ADVERTISEMENT

ಟಿಪ್ಪು ಜಯಂತಿ: ಕೊಡಗಿನಲ್ಲಿ ಎರಡು ದಿನ ನಿಷೇಧಾಜ್ಞೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 11:01 IST
Last Updated 8 ನವೆಂಬರ್ 2018, 11:01 IST
ಟಿಪ್ಪು ಸುಲ್ತಾನ್
ಟಿಪ್ಪು ಸುಲ್ತಾನ್   

ಮಡಿಕೇರಿ: ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆ 6ರಿಂದ ಭಾನುವಾರ ಬೆಳಿಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಕಾರ್ಯಕ್ರಮ ಹೊರತು ಪಡಿಸಿ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ಮೆರವಣಿಗೆ ಹಾಗೂ ಸಭೆಗಳನ್ನು ನಡೆಸುವಂತಿಲ್ಲ. 10ರಂದು ನಡೆಯುವ ಎಲ್ಲ ಸಂತೆಗಳನ್ನು ನಿಷೇಧಿಸಲಾಗಿದೆ. ಫ್ಲೆಕ್ಸ್, ಬ್ಯಾನರ್‌ಗಳನ್ನು ಕಟ್ಟುವಂತಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಮದುವೆ, ನಾಮಕರಣ, ಗೃಹಪ್ರವೇಶ, ನಿಶ್ಚಿತಾರ್ಥದಂತಹ ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಲಾಗಿದೆ.ಮತೀಯ ವಿಚಾರದಲ್ಲಿ ಅತಿಸೂಕ್ಷ್ಮ ಜಿಲ್ಲೆ ಎನಿಸಿರುವ ಕೊಡಗಿನಲ್ಲಿ ಟಿಪ್ಪು ಜಯಂತಿಗೆ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ.

ADVERTISEMENT

ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ, ಕೊಡವ ಮಕ್ಕಡ ಕೂಟ, ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್‌, ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಆಕ್ರೋಶ ಹೆಚ್ಚಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯು ಕಟ್ಟೆಚ್ಚರ ವಹಿಸಿದೆ. ಶಾಂತಿಭಂಗ ಉಂಟು ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.

2015ರ ನ. 10ರಂದು ನಡೆದಿದ್ದ ಟಿಪ್ಪು ಜಯಂತಿಯು ಕಹಿ ಘಟನೆಗೆ ಸಾಕ್ಷಿಯಾಗಿತ್ತು. ಇಬ್ಬರು ಮೃತಪಟ್ಟಿದ್ದರು. 2016 ಹಾಗೂ 2017ರಲ್ಲೂ ಕೊಡಗಿನಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಬಾರಿಯೂ ಮತ್ತೆ ಅದೇ ವಿರೋಧ ಎದ್ದಿದೆ.

ಚೆಕ್‌ಪೋಸ್ಟ್‌ ಆರಂಭ:2015ರಲ್ಲಿ ನಡೆದಿದ್ದ ಗಲಭೆಗೆ ಹೊರ ರಾಜ್ಯದಿಂದ ಬಂದವರು ಕಾರಣವೆಂಬ ಆರೋಪ ಕೇಳಿಬಂದಿತ್ತು. ಹೀಗಾಗಿ, ಕೇರಳದ ಕಣ್ಣೂರು, ಕಾಸರಗೋಡು ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ನಿಗಾ ವಹಿಸಲು ಮಾಹಿತಿ ಪಡೆಯಲಾಗಿದೆ. ಜಿಲ್ಲೆಯ ಗಡಿಭಾಗಗಳಾದ ಮಾಲ್ದಾರೆ, ಕುಟ್ಟ, ಆನೆಚೌಕೂರು, ಸಿದ್ದಾಪುರ, ಕೊಪ್ಪ, ಶಿರಂಗಾಲ, ಕೊಡ್ಲಿಪೇಟೆ, ಶನಿವಾರಸಂತೆ, ಸಂಪಾಜೆಯಲ್ಲಿ ಚೆಕ್‌ಪೋಸ್ಟ್‌ಗಳಿದ್ದು, ಭದ್ರತೆ ಹೆಚ್ಚಿಸಲು ಪೊಲೀಸರು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.