ADVERTISEMENT

ಕೊಡಗು ಜಿಲ್ಲೆಯಲ್ಲಿ ಗುಡುಗು–ಸಿಡಿಲಿನ ಆರ್ಭಟ; ಒಣಗಲಿಟ್ಟಿದ್ದ ಕಾಫಿ ಮಳೆಯ ಪಾಲು

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 7:55 IST
Last Updated 25 ಜನವರಿ 2023, 7:55 IST
ಅಮ್ಮತ್ತಿ‌ಯಲ್ಲಿ ಸುರಿದ ಮಳೆಯ ಮಧ್ಯೆಯೇ ವಾಹನ ಸಂಚರಿಸಿದವು
ಅಮ್ಮತ್ತಿ‌ಯಲ್ಲಿ ಸುರಿದ ಮಳೆಯ ಮಧ್ಯೆಯೇ ವಾಹನ ಸಂಚರಿಸಿದವು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆ ರೈತರು, ಬೆಳೆಗಾರರನ್ನು ಅಕ್ಷರಶಃ ಹೈರಾಣಾಗಿಸಿದೆ. ಗುಡುಗು, ಸಿಡಿಲುಗಳ ಆರ್ಭಟದೊಂದಿಗೆ ಸುರಿದ ಮಳೆಯು ಒಣಗಲಿಟ್ಟಿದ್ದ ಕಾಫಿ, ಗದ್ದೆಯಲ್ಲಿದ್ದ ಭತ್ತವನ್ನು ಆಪೋಶನ ತೆಗೆದುಕೊಂಡಿದೆ. ರೈತರು, ಬೆಳೆಗಾರರು ಅಕಾಲಿಕ ಮಳೆಯಿಂದ ಕಂಗಲಾಗಿದ್ದಾರೆ.

ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆ ಸುರಿದಿರುವುದರಿಂದ ಕಣದಲ್ಲಿ ಇಡಲಾಗಿದ್ದ ಕಾಫಿ ಹಾಳಾಗಿದೆ. ಕೊಯ್ಲಿಗೆ ಬಂದಿದ್ದ ಭತ್ತಕ್ಕೂ ಹಾನಿಯಾಗಿದೆ. ಕೊಯ್ಲಿನ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ದ ಕಾರ್ಮಿಕರೂ ಮಳೆಗೆ ಹಿಡಿಶಾಪ ಹಾಕಿದ್ದಾರೆ.

ಮಡಿಕೇರಿಯಲ್ಲಿ ಸಂಜೆ ಶುರುವಾದ ಮಳೆ ರಾತ್ರಿಯವರೆಗೂ ಸುರಿಯಿತು. ಜನಸಾಮಾನ್ಯರು ಪರದಾಡಿದರು. ಮಳೆಯ ಲಕ್ಷಣವೇ ಇಲ್ಲದ್ದರಿಂದ ಕೊಡೆ ಇಲ್ಲದೆ ಬಂದಿದ್ದ ಬೀದಿಬದಿ ವ್ಯಾಪಾರಸ್ಥರು ನೆನೆದರು.

ADVERTISEMENT

ವಿದ್ಯುತ್ ಸಂಪರ್ಕ ಕಡಿತ

ಸಿದ್ದಾಪುರ: ಸಿದ್ದಾಪುರ, ಅಮ್ಮತ್ತಿ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಮಂಗಳವಾರ ಸಂಜೆ ಉತ್ತಮ ಮಳೆ ಸುರಿದಿದೆ. ಇದರಿಂದ ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಪರದಾಡಿದರು.

ಬೆಳಿಗ್ಗೆಯಿಂದ ಬಿಸಿಲಿನ ವಾತಾ ವರಣ ಇದ್ದು, ಮಧ್ಯಾಹ್ನ ಮೋಡ ಆವರಿಸಿತು. ಸಂಜೆ ಸುಮಾರು 4 ಗಂಟೆ ನಂತರ ಜೋರಾಗಿ ಮಳೆ ಸುರಿಯಿತು.

ದಿಢೀರ್ ಸುರಿದ ಮಳೆಯಿಂದಾಗಿ ಕಾಫಿ ಬೆಳೆಗಾರರು, ಕಾರ್ಮಿಕರು ಸಂಕಷ್ಟ ಎದುರಿಸುವಂತಾಯಿತು. ಕೊಯ್ಲು ಮಾಡಲಾಗಿದ್ದ ಕಾಫಿಯನ್ನು ಒಣಗಿಸಲು ಕಣದಲ್ಲಿ ಹಾಕಲಾಗಿದ್ದು, ದಿಢೀರ್ ಮಳೆಯಿಂದಾಗಿ ಕಾಫಿ ಒದ್ದೆಯಾಯಿತು. ಶಾಲಾ ವಿದ್ಯಾರ್ಥಿ ಗಳು ಕೂಡ ಮಳೆಯಿಂದ ಪರದಾಡು ವಂತಾಯಿತು. ಗುಡುಗು ಸಹಿತ ಮಳೆ ಮುಂದುವರೆದಿದ್ದು, ರಾತ್ರಿಯವರೆಗೂ ಮಳೆಯಾಗಿದೆ.

ಮುಂಗಾರಿನಂತೆ ಅಬ್ಬರ

ಗೋಣಿಕೊಪ್ಪಲು: ಮಂಗಳವಾರ ಬೆಳಿಗ್ಗೆಯಿಂದ ಬಿಸಿಲು, ಮೋಡಗಳ ನಡುವೆ ಆಗ್ಗಾಗ್ಗೆ ಬದಲಾಗುತ್ತಿದ್ದ ವಾತಾವರಣದಲ್ಲಿ ಸಂಜೆ 6 ಗಂಟೆ ವೇಳೆಗೆ ದಿಢೀರನೆ ಮಳೆ ಸುರಿಯಿತು.

ದಟ್ಟ ಮೋಡ ಕವಿದ ವಾತಾವರಣದಲ್ಲಿ ಮುಂಗಾರು ಮಳೆ ಯಂತೆ ಧಾರಾಕಾರವಾಗಿ ಸುರಿದ ವರ್ಷಧಾರೆಯಿಂದ ಚರಂಡಿ, ಕಾಲುವೆಗಳಲ್ಲಿ ನೀರು ರಭಸವಾಗಿ ಹರಿಯಿತು. ಆದರೆ, ಮನೆ ಮುಂದೆ ರಾಶಿರಾಶಿಯಾಗಿ ಒಣಗಲು ಹಾಕಿದ್ದ ಕಾಫಿ ನೀರಿನಲ್ಲಿ ಕೊಚ್ಚಿ ಹೋಗಿ ನಷ್ಟವಾಯಿತು. ಭತ್ತದ ಗದ್ದೆ ಬಯಲಿನಲ್ಲಿ ನಡೆಯುತ್ತಿದ್ದ ಒಕ್ಕಣೆ ಕೆಲಸಕ್ಕೆ ಅಡ್ಡಿಯಾಯಿತು. ಭತ್ತದ ಹುಲ್ಲು ಮತ್ತು ಭತ್ತ ನೀರಿನಲ್ಲಿ ತೊಯ್ದು ಹೋಯಿತು.

ಕಾರ್ಮಿಕರ ಸಮಸ್ಯೆ, ಅಧಿಕ ವೆಚ್ಚದ ನಡುವೆಯೂ ಕಷ್ಟ ಪಟ್ಟು ಮಾಡಿದ್ದ ಭತ್ತ ಮನೆಯ ಕಣಜ ಸೇರುವ ಸಂದರ್ಭದಲ್ಲಿ ಮಳೆ ನೀರಿಗೆ ತೊಯ್ದು ಹೋದದ್ದರಿಂದ ರೈತರ ಕಣ್ಣುಗಳು ಕೂಡ ತೋಯ್ದವು. ಕಾಲವಲ್ಲದ ಕಾಲದಲ್ಲಿ ಬಿದ್ದ ಅಕಾಲಿಕ ಮಳೆಗೆ ಕಾಫಿ ಬೆಳೆಗಾರರು, ಭತ್ತದ ಕೃಷಿಕರು ಮತ್ತಿತರ ರೈತರು ಕಣ್ಣೀರು ಹಾಕಿದರು.

ವಾಲ್ನೂರು ತ್ಯಾಗತ್ತೂರಿನಲ್ಲಿ 8 ಸೆಂ.ಮೀ ಮಳೆ

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರಿನಲ್ಲಿ ಅತ್ಯಧಿಕ ಮಳೆ 8 ಸೆಂ.ಮೀ ನಷ್ಟು ಸುರಿದಿದೆ. ಶಿರಂಗಾಲ 7, ಸುಂಟಿಕೊಪ್ಪ 5, ಕಂಬಿಬಾಣೆಯಲ್ಲಿ 4.5 ಸೆಂ.ಮೀ ಮಳೆಯಾಗಿದೆ.

ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆಯಲ್ಲಿ 5.5, ಪೊನ್ನಂಪೇಟೆಯ ಕುಟ್ಟದಲ್ಲಿ 5, ಕೆ.ಬಾಡಗ 4, ಮಡಿಕೇರಿಯಲ್ಲಿ 3.5, ಅರೆಕಾಡು ಗ್ರಾಮದಲ್ಲಿ 3 ಸೆಂ.ಮೀ ಮಳೆ ಸುರಿದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ; ಪರದಾಟ

ನಾಪೋಕ್ಲು: ಭಾಗಮಂಡಲ ವ್ಯಾಪ್ತಿಯಲ್ಲಿ ಮಂಗಳವಾರ ವರ್ಷದ ಮೊದಲ ಮಳೆ ಸುರಿಯಿತು.

ಸಣ್ಣಪುಲಿಕೋಟು, ಕೋರಂಗಾಲ ವ್ಯಾಪ್ತಿಯಲ್ಲಿ ಭತ್ತದ ಬೆಳೆ ಕೆಲಸದಲ್ಲಿ ರೈತರು ನಿರತರಾಗಿದ್ದು ಸುರಿದ ಮಳೆಗೆ ಸಮಸ್ಯೆ ಅನುಭವಿಸುವಂತಾಯಿತು. ಅಲ್ಲಲ್ಲಿ ಕೊಯ್ಲು ಮಾಡಿದ ಭತ್ತದ ಪೈರು ನೆನೆದಿದೆ. ಕಾಫಿ ಕೊಯ್ಲು ಸಹ ಬಹುತೇಕ ಭಾಗಗಳಲ್ಲಿ ಆರಂಭಗೊಂಡಿದ್ದು, ಕಣದಲ್ಲಿ ಒಣಗಲು ಹಾಕಿದ ಕಾಫಿ ಮಳೆಯಿಂದ ಒದ್ದೆ ಆಗಿದೆ.

ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಮಳೆ ಸುರಿದಿತ್ತು. ಈ ವರ್ಷ ಜನವರಿಯಲ್ಲಿ ಮೊದಲ ಮಳೆಯಾಗಿದೆ. ಭಾಗಮಂಡಲ, ತಣ್ಣಿಮಾನಿ, ಚೆಟ್ಟಿಮಾನಿ, ಅಯ್ಯಂಗೇರಿ, ಪುಲಿಕೋಟು, ಬಲ್ಲಮಾವಟಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯಾಗಿದೆ. ದಿಢೀರ್ ಸುರಿದ ಮಳೆಗೆ ಕಣದಲ್ಲಿ ಒಣಗಲು ಹಾಕಿದ್ದ ಕಾಫಿಯನ್ನು ಕಾರ್ಮಿಕರು ರಾಶಿ ಮಾಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು.

ಕೊಚ್ಚಿ ಹೋದ ಕಾಫಿ

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮಂಗಳವಾರ ಸುರಿದ ಮಳೆಯಿಂದ ಒಣಗಲು ಹಾಕಿದ್ದ ಕಾಫಿ ಕೊಚ್ಚಿ ಹೋಗಿದೆ.

ತಾಲ್ಲೂಕಿನಲ್ಲಿ ಇನ್ನೂ ಕಾಫಿ ಕೋಯ್ಲಿನ ಕೆಲಸ ನಡೆಯುತ್ತಿದೆ. ಹಲವು ರೈತರು ಕಾಫಿಯನ್ನು ಕಣಗಳು ಹಾಗೂ ಮನೆಯ ಚಾವಣಿ ಮೇಲೆ ಒಣಗಳು ಹಾಕಿದ್ದರು. ಸಂಜೆ ಏಕಾಏಕಿ ಪ್ರಾರಂಭವಾದ ಮಳೆಯಿಂದಾಗಿ ಸಾಕಷ್ಟು ಕಾಫಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಕಳೆದ ತಿಂಗಳಿನವರೆಗೂ ಮಳೆ ಬಿದ್ದಿದ್ದು, ಕಾಫಿ ಮತ್ತು ಭತ್ತದ ಬೆಳೆಗಾರರಿಗೆ ನಷ್ಟವಾಗಿತ್ತು. ಈಗ ಮಳೆ ಬೀಳುತ್ತಿರುವುದರಿಂದ ಮುಂದಿನ ಸಾಲಿನ ಕಾಫಿ ಫಸಲು ನಷ್ಟವಾಗುತ್ತದೆ ಎಂದು ಕಾಫಿ ಬೆಳೆಗಾರರಾದ ಕಿರಗಂದರೂ ಗ್ರಾಮದ ಗೌತಮ್ ತಿಳಿಸಿದರು.

ಈಗಾಗಲೇ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರು ಕಳೆದ ನಾಲ್ಕು ವರ್ಷಗಳಿಂದ ಸರಿಯಾಗಿ ಫಸಲು ಪಡೆಯಲು ಸಾಧ್ಯವಾಗಿಲ್ಲ. ಮುಂದಿನ ಸಾಲಿನ ಫಸಲಿನ ಕಾಫಿ ಹೂ ಈಗಲೇ ಅರಳುವುದರಿಂದ ಫಸಲು ನಷ್ಟವಾಗುವುದು ಎಂದು ಹಾನಗಲ್ಲು ಗ್ರಾಮದ ಮೋಹನ್ ಹೇಳಿದರು.

ಇಂದೂ ವರುಣಾರ್ಭಟ?

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜ.25ರಂದೂ ಕೊಡಗು ಜಿಲ್ಲೆಯಲ್ಲಿ ಚದುರಿದಂತೆ ಮಳೆ ಸುರಿಯಲಿದೆ ಎಂದು ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.