ADVERTISEMENT

ಸೋಮವಾರಪೇಟೆ: ವಿವಿಧ ಬೇಡಿಕೆ, ಪೌರ ಕಾರ್ಮಿಕರ ಪ್ರತಿಭಟನೆ

ಸ್ವಚ್ಛತಾ ಕಾರ್ಯ, ನೀರು ಸರಬರಾಜು ಕೆಲಸ ಮಾಡುವುದಿಲ್ಲ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 14:14 IST
Last Updated 31 ಮೇ 2025, 14:14 IST
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಎದುರು ಪೌರಕಾರ್ಮಿಕರ ಮುಷ್ಕರದ ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಭೇಟಿ ನೀಡಿ, ಮುಷ್ಕರ ನಿರತರಿಂದ ಆಹವಾಲು ಸ್ವೀಕರಿಸಿದರು
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಎದುರು ಪೌರಕಾರ್ಮಿಕರ ಮುಷ್ಕರದ ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಭೇಟಿ ನೀಡಿ, ಮುಷ್ಕರ ನಿರತರಿಂದ ಆಹವಾಲು ಸ್ವೀಕರಿಸಿದರು   

ಸೋಮವಾರಪೇಟೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸದೆ ಪಟ್ಟಣ ಪಂಚಾಯಿತಿ ಎದುರು ಶನಿವಾರದಿಂದ ಮುಷ್ಕರ ಪ್ರಾರಂಭಿಸಿದರು.

ಬೇಡಿಕೆಯನ್ನು ಈಡೇರಿಸುವವರೆಗೆ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸುವುದಿಲ್ಲ. ಅಲ್ಲದೇ ಜೂನ್‌ 2ರಿಂದ ನೀರು ಸರಬರಾಜು ಕೆಲಸವನ್ನು ಮಾಡುವುದಿಲ್ಲ ಎಂದು ಪೌರ ಕಾರ್ಮಿಕರು ಸ್ಪಷ್ಟಪಡಿಸಿದರು.

‘ಪೌರ ಕಾರ್ಮಿಕರ ಹಲವು ಬೇಡಿಕೆಗಳು ಅನೇಕ ವರ್ಷಗಳಿಂದ ಈಡೇರಿಲ್ಲ. ಸಂಘದ ತೀರ್ಮಾದಂತೆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಲಾಗಿತ್ತು. ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ಮುಷ್ಕರ ಪ್ರಾರಂಭಿಸಿದ್ದೇವೆ’ ಎಂದು ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದ ಸೋಮವಾರಪೇಟೆ ಶಾಖೆ ಅಧ್ಯಕ್ಷ ಬಿ.ಜೆ.ಮಂಜುನಾಥ ತಿಳಿಸಿದರು.

ADVERTISEMENT

‘ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಸವಲತ್ತುಗಳನ್ನು ಯಾವುದೇ ಷರತ್ತುಗಳಿಲ್ಲದೆ ಎಲ್ಲ ಪೌರ ಕಾರ್ಮಿಕರಿಗೂ ನೀಡಬೇಕು. ಪಟ್ಟಣ ಪಂಚಾಯಿತಿ ಮತ್ತು ನಗರಸಭೆಯಲ್ಲಿ ಕೆಲಸ ಮಾಡುವ ಎಲ್ಲಾ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. 2022ನೇ ಸಾಲಿನ ವಿಶೇಷ ನೇಮಕಾತಿ ಅಡಿ ಆಯ್ಕೆಯಾದ ಪೌರಸೇವಾ ನೌಕರರು ಮತ್ತು ಲೋಡರ್ಸ್‌ಗಳಿಗೆ ಎಸ್ಎಫ್‌ಸಿ ವೇತನ ನಿಧಿಯಿಂದ ವೇತನ ಪಾವತಿಸಬೇಕು. ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನು ವಿಶೇಷ ನೇಮಕಾತಿ ಅಡಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

‘ಜ್ಯೋತಿ ಸಂಜೀವಿನಿ, ನಗದು ರಹಿತ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಬೇಕು. ಐ.ಟಿ.ಸಿಬ್ಬಂದಿ, ಅಕೌಂಟ್ ಕನ್ಸಲ್ಟೆಂಟ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕ, ಸ್ಯಾನಿಟರಿ ಸೂಪರ್ವೈಸರ್ ಹಾಗೂ ಇತರೆ ವೃಂದದ ನೌಕರರನ್ನು ಪೌರಸೇವಾ ನೌಕರರೆಂದು ಪರಿಗಣಿಸಬೇಕು ಎಂಬ ಬೇಡಿಕೆಗಳನಿಟ್ಟು ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ’ ಎಂದು ಮಂಜುನಾಥ್ ಹೇಳಿದರು.

ಮುಷ್ಕರ ನಿರತರೊಂದಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಚರ್ಚಿಸಿ, ಮನವಿ ಪತ್ರ ಸ್ವೀಕರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮಹೇಶ್, ಮುಖ್ಯಾಧಿಕಾರಿ ಸತೀಶ್, ಅರೋಗ್ಯ ನಿರೀಕ್ಷ ಕ ಜಾಸಿಂ ಖಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.