ADVERTISEMENT

ಸಿಡಿಲು: ಮುನ್ಸೂಚನೆ ನೀಡುವ ಆ್ಯಪ್‌ಗಳು

ಕರಾರುವಕ್ಕಾದ ಮಾಹಿತಿ ಕೊಡುವ ‘ಧಾಮಿನಿ’, ‘ಸಿಡಿಲು’

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 23:30 IST
Last Updated 1 ಜೂನ್ 2023, 23:30 IST
‘ಸಿಡಿಲು’ ಆ್ಯಪ್‌ನಲ್ಲಿ ಮುನ್ಸೂಚನೆ ನೀಡಿರುವುದು
‘ಸಿಡಿಲು’ ಆ್ಯಪ್‌ನಲ್ಲಿ ಮುನ್ಸೂಚನೆ ನೀಡಿರುವುದು   

ಕೆ.ಎಸ್.ಗಿರೀಶ

ಮಡಿಕೇರಿ: ಮುಂಗಾರು ಪೂರ್ವದಲ್ಲಿ ಬರುವ ಸಿಡಿಲಿನ ಮುನ್ಸೂಚನೆ ನೀಡುವ ಎರಡು ಅಧಿಕೃತ ಆ್ಯಪ್‌ಗಳು ಸಕ್ರಿಯವಾಗಿವೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ರೂಪಿಸಿರುವ ‘ಸಿಡಿಲು’ ಆ್ಯಪ್‌ ಸಿಡಿಲು ಉಂಟಾಗುವ ಕೆಲ ನಿಮಿಷಗಳ ಮುನ್ನ ಮುನ್ಸೂಚನೆ ನೀಡುತ್ತದೆ. ಭಾರತೀಯ ಹವಾಮಾನ ಇಲಾಖೆಯ ‘ಧಾಮಿನಿ’ ಆ್ಯಪ್ ಕೂಡ ನೋಟಿಫಿಕೇಶನ್ ರವಾನಿಸುತ್ತದೆ.

‘ಸಿಡಿಲು’ ಆ್ಯಪ್‌ನಲ್ಲಿ ನಾವಿರುವ ಸ್ಥಳ ಹಾಗೂ ಸುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಸೂಚನೆಗಳು ಬರಲಾರಂಭಿಸುತ್ತವೆ. ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸಿಡಿಲು ಉಂಟಾಗುತ್ತಿದ್ದಂತೆ ‘ಮನೆಯ ಒಳಗಿರಿ ಸಿಡಿಲು ಬರುತ್ತದೆ’ ಎಂಬ ಮಾಹಿತಿ ರವಾನಿಸುತ್ತದೆ. ಇದರ ಆಧಾರದ ಮೇಲೆ ಸಿಡಿಲಿನ ಚಟುವಟಿಕೆಗಳನ್ನು ಮುಂಚಿತವಾಗಿಯೇ ಗ್ರಹಿಸಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬಹುದು.

ADVERTISEMENT

ಮಳೆ ಮೋಡಗಳ ಹಾದಿ, ಅದರ ಚಲನವಲನಗಳನ್ನೂ ಸಚಿತ್ರವಾಗಿ ಆ್ಯಪ್‌ನಲ್ಲಿ ನೋಡಬಹುದು. ಮಳೆ ಮೋಡಗಳು ಎಷ್ಟು ವ್ಯಾಪ್ತಿಯಲ್ಲಿವೆ, ಅವುಗಳ ಸಾಂದ್ರತೆ ಎಷ್ಟು ಎಂಬುದರ ಮಾಹಿತಿಯೂ ಲಭ್ಯವಾಗುತ್ತದೆ.

ಮುನ್ಸೂಚನೆ ನೀಡಲೆಂದೇ ಕೇಂದ್ರ ಸರ್ಕಾರದ ಭೂವಿಜ್ಞಾನ ಇಲಾಖೆ ‘ಧಾಮಿನಿ’ ಎಂಬ ಆ್ಯಪ್‌ ರೂಪಿಸಿದೆ. ಇದರಲ್ಲಿ 21 ನಿಮಿಷಗಳಿಂದ ಸುತ್ತಲಿನ 40 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಸಿಡಿಲು ಉಂಟಾಗಿದೆ ಎಂಬ ಮಾಹಿತಿ ಸಿಗುತ್ತದೆ. 40 ಕಿ.ಮೀ. ದೂರದಲ್ಲಿ ಸಿಡಿಲು ಬಂದರೆ ಹಳದಿ ಬಣ್ಣದಲ್ಲಿ 20 ಕಿ.ಮೀ. ವ್ಯಾಪ್ತಿಯಲ್ಲಿ ಸಿಡಿಲು ಬಂದರೆ ಕೆಂಪು ಬಣ್ಣದಲ್ಲಿ ಮುನ್ಸೂಚನೆ ನೀಡುತ್ತದೆ. ಜೊತೆಗೆ, ಸಿಡಿಲಿನ ಸಾಧ್ಯತೆ ಹೆಚ್ಚಾದರೆ ಮೊಬೈಲ್‌ಗೆ ನೇರವಾಗಿ ನೋಟಿಫಿಕೇಶ್‌ನ ಸಹ ಬರುತ್ತದೆ.

ಅರಿವಿನ ಕೊರತೆ:

ಈ ಎರಡೂ ಆ್ಯಪ್‌ಗಳ ಕುರಿತು ಹೆಚ್ಚಿನ ಅರಿವು ಜನಸಾಮಾನ್ಯರಲ್ಲಿ ಇಲ್ಲ. ವಿದ್ಯಾವಂತರು ಸುಲಭವಾಗಿ ಈ ಆ್ಯಪ್‌ ಅನ್ನು ಬಳಸಬಹುದಾದರೂ ಹಳ್ಳಿಗರ ಪಾಲಿಗೆ ಇದು ಇನ್ನೂ ಕಬ್ಬಿಣದ ಕಡಲೆ ಎನಿಸಿದೆ. ಬಹುತೇಕ ಮಂದಿಗೆ ಇಂಥದ್ದೊಂದು ಆ್ಯಪ್ ಇದೆ ಎನ್ನುವುದು ತಿಳಿದಿಲ್ಲ. ಸಿಡಿಲಿಗೆ ಹೆಚ್ಚಾಗಿ ಕುರಿಗಾಹಿಗಳು ಹಾಗೂ ಹೊಲದಲ್ಲಿ ಉಳುಮೆ ಮೊದಲಾದ ಕೆಲಸ ಮಾಡುವವರೆ ಬಲಿಯಾಗುತ್ತಿದ್ದಾರೆ. ಇವರಲ್ಲಿ ಬಹುತೇಕ ಸ್ಮಾರ್ಟ್‌ ಫೋನ್‌ ಇಲ್ಲ. ಹಾಗಾಗಿ, ಇಲಾಖೆಗಳು ರೂಪಿಸಿರುವ ಈ ಆ್ಯಪ್‌ಗಳು ಸಿಡಿಲಿನಿಂದಾಗುವ ಪ್ರಾಣಹಾನಿ ತಪ್ಪಿಸುವಲ್ಲಿ ಯಶಸ್ವಿಯಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಮುಂಗಾರಿನಲ್ಲಿ ನಿದ್ದೆಗೆ ಜಾರುವ ಆ್ಯಪ್‌ಗಳು!:

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರೂಪಿಸಿರುವ ‘ಸಿಡಿಲು’ ಆ್ಯಪ್‌ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ನಿಷ್ಕ್ರಿಯಗೊಳ್ಳುತ್ತದೆ. ಈ ವೇಳೆ ಮೋಡಗಳ ಚಲನವಲನಗಳನ್ನೂ ಅದು ತೋರಿಸುವುದಿಲ್ಲ. ಕೇವಲ ಮುಂಗಾರು ಪೂರ್ವ ಅವಧಿಯಲ್ಲಷ್ಟೇ ಇದು ಸಕ್ರಿಯವಾಗಿರುತ್ತದೆ. ಈ ಎರಡೂ ಆ್ಯಪ್‌ಗಳನ್ನೂ ಗೂಗಲ್ ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

‘ಧಾಮಿನಿ’ ಆ್ಯಪ್‌ನಲ್ಲಿ ಸಿಡಿಲಿನ ಮುನ್ಸೂಚನೆ ಬಂದಿರುವುದು
‘ಧಾಮಿನಿ’ ಆ್ಯಪ್‌ನಲ್ಲಿ ಸಿಡಿಲು ಬರುವ ಕುರಿತು ನೋಟಿಫಿಕೇಶನ್ ಬಂದಿರುವುದು

'ಧಾಮಿನಿ’ ಮತ್ತು ‘ಸಿಡಿಲು’ ಆ್ಯಪ್‌ಗಳು ಸಿಡಿಲಿನ ಮುನ್ಸೂಚನೆ ನೀಡಲೆಂದೇ ರೂಪಿತವಾಗಿವೆ. ಜನರು ಇದನ್ನು ಬಳಸಿ ಸಿಡಿಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು ಎಸ್.ಕೆ.ಚೆಂಗಪ್ಪ ಹವಾಮಾನ ಪರಿವೀಕ್ಷಕ ಜಿಲ್ಲಾ ಕೃಷಿ ಹವಾಮಾನ ಘಟಕ ಗೋಣಿಕೊಪ್ಪಲು

ಸ್ಮಾರ್ಟ್‌ಫೋನ್‌ನಲ್ಲಿ ಬಳಕೆಗೆ ಲಭ್ಯ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.