
ಮಡಿಕೇರಿ: ಹಲವು ಮಂದಿ ನಾಗರಿಕರಿಂದ ಸಾಲು ಸಾಲು ಸಲಹೆಗಳು, ಮನವಿಗಳು ವ್ಯಕ್ತವಾದರೆ, ಅಧಿಕಾರಿಗಳಿಂದ ಪರಿಹಾರದ ಭರವಸೆಗಳಿಗೆ ‘ವಿಷನ್ ಮಡಿಕೇರಿ’ ವೇದಿಕೆಯಾಯಿತು.
ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಕೊಡಗು ಪತ್ರಕರ್ತರ ಸಂಘದಿಂದ ನಡೆದ 'ವಿಷನ್ ಮಡಿಕೇರಿ' ಸಂವಾದದಲ್ಲಿ ಸಮಾಜದ ನಾನಾ ಕ್ಷೇತ್ರದ ಮಂದಿ ಸಮಸ್ಯೆಗಳ ಮಹಾಪೂರವನ್ನೇ ಹರಿಸಿದರು.
ಮೊದಲಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್, ಮಡಿಕೇರಿಯನ್ನು ಸುಂದರ ಹಾಗೂ ಸುರಕ್ಷಿತ ನಗರವನ್ನಾಗಿಸಲು ಭಿನ್ನಾಭಿಪ್ರಾಯ, ಭೇದಭಾವ ಮರೆತು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಂಘದಿಂದ ಹೊರತರಲಾದ ನಮ್ಮ ಮಡಿಕೇರಿ - ನಮ್ಮ ಹೆಮ್ಮೆ ಎಂಬ ಪ್ರವಾಸಿಗರು ಮಡಿಕೇರಿಯಲ್ಲಿ ಅನುಸರಿಸಬೇಕಾದ ನಿಯಮಗಳ ಮಾಹಿತಿ ಪೋಸ್ಟರ್ ಅನ್ನು ಲೋಕಾರ್ಪಣೆಗೊಳಿಸಲಾಯಿತು.
ಅನಧಿಕೃತ ಹೋಂಸ್ಟೇಗಳ ಕಡಿವಾಣಕ್ಕೆ ವಾರ್ಡ್ ಸಮಿತಿ ರಚನೆ, ದಲ್ಲಾಳಿಗಳ ವಿರುದ್ಧ 15 ದಿನಗಳಲ್ಲಿ ಕ್ರಮ, ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಸೇರಿ ಹಲವು ಭರವಸೆಗಳನ್ನು ಅಧಿಕಾರಿಗಳು ನೀಡಿದರು. ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ. ದೇವಯ್ಯ ಮಾತನಾಡಿ, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಪ್ರಸ್ತುತ, ಕನಿಷ್ಠ ಕಾಳಜಿಯೂ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿದೆ ಎಂದರು.
ಇದಕ್ಕೆ ಮುಡಾ ಅಧ್ಯಕ್ಷ ಬಿ.ವೈ.ರಾಜೇಶ್ ಅವರು ಕ್ರೀಡಾಂಗಣದ ಅಭಿವೃದ್ಧಿ ಕಾರ್ಯಗಳ ವಿವರ ನೀಡಿದರು.
ನಗರಸಭೆಯ ಮಾಜಿ ಅಧ್ಯಕ್ಷ ಎಚ್.ಎಂ.ನಂದ ಕುಮಾರ್, ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿನ ತಡೆಗೋಡೆಯ ಬಳಿ 'ಮಡಿಕೇರಿ ಸ್ಕ್ವೇರ್' ನಿರ್ಮಿಸಿ ಎಂದರು.
ತ್ಯಾಜ್ಯ ಎಸೆದವರಿಗೆ ಹೆಚ್ಚಿನ ದಂಡ ವಿಧಿಸಿ ಎಂದು ಪುರಸಭೆಯ ಮಾಜಿ ಸದಸ್ಯ ಟಿ.ಎಂ.ಸತೀಶ್ ಪೈ, ಸಲಹೆ ನೀಡಿದರೆ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮದನ್ ಅವರು ಒಂದು ಲೀಟರ್ ನೀರಿನ ಬಾಟಲ್ ಮಾರಾಟ ನಿಷೇಧಿಸಲಾಗಿದೆ. ಆದರೆ, ಜ್ಯೂಸ್ ಬಾಟಲಿಗಳನ್ನೇನು ಮಾಡುವುದು...? ಎಂದು ಪ್ರಶ್ನಿಸಿದರು.
ಪುರಸಭೆಯ ಮಾಜಿ ಸದಸ್ಯ ಡಾ.ಎಂ.ಜಿ.ಪಾಟ್ಕರ್, ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಖಜಾಂಚಿ ಟಿ.ಕೆ. ಸಂತೋಷ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ಕೊಡಗು ಅಭಿವೃದ್ಧಿ ಸಮಿತಿಯ ಪ್ರಸನ್ನ ಭಟ್, ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ, ನಗರಸಭಾ ಮಾಜಿ ಅಧ್ಯಕ್ಷೆ ಜುಲೈಕಾಬಿ, ಸದಸ್ಯರಾದ ಶ್ವೇತಾ ಪ್ರಶಾಂತ್, ಮೇರಿ ವೇಗಸ್, ಶಾರದಾ ನಾಗರಾಜ್, ಚಿತ್ರಾವತಿ, ಮಿನಾಜ್ ಪ್ರವೀಣ್, ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ. ರವಿ ಕುಮಾರ್, ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್, ಕಾಂಗ್ರೆಸ್ ನಗರಾಧ್ಯಕ್ಷ ಪ್ರಕಾಶ್ ಆಚಾರ್ಯ ಸೇರಿ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.