ADVERTISEMENT

ಆದಿವಾಸಿಗಳ ಒಕ್ಕಲೆಬ್ಬಿಸುವ ಹುನ್ನಾರ: ಗಿರಿಜನ ಮುಖಂಡ ಆರ್.ಕೆ.ಚಂದ್ರು

ಕಬ್ಬಿನಗದ್ದೆ ಹಾಡಿ ಅರಣ್ಯ ಹಕ್ಕು ಸಮಿತಿಯ ಗ್ರಾಮಸಭೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 3:02 IST
Last Updated 3 ಸೆಪ್ಟೆಂಬರ್ 2025, 3:02 IST
ಕುಶಾಲನಗರ ಸಮೀಪದ ಕಬ್ಬಿನಗದ್ದೆಯಲ್ಲಿ ಮಂಗಳವಾರ ನಡೆದ ಹಾಡಿ ಅರಣ್ಯ ಹಕ್ಕು ಸಮಿತಿ ಗ್ರಾಮಸಭೆಯಲ್ಲಿ ಗಿರಿಜನ ಮುಖಂಡ ಆರ್.ಕೆ.ಚಂದ್ರು ಮಾತನಾಡಿದರು
ಕುಶಾಲನಗರ ಸಮೀಪದ ಕಬ್ಬಿನಗದ್ದೆಯಲ್ಲಿ ಮಂಗಳವಾರ ನಡೆದ ಹಾಡಿ ಅರಣ್ಯ ಹಕ್ಕು ಸಮಿತಿ ಗ್ರಾಮಸಭೆಯಲ್ಲಿ ಗಿರಿಜನ ಮುಖಂಡ ಆರ್.ಕೆ.ಚಂದ್ರು ಮಾತನಾಡಿದರು   

ಕುಶಾಲನಗರ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದಿವಾಸಿಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಗಿರಿಜನರ ಅಭಿವೃದ್ಧಿಗೆ ಡೋಂಗಿ ಪರಿಸರವಾದಿಗಳು ಅಡ್ಡಿಪಡಿಸುತ್ತಿದ್ದಾರೆ’ ಎಂದು ಗಿರಿಜನ ಮುಖಂಡ ಆರ್.ಕೆ.ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ, ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ರಂಗಸಮುದ್ರ ಗ್ರಾಮದ ಕಬ್ಬಿನಗದ್ದೆ ಹಾಡಿಯಲ್ಲಿ ಮಂಗಳವಾರ ನಡೆದ ಹಾಡಿ ಅರಣ್ಯ ಹಕ್ಕು ಸಮಿತಿಯ ಗ್ರಾಮಸಭೆಯಲ್ಲಿ ಮಾತನಾಡಿದರು.

‘ಕಬ್ಬಿನಗದ್ದೆಯಲ್ಲಿ ನಡೆಯುತ್ತಿರುವ 9ನೇ ಗ್ರಾಮಸಭೆ ಇದಾಗಿದ್ದು, ನಮ್ಮ ನೆಲ, ಜಲ ಹಕ್ಕಿಗಾಗಿ ನಿರಂತರ ಹೋರಾಟ ನಡೆಸಬೇಕಾಗಿದೆ. ಗಿರಿಜನರ ಅಭಿವೃದ್ಧಿ ವಿಚಾರದಲ್ಲಿ
ರಾಜಕೀಯ ಕುತಂತ್ರ ನಡೆಯುತ್ತಿದೆ. ಆದ್ದರಿಂದ ಗಿರಿಜನರು ಸಂಘಟಿತ ಹೋರಾಟ ನಡೆಸುವ ಮೂಲಕ ನಮ್ಮ ನ್ಯಾಯಯುತ ಹಕ್ಕು ಪಡೆದುಕೊಳ್ಳಬೇಕಾಗಿದೆ’ ಎಂದರು.

ADVERTISEMENT

‘ಅರಣ್ಯ ಸಿಬ್ಬಂದಿ ಈ ಜಾಗ ನಿಮ್ಮದಲ್ಲ ಎಂದು ಹೇಳಿ ಹಾಡಿಗಳಿಗೆ ಬಂದು ಸರ್ವೇ ಮಾಡಿಸಿರುವ ಕ್ರಮ‌ ಸರಿಯಲ್ಲ. ಅರಣ್ಯದಲ್ಲಿ ಅನಾದಿ ಕಾಲದಿಂದಲೂ ವಾಸ ಮಾಡುತ್ತಿದ್ದೇವೆ. ಇಲ್ಲಿ ನಮ್ಮ ಪೂರ್ವಿಕರು ಜೀವನ ಸಾಗಿಸಿದ್ದಾರೆ. ವನದೇವತೆಯನ್ನು ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತೇವೆ. ಈ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ಪಡೆದು ಗಿರಿಜನ ವಾಸಿಸುವ ಜಾಗ ಅನುಭವಿಸಲು ಅವಕಾಶ ಮಾಡಿಕೊಡಬೇಕು. ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ಪರಿಸರವಾದಿಗಳ ಹೆಸರಿನಲ್ಲಿ ಮರಗಳನ್ನು ಲೂಟಿ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಅರಣ್ಯದಲ್ಲಿ ಗಿರಿಜನರು
ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಹೋದರೆ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ ಮಾತನಾಡಿ, ‘ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ಎಲ್ಲಾ ರೀತಿಯ ಸೌಲಭ್ಯ ಹಾಗೂ ಹಕ್ಕು ಒದಗಿಸಲು ಅರಣ್ಯ ಹಕ್ಕು ಸಮಿತಿ ರಚನೆ ಮಾಡಲಾಗಿದೆ. ಕಬ್ಬಿನಗದ್ದೆಯ 38 ಗಿರಿಜನ ಕುಟುಂಬ ಹಾಗೂ ಇಬ್ಬರು ಇತರೆ ಸಮುದಾಯದವರು ಅರ್ಜಿ ಸಲ್ಲಿಸಿದ್ದು, ಪೂರಕ ದಾಖಲೆ ಸಲ್ಲಿಸದ ಹಿನ್ನೆಲೆಯಲ್ಲಿ ಕೆಲವು ತಿರಸ್ಕಾರಗೊಂಡಿವೆ’ ಎಂದು ತಿಳಿಸಿದರು.

‘ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚು ನಡೆಯುತ್ತಿವೆ. ಈ ಬಗ್ಗೆ ಗಿರಿಜನರು ಜಾಗೃತರಾಗಬೇಕು. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಬಾರದು, ಮಕ್ಕಳಿಗೆ ಕಡ್ಡಾಯ ಹಾಗೂ ಉಚಿತ ಶಿಕ್ಷಣ‌ ಕೊಡಿಸಬೇಕು’ ಎಂದು ಹೇಳಿದರು.

ಸದಸ್ಯ ಮಾವಜಿ ರಕ್ಷಿತ್ ಮಾತನಾಡಿ, ‘2006ರ ಅರಣ್ಯ ಹಕ್ಕು ಕಾಯ್ದೆ ಅನುಸೂಚಿತ ಬುಡಕಟ್ಟು ಜನಾಂಗ ಹಾಗೂ ಅರಣ್ಯ ಅವಲಂಬಿತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಕಾಯ್ದೆ ಜಾರಿಗೆ ತಂದಿದೆ. ಅರಣ್ಯ ನಿವಾಸಿಗಳಿಗೆ ಮೂಲ ಸೌಕರ್ಯ ಜೊತೆಗೆ ನಾವು ಅನುಭವಿಸುತ್ತಿರುವ ಜಾಗಕ್ಕೆ ದಾಖಲೆ ಇಲ್ಲ. ಅರಣ್ಯ ಹಕ್ಕು ಸಮಿತಿ ಯಿಂದ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇದಕ್ಕಾಗಿ ನಾವು ಯಾವುದೇ ರೀತಿಯ ಹೋರಾಟ ನಡೆಸಲು ಸಿದ್ಧರಾಗಿದ್ದೇವೆ’ ಎಂದರು.

ಸಮಾಜ ಕಲ್ಯಾಣ ಇಲಾಖೆಯ ರವಿ ಮತ್ತು ಅರಣ್ಯ ಇಲಾಖೆಯ ಎಂ.ಕೂಡ್ಲೆಪ್ಪ ಮಾತನಾಡಿದರು.

ಗಿರಿಜನ ಮುಖಂಡ ಕಾಳಿಂಗ, ಕಬ್ಬಿನಗದ್ದೆ ಹಾಡಿ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಸತೀಶ್, ಕಟ್ಟೆಹಾಡಿ ಅಪ್ಪು, ಮಾವಿನಹಳ್ಳ ನಾಗೇಶ್, ಹಾಡಿ ಯಜಮಾನ ಧರ್ಮಪ್ಪ, ಪಂಚಾಯತಿ ಕಾರ್ಯದರ್ಶಿ ಶೇಷಾಚಲ, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.