ADVERTISEMENT

ವಿರಾಜಪೇಟೆ: ಪಕ್ಷೇತರರೇ ಇಲ್ಲಿ ನಿರ್ಣಾಯಕ

ಪಟ್ಟಣ ಪಂಚಾಯಿತಿ ಯಾರಾಗುತ್ತಾರೆ ಅಧ್ಯಕ್ಷ- ಉಪಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 19:30 IST
Last Updated 13 ಮಾರ್ಚ್ 2020, 19:30 IST
ವಿರಾಜಪೇಟೆ ಪಟ್ಟಣ ಪಂಚಾಯಿತಿ
ವಿರಾಜಪೇಟೆ ಪಟ್ಟಣ ಪಂಚಾಯಿತಿ   

ವಿರಾಜಪೇಟೆ: ಕೊನೆಗೂ ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಿದೆ.

ಈ ಮೂಲಕ ಚುನಾವಣೆ ನಡೆದು 16 ತಿಂಗಳುಗಳೇ ಕಳೆದಿದ್ದರೂ ಅಧಿಕಾರ ಪಡೆಯದೇ ಕಂಗಾಲಾಗಿದ್ದ ಆಕಾಂಕ್ಷಿಗಳ ವನವಾಸಕ್ಕೆ ತೆರೆ ಬಿದ್ದಂತಾಗಿದೆ.

ವಿರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಎ’ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ADVERTISEMENT

2018ರ ಅಕ್ಟೋಬರ್‌ನಲ್ಲಿ ಚುನಾವಣೆ ನಡೆದ ಬಳಿಕ ಮೀಸಲಾತಿಯ ಕುರಿತು ಲೆಕ್ಕಾಚಾರದಲ್ಲಿ ತೊಡಗಿದ್ದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಇದೀಗ ಚಟುವಟಿಕೆ ಗರಿಗೆದರಿದೆ.

ಒಟ್ಟು 18 ಮಂದಿ ಚುನಾಯಿತ ಸದಸ್ಯರನ್ನು ಹೊಂದಿರುವ ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ಬಿಜೆಪಿಯ 8, ಕಾಂಗ್ರೆಸ್ 6 ಹಾಗೂ ಜೆಡಿಎಸ್ 1 ಹಾಗೂ 3 ಮಂದಿ ಪಕ್ಷೇತರರು ಆಯ್ಕೆಯಾಗಿದ್ದಾರೆ.

ಇದರಿಂದ ಈ ಬಾರಿ ಪಂಚಾಯಿತಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಪಟ್ಟಣ ಪಂಚಾಯಿತಿಯ 18 ಸದಸ್ಯರು ಹಾಗೂ ಸಂಸದ ಮತ್ತು ಶಾಸಕರಿಗೆ ತಲಾ ಒಂದೊಂದು ಮತ ಚಲಾಯಿಯಿಸುವ ಅಧಿಕಾರವಿದೆ. ಇದರಿಂದ ಅಧಿಕಾರಕ್ಕೇರಲು ಯಾವುದೇ ಗುಂಪು ಅಥವಾ ಆಕಾಂಕ್ಷಿಗೆ 11ರ ಮ್ಯಾಜಿಕ್ ಸಂಖ್ಯೆ ಬೇಕಾಗುತ್ತದೆ. ಸಂಸದ ಹಾಗೂ ಶಾಸಕರ ಬಲದೊಂದಿಗೆ ಬಿಜೆಪಿ 8 ಸದಸ್ಯರೊಂದಿಗೆ 10 ಮತವನ್ನು ಬುಟ್ಟಿಯಲ್ಲಿಟ್ಟುಕೊಂಡಿದ್ದು ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಮ್ಯಾಜಿಕ್ ಸಂಖ್ಯೆ ತಲುಪಲು ಕೊರತೆಯಿರುವ ಒಂದು ಮತಕ್ಕಾಗಿ ಪಕ್ಷೇತರ ಅಭ್ಯರ್ಥಿಯತ್ತ ದೃಷ್ಟಿ ನೆಟ್ಟಿರುವುದು ಸುಳ್ಳಲ್ಲ.

ಇನ್ನೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಂಚಾಯಿತಿಯಲ್ಲಿ ‘ಮೈತ್ರಿ’ ಮಾಡಿಕೊಂಡರೂ ಒಟ್ಟು ಸದಸ್ಯ ಬಲ 7 ಆಗುತ್ತದೆ. ಇದರಿಂದ ಅಧಿಕಾರಕ್ಕೇರುವ ಪೈಪೋಟಿಯಲ್ಲಿ ಉಳಿಯಲು 3 ಮಂದಿ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಪಕ್ಷೇತರವಾಗಿ ಆಯ್ಕೆಗೊಂಡಿರುವ ಹಿಂದೆ ಬಿಜೆಪಿಯಲ್ಲಿದ್ದ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ, ಸಿಪಿಎಂ ಬೆಂಬಲಿತ ಅಭ್ಯರ್ಥಿ ರಜಿನಿಕಾಂತ್ ಹಾಗೂ ಜಲೀಲ್ ಅವರ ಪಾತ್ರ ಈ ಬಾರಿ ನಿರ್ಣಯಕ ಎಂದೆನಿಸಿದೆ.

ಇವರಲ್ಲಿ ಒಬ್ಬರು ಒಲವು ತೋರಿದರೂ ಬಿಜೆಪಿ ಅಧಿಕಾರಕ್ಕೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದುವೇಳೆ ಮೂವರೂ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಪರ ನಿಂತರೆ ಎರಡೂ ಗುಂಪು 10-10 ಮತಗಳನ್ನು ಪಡೆಯುವ ಮೂಲಕ ಸಮಬಲವಾಗುತ್ತದೆ. ಆಗ ಲಾಟರಿ ಮೂಲಕವೇ ಅಧ್ಯಕ್ಷರ ಆಯ್ಕೆ ನಡೆಯಲಿದೆ.

ಮೇಲಿನ ಸಾಧ್ಯತೆಯನ್ನು ಹೊರತುಪಡಿಸಿದರೆ ಮತ್ತೊಂದು ಸಾಧ್ಯತೆಯೆಂದರೆ ಬಿಜೆಪಿ- ಜೆಡಿಎಸ್ ಮೈತ್ರಿ. ಮೇಲ್ನೋಟಕ್ಕೆ ಇದು ಕಷ್ಟಸಾಧ್ಯವೆಂದೆನಿಸಿದರೂ ಇಂದಿನ ರಾಜಕೀಯದಲ್ಲಿ ಯಾವುದು ಕೂಡ ಅಸಾಧ್ಯವಲ್ಲ. ಬಿಜೆಪಿ- ಜೆಡಿಎಸ್ ಮೈತ್ರಿಯಾದರೂ 11 ಮತದ ಮೂಲಕ ಅಧಿಕಾರ ಕೈಗೆಟುಕಲಿದೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಹರ್ಷವರ್ಧನ್ ಹೆಸರು ಮುಂಚೂಣಿಯಲ್ಲಿದೆ. ಜತೆಗೆ ಪಕ್ಷದ ಅನಿತ ಕುಮಾರ್ ಕೂಡ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಡಿ.ಪಿ.ರಾಜೇಶ್, ಮಹಮದ್ ರಾಫಿ ಹಾಗೂ ಪೃಥ್ವಿನಾಥ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.