ADVERTISEMENT

ಕುಶಾಲನಗರ: ಲಾಕ್‌ಡೌನ್‌ ಪರಿಣಾಮ ತರಕಾರಿ ಬೆಳೆದ ಕೃಷಿಕರಿಗೆ ‘ಬರೆ’

ಹೊಲದಲ್ಲಿಯೇ ಕೊಳೆತ ಹೂಕೋಸು, ಎಲೆಕೋಸು, ಸಿಹಿಗೆಣಸು, ಟೊಮೊಟೊ, ಮೆಣಸಿನಕಾಯಿ

ರಘು ಹೆಬ್ಬಾಲೆ
Published 30 ಮೇ 2021, 19:30 IST
Last Updated 30 ಮೇ 2021, 19:30 IST
ತೊರೆನೂರು ಗ್ರಾಮದಲ್ಲಿ ಗಿಡದಲ್ಲಿಯೇ ಹಣ್ಣಾಗಿರುವ ಮೆಣಸಿನಕಾಯಿ (ಎಡ ಚಿತ್ರ). ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಸೀಗೆಹೊಸೂರಿನಲ್ಲಿ ಬೆಳೆದ ಎಲೆಕೋಸು
ತೊರೆನೂರು ಗ್ರಾಮದಲ್ಲಿ ಗಿಡದಲ್ಲಿಯೇ ಹಣ್ಣಾಗಿರುವ ಮೆಣಸಿನಕಾಯಿ (ಎಡ ಚಿತ್ರ). ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಸೀಗೆಹೊಸೂರಿನಲ್ಲಿ ಬೆಳೆದ ಎಲೆಕೋಸು   

ಕುಶಾಲನಗರ: ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪ, ಜಲ ಪ್ರಳಯ, ಅತಿವೃಷ್ಟಿ, ಕೊರೊನಾ 1ನೇ ಅಲೆ, ಲಾಕ್‌ಡೌನ್, ಬೆಲೆ ಕುಸಿತ ಮೊದಲಾದವುಗಳಿಂದ ನಷ್ಟ ಅನುಭವಿಸಿದ್ದ ರೈತರಿಗೆ ಇದೀಗ ಮತ್ತೆ ಕೊರೊನಾ ಎರಡನೇ ಅಲೆಯ ಲಾಕ್‌ಡೌನ್ ಗಾಯದ ಮೇಲೆ ಬರೆ ಎಳೆದಿದೆ.

ಪರಿಣಾಮಕಾರಿ ಕೊರೊನಾ ಎರಡನೇ ಅಲೆ ಹರಡುವುದನ್ನು ನಿಯಂತ್ರಿಸಲು ಸರ್ಕಾರ ಅನೇಕ ನಿರ್ಬಂಧಗಳನ್ನು ವಿಧಿಸಿದೆ. ಸಭೆ ಸಮಾರಂಭ, ಜಾತ್ರೆ, ಉತ್ಸವ, ಮದುವೆ, ಧಾರ್ಮಿಕ ಆಚರಣೆಗಳು ನಿಷೇಧಿಸಿ ಹೋಟೆಲ್‌ಗಳನ್ನು ಬಂದ್ ಮಾಡಿದೆ. ಇದರಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಾದ ಹೂವು, ಹಣ್ಣು ಹಾಗೂ ತರಕಾರಿಗಳಿಗೆ ಬೇಡಿಕೆ ಕುಸಿದಿದೆ.

ಜೊತೆಗೆ, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕೇಳೋರೆ ಇಲ್ಲದಂತಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇನ್ನೊಂದೆಡೆ ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ, ವ್ಯಾಪಾರಿಗಳು ಕೃಷಿ ಉತ್ಪನ್ನವನ್ನು ಖರೀದಿಸಿ ತಂದು ವ್ಯಾಪಾರ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ತರುವ ಅಲ್ಪಸಲ್ಪ ತರಕಾರಿಯನ್ನು ಹೆಚ್ಚಿನ ಬೆಲೆಗೆ ಮಾರುತ್ತಿರುವುದರಿಂದ ಗ್ರಾಹಕರಿಗೆ ಹೊರೆ ಆಗುತ್ತಿದೆ.

ADVERTISEMENT

ಹೊಲದಲ್ಲಿ ಕೊಳೆಯುತ್ತಿರುವ ತರಕಾರಿ: ಬಯಲು ಸೀಮೆ ಪ್ರದೇಶಗಳಾದ ಹೆಬ್ಬಾಲೆ, ತೊರೆನೂರು, ಅಳುವಾರ, ಸಿದ್ದಲಿಂಗಪುರ, ಮದಲಾಪುರ, ಸೀಗೆಹೊಸೂರು, ಕೂಡಿಗೆ, ಹುದುಗೂರು ಸುತ್ತಮುತ್ತಲಿನ ಗ್ರಾಮಗಳ ರೈತರು ನೂರಾರು ಎಕರೆ ಪ್ರದೇಶಗಳಲ್ಲಿ ಬೆಳೆದಿರುವ ಹೂಕೋಸು, ಎಲೆಕೋಸು,
ಸಿಹಿಗೆಣಸು, ಟೊಮೊಟೊ, ಮೆಣಸಿನಕಾಯಿ ಸೇರಿದಂತೆ ಕಷ್ಟಪಟ್ಟು ಬೆಳೆದ ತರಕಾರಿ ಬೆಳೆಗಳನ್ನು ಈಗ ಮಾರುವುದೇ ಸವಾಲಾಗಿ ಪರಿಣಮಿಸಿದೆ.

ತರಕಾರಿ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಸುರಿದ ಮಳೆಯಿಂದ ಹಾಗೂ ಲಾಕ್‌ಡೌನ್ ಪರಿಣಾಮವಾಗಿ ಕೂಯ್ಲಿಗೆ ಬಂದ ಕೃಷಿ ಉತ್ಪನ್ನಗಳು ಹೊಲದಲ್ಲಿಯೇ ಕೊಳೆಯಿತ್ತಿವೆ. ಇದರಿಂದ ರೈತರು ತೀವ್ರ ಸಂಕಷ್ಟ
ಅನುಭವಿಸುವಂತಾಗಿದೆ.

ನಷ್ಟದ ಸುಳಿಯಲ್ಲಿ ಬೆಳೆಗಾರ: ಲಾಕ್‌ಡೌನ್‌ನಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಜೀವನ ನಡೆಸುವುದು ಕಷ್ಟಕರವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಗಳನ್ನು ರೈತರು ಹಳ್ಳಿಯಿಂದ ಪಟ್ಟಣಕ್ಕೆ ತಂದು ವ್ಯಾಪಾರ ಮಾಡುತ್ತಿದ್ದರು. ಇದೀಗ ವಾರದಲ್ಲಿ ಮೂರು ದಿನ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡಿದ್ದು, ಪಟ್ಟಣಕ್ಕೆ ಬಂದು ಸಂತೆ ನಡೆಸುವಷ್ಟರಲ್ಲಿ ಎಲ್ಲವೂ ಬಂದ್ ಆಗಿರುತ್ತದೆ. ತಂದ ತರಕಾರಿಯನ್ನು ಮಾರಾಟ ಮಾಡಲು ಸಾಧ್ಯವಾಗದೆ ಕೆಲವರು ರಸ್ತೆಯಲ್ಲಿ ಚೆಲ್ಲಿ ಹೋದ ಘಟನೆಗಳು ನಡೆದಿವೆ.

ಸಂತೆ ವ್ಯಾಪಾರಕ್ಕೆ ನಿರ್ಬಂಧ: ಕೊರೊನಾ ಸೋಂಕು ಹರಡದಂತೆ ಜನಸಂದಣಿ ನಿಯಂತ್ರಿಸಲು ಸುತ್ತಮುತ್ತಲ ಗ್ರಾಮಗಳಲ್ಲಿ ನಡೆಯುತ್ತಿದ್ದ ವಾರದ ಸಂತೆಗಳನ್ನು ರದ್ದುಪಡಿಸಲಾಗಿದೆ. ಸ್ವತಃ ಬಂದು ಅಥವಾ ವ್ಯಾಪಾರಿಗಳಿಗೆ ತರಕಾರಿಗಳನ್ನು ಮಾರಿ ಜೀವನ ನಡೆಸಯತ್ತಿದ್ದ ರೈತರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ.

ಸಾರಿಗೆ ವ್ಯವಸ್ಥೆ ಇಲ್ಲದೇ ಬೆಳೆದ ತರಕಾರಿಗಳನ್ನು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಸಾಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಷ್ಟಪಟ್ಟು ಬೆಳೆದ ಬೆಳೆ ಮಣ್ಣುಪಾಲಾಗುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ರೈತರ ಹಿತ ಕಾಯಬೇಕಾದ ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳು ರೈತರ ಪಾಲಿಗೆ ಇಲ್ಲವಾಗಿವೆ. ರೈತರ ಕಷ್ಟಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕೃಷಿಕರು ಬೆಳೆಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲೂ ಆಗದ ಸ್ಥಿತಿಯಲ್ಲಿದ್ದರೂ ಕೂಡ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲ ಎಂಬಂತೆ ಮೌನ ವಹಿಸಿದ್ದಾರೆ. ಇದರಿಂದ ಮಧ್ಯವರ್ತಿಗಳು ಲಾಭ ಪಡೆಯುತ್ತಿದ್ದು, ಗ್ರಾಹಕರ ಮೇಲೆ ಹೊರೆ ಬೀಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.