ADVERTISEMENT

ಲಾಕ್‌ಡೌನ್‌ನಿಂದ ದುಡಿಮೆ ಮಾಯ; ಕೋವಿಡ್ ಸಂಕಷ್ಟಕ್ಕೆ ನಲುಗಿದ ಗಿರಿಜನರು

ಬಹಳಷ್ಟು ಜನರಿಗೆ ಪಡಿತರ ಕಾರ್ಡ್ ಲಭಿಸಿಲ್ಲ

ಜೆ.ಸೋಮಣ್ಣ
Published 24 ಮೇ 2021, 3:20 IST
Last Updated 24 ಮೇ 2021, 3:20 IST
ಗೋಣಿಕೊಪ್ಪಲು ಬಳಿಯ ದೇವಮಚ್ಚಿ ಹಾಡಿಯಲ್ಲಿ ಕೆಲಸವಿಲ್ಲದೇ ನಿಂತಿರುವ ಗಿರಿಜನರ ಅಣ್ಣಪ್ಪ
ಗೋಣಿಕೊಪ್ಪಲು ಬಳಿಯ ದೇವಮಚ್ಚಿ ಹಾಡಿಯಲ್ಲಿ ಕೆಲಸವಿಲ್ಲದೇ ನಿಂತಿರುವ ಗಿರಿಜನರ ಅಣ್ಣಪ್ಪ   

ಗೋಣಿಕೊಪ್ಪಲು: ಕೂಲಿ ಮಾಡಿ ಬದುಕು ನೂಕುವ ಗಿರಿಜನರನ್ನು ಕೋವಿಡ್ ಸಂಕಷ್ಟಕ್ಕೆ ತಳ್ಳಿದೆ. ಒಂದೂವರೆ ವರ್ಷದಿಂದ ವಿಶ್ವವನ್ನೇ ಕಾಡುತ್ತಿರುವ ಈ ಮಹಾಮಾರಿಯ ಸಂಕಷ್ಟ ಗಿರಿಜನರನ್ನು ಬಿಟ್ಟಿಲ್ಲ.

ಕಾಡು ಮೇಡುಗಳಲ್ಲಿ ಬದುಕುತ್ತಿರುವ ಗಿರಿಜನರು ನೇರವಾಗಿ ಕೋವಿಡ್ ಸೋಂಕಿಗೆ ಒಳಗಾಗದಿದ್ದರೂ ಪರೋಕ್ಷವಾಗಿ ಅದರ ಹೊಡೆತಕ್ಕೆ ಗುರಿಯಾಗುತ್ತಿದ್ದಾರೆ.

ಈ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಆಗಾಗ್ಗೆ ಹೇರುತ್ತಿರುವ ಲಾಕ್‌ಡೌನ್ ನಿತ್ಯ ದುಡಿದು ತಿನ್ನುವ ಗಿರಿಜನರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿದೆ. ಕೂಲಿಯನ್ನೇ ಬದುಕಿನ ಉಸಿರಾಗಿಸಿಕೊಂಡಿರುವ ಇವರು, ಈಗ ಕೆಲಸವಿಲ್ಲದೇ ನಲುಗಿ ಹೊಗಿದ್ದಾರೆ. ಕಾಫಿ ತೋಟದಲ್ಲಿ ಕೆಲಸವಿದ್ದರು ಎಲ್ಲರಿಗೂ ಸಿಗುತ್ತಿಲ್ಲ.

ADVERTISEMENT

ಹಿರಿಯ ತಲೆಮಾರಿನ ಗಿರಿಜನರು ಕಾಫಿ ತೋಟದ ಕೆಲಸ ಮಾಡುತ್ತಿದ್ದರೆ, ಯುವ ತಲೆಮಾರಿನವರು ಚಾಲನೆ, ಮೆಕ್ಯಾನಿಕ್‌ ಮತ್ತಿತರ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿಡುವ ವಾಹನ ಸಾಲ ಸೌಲಭ್ಯ ಪಡೆದುಕೊಂಡು ಆಟೋ ಮೊದಲಾದ ವಾಹನಗಳನ್ನು ಕೆಲವರು ಬಾಡಿಗೆ ಓಡಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದ ಇದೆಲ್ಲ ನಿಂತು ಹೊಗಿದೆ. ಬದುಕಿಗೆ ಪರ್ಯಾಯ ಮಾರ್ಗವಿಲ್ಲದೇ ಪರತಪಿಸುತ್ತಿದ್ದಾರೆ.

ಸರ್ಕಾರ ಬಿಪಿಎಲ್ ಕಾರ್ಡ್ ಮೂಲಕ ಅಲ್ಪಸ್ವಲ್ಪ ಅಕ್ಕಿ ನೀಡುತ್ತಿದೆ. ಅದೂ ಕಾರ್ಡ್ ಇದ್ದವರಿಗೆ ಮಾತ್ರ. ದಾಖಲೆಗಳ ಕೊರತೆಯಿಂದ ಬಹಳಷ್ಟು ಜನರಿಗೆ ಪಡಿತರ ಕಾರ್ಡ್ ಕೂಡ ಲಭಿಸಿಲ್ಲ.

ಸರ್ಕಾರ ಆಟೋ ಚಾಲಕರು, ಟೈಲರ್‌ ಮತ್ತಿತರ ಕಾರ್ಮಿಕರಿಗೆ ಒಂದಷ್ಟು ಪರಿಹಾರ ಧನ ನೀಡುವುದಾಗಿ ಹೇಳಿದೆ. ಆದರೆ, ಕೃಷಿ ಕಾರ್ಮಿಕರಾದ ಗಿರಿಜನರಿಗೆ ಯಾವುದೇ ಪರಿಹಾರ ಘೋಷಿಸಿಲ್ಲ ಎಂಬುದು ಗಿರಿಜನರ ಅಳಲು.

ಕೆಲವು ಗ್ರಾಮ ಪಂಚಾಯಿತಿಗಳು ಗಿರಿಜನರನ್ನು ಹಾಡಿಗಳಿಂದ ಹೊರಗೆ ಹೋಗಿ ಕೂಲಿ ಮಾಡಲು ಬಿಡುತ್ತಿಲ್ಲ. ಹೊರಗೆ ಹೋಗಿ ರೋಗ ಅಂಟಿಸಿಕೊಂಡು ಬರುತ್ತೀರಿ. ಆಮೇಲೆ ಊರಿನವರಿಗೆಲ್ಲ ಹರಡುತ್ತೀರಿ ಎಂದು ಹೆದರಿಸುತ್ತಿದ್ದಾರೆ. ಆಸ್ಪತ್ರೆಗೆ ಹೋಗಲು ಕೈಯಲ್ಲಿ ಕಾಸಿಲ್ಲದಂತಾಗಿದೆ ಎಂದು ಚನ್ನಂಗಿ, ಮಾಲ್ದಾರೆ ಮೊದಲಾದ ಹಾಡಿಗಳ ಜನರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.