ಕುಶಾಲನಗರ: ಸಮಾಜದ ಅಂಕು–ಡೊಂಕುಗಳನ್ನು ತಿದ್ದಿ ಸರಿದಾರಿಗೆ ತರುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಕೊಡಗು ವಿಶ್ವವಿದ್ಯಾಲಯ ಹಾಗೂ ಕೊಡಗು ವಿಶ್ವ ವಿದ್ಯಾನಿಲಯದ ಹಿತರಕ್ಷಣಾ ಬಳಗದ ಸಂಯುಕ್ತಾಶ್ರಯದಲ್ಲಿ ಬುಧವಾರ ವಿವಿ ಹಾರಂಗಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಧ್ಯಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮ ನಮ್ಮ ಜೀವನದಲ್ಲಿ ಒಂದು ಭಾಗವಾಗಿ ಹೋಗಿದೆ. ಮಾಧ್ಯಮಗಳಲ್ಲಿ ಯಾವುದೇ ವಿಚಾರ ಬಂದರೆ ಮಾತ್ರ ನಾವು ನಂಬುತ್ತೇವೆ. ಆದ್ದರಿಂದ ಸುದ್ದಿ ಕೊಡುವ ಭರದಲ್ಲಿ ಅಪೂರ್ಣ ಹಾಗೂ ಅಸತ್ಯವಾದ ಮಾಹಿತಿ ಜನತೆಗೆ ತಲುಪಬಾರದು. ಪತ್ರಕರ್ತರು ಸಾಮಾಜಿಕ ಜವಾಬ್ದಾರಿ ಅರಿತು ಸುದ್ದಿಗಳನ್ನು ಮಾಡುವ ಮೂಲಕ ತಮ್ಮ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು ಎಂದರು.
ಪತ್ರಕರ್ತ ಜಿ. ಚಿದ್ವಿಲಾಸ್ ಮಾತನಾಡಿ, ‘ಕೊಡಗು ವಿಶ್ವ ವಿದ್ಯಾನಿಲಯ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಇದರಿಂದ ಅನುದಾನ ಪಡೆಯಲು ಸಾಧ್ಯವಾಗಿಲ್ಲ. ಈ ಬಗ್ಗೆ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಕೊಡಗು ವಿವಿ ಅಭಿವೃದ್ಧಿಗೆ ಕ್ರಮ ವಹಿಸಬೇಕು’ ಎಂದರು.
ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಶಾಸಕಾಂಗ, ನ್ಯಾಯಾಂಗ ಕಾರ್ಯಾಂಗ,ಪತ್ರಿಕಾರಂಗ ಪರಿಣಾಮಕಾರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಿದಲ್ಲಿ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಆಗುತ್ತದೆ ಎಂದರು.
ಕೊಡಗು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ,ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ,
ಪತ್ರಿಕಾರಂಗ ವೈಜ್ಞಾನಿಕ ಹಾಗೂ ವೈಚಾರಿಕ ವರದಿ ಪ್ರಕಟಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಎತ್ತಿ ಹಿಡಿಯಬೇಕು ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೊಡಗು ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಎಸ್.ವಿ. ಮುರಳಿಧರ್, ಕೊಡಗು ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಎಂ.ಸುರೇಶ್, ಕೊಡಗು ವಿಶ್ವ ವಿದ್ಯಾನಿಲಯದ ಹಿತರಕ್ಷಣಾ ಬಳಗದ ಅಧಿಕೆ.ಎಸ್. ಕೃಷ್ಣಗೌಡ ಪಾಲ್ಗೊಂಡಿದ್ದರು. ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್ ಸ್ವಾಗತಿಸಿದರು. ಉಪನ್ಯಾಸಕ ಜಮೀರ್ ಅಹಮ್ಮದ್ ನಿರೂಪಿಸಿದರು. ಕೆ.ಎಸ್.ಮೂರ್ತಿ ವಂದಿಸಿದರು. ಪತ್ರಕರ್ತರು ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.