಕಚೇರಿಗಳಲ್ಲಿ ಹಾಜರಾತಿ ಬಯೋಮೆಟ್ರಿಕ್ ಅಳವಡಿಸಬೇಕು. ಚಲನವಲನ ವಹಿಯನ್ನು ದಾಖಲಿಸಬೇಕು ಎಂದು ಅವರು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.