ವಿರಾಜಪೇಟೆ: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸಿದ 3 ಮಂದಿ ಆರೋಪಿಗಳನ್ನು ಸಿಐಡಿ ಅರಣ್ಯ ಘಟಕದ ಪೊಲೀಸರು ಬಂಧಿಸಿದ್ದು, ಎರಡು ನಕ್ಷತ್ರ ಆಮೆ ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರದ ಕೋಡಿಹಳ್ಳಿಯ ಎಂ.ರಾಮಮೂರ್ತಿ, ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಪುರದ ವಿ.ಕೆ. ರಮೇಶ್, ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಭೇರ್ಯ ಗ್ರಾಮದ ಬಿ.ಎಸ್.ಯೊಗೇಶ್ ಬಂಧಿತರು.
ಆರೋಪಿಗಳು ರಾಮನಗರದಿಂದ ಗೋಣಿಕೊಪ್ಪಲು ಕಡೆಗೆ ಕಾರಿನಲ್ಲಿ ಆಮೆಗಳನ್ನು ಸಾಗಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ವಾಹನ ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 2 ನಕ್ಷತ್ರ ಆಮೆಗಳನ್ನು ₹ 50 ಲಕ್ಷಕ್ಕೆ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಎಸ್‌ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರ ದಳದ ಸಬ್‌ಇನ್‌ಸ್ಪೆಕ್ಟರ್ ವೀಣಾ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸಿಬ್ಬಂದಿ ಕೆ.ಬಿ.ಸೋಮಣ್ಣ, ಟಿ.ಪಿ.ಮಂಜುನಾಥ್, ಪಿ.ಬಿ.ಮೊಣ್ಣಪ್ಪ ಎಂ.ಬಿ.ಗಣೇಶ್ ಮತ್ತು ಎಸ್.ಎಂ.ಯೋಗೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.