ADVERTISEMENT

ಶನಿವಾರಸಂತೆ: ಪ್ರವೇಶ ದ್ವಾರದಲ್ಲೇ ಸ್ವಾಗತ ಕೋರುವ ಕಸ

ಮುಕ್ತಿ ಕಾಣದ ಕಸ ವಿಲೇವಾರಿ ಸಮಸ್ಯೆ; ದುರ್ವಾಸನೆಯಿಂದ ಕಂಗೆಟ್ಟ ಸ್ಥಳೀಯರು

ಶ.ಗ.ನಯನತಾರಾ
Published 20 ಜೂನ್ 2022, 3:13 IST
Last Updated 20 ಜೂನ್ 2022, 3:13 IST
ಶನಿವಾರಸಂತೆ ಪಟ್ಟಣದ ಪ್ರವೇಶ ದ್ವಾರದಲ್ಲಿ ಸ್ವಾಗತದ ನಾಮಫಲಕ ದಾಟುತ್ತಿದ್ದಂತೆಯೇ ದುರ್ನಾತ ಬೀರುತ್ತಾ ಸ್ವಾಗತಿಸುವ ಕಸದ ರಾಶಿ
ಶನಿವಾರಸಂತೆ ಪಟ್ಟಣದ ಪ್ರವೇಶ ದ್ವಾರದಲ್ಲಿ ಸ್ವಾಗತದ ನಾಮಫಲಕ ದಾಟುತ್ತಿದ್ದಂತೆಯೇ ದುರ್ನಾತ ಬೀರುತ್ತಾ ಸ್ವಾಗತಿಸುವ ಕಸದ ರಾಶಿ   

ಶನಿವಾರಸಂತೆ: ದಿನದಿಂದ ದಿನಕ್ಕೆ ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಶನಿವಾರಸಂತೆ ಪಟ್ಟಣಕ್ಕೆ ಬರುವವರನ್ನು ಪ್ರವೇಶ ದ್ವಾರದ ಬಳಿ ದುರ್ವಾಸನೆಯೊಂದಿಗೆ ತ್ಯಾಜ್ಯ ರಾಶಿ ಸ್ವಾಗತಿಸುತ್ತದೆ. ಈಗಾಗಲೇ ಹೋಬಳಿ ಕೇಂದ್ರವಾಗಿರುವ ಶನಿವಾರಸಂತೆ ಶರವೇಗದಲ್ಲಿ ಬೆಳೆಯುತ್ತಿದ್ದು, ಇದಕ್ಕೆ ತಕ್ಕಂತೆ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗದೇ ಸಾರ್ವಜನಿಕರು ಪರದಾಡುವಂತಾಗಿದೆ.

ಶನಿವಾರಸಂತೆಯನ್ನು ಪ್ರವೇಶಿ ಸುತ್ತಿದ್ದಂತೆ ‘ಸುಸ್ವಾಗತ’ ಎಂಬ ಬೃಹತ್ ನಾಮಫಲಕ ಸ್ವಾಗತಿಸುತ್ತದೆ. ಅದನ್ನು ದಾಟಿ ಮುಂದೆ ಹೆಜ್ಜೆ ಹಾಕುತ್ತಿದ್ದಂತೆ ದುರ್ವಾಸನೆಯೊಂದಿಗೆ ರಸ್ತೆಯ ಎಡಬದಿಯಲ್ಲಿ ತ್ಯಾಜ್ಯ ರಾಶಿ ಕಣ್ಣಿಗೆ ರಾಚುತ್ತದೆ.

ಪಕ್ಕದಲ್ಲೇ ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗಳಿವೆ. ಇದರ ಪಕ್ಕದಲ್ಲೇ ಇರುವ ತ್ಯಾಜ್ಯ ರಾಶಿಯು ಮಕ್ಕಳು ಹಾಗೂ ರೋಗಿಗಳ ಆರೋಗ್ಯಕ್ಕೂ ಹಾನಿ ತರುತ್ತಿದೆ.

ADVERTISEMENT

ಕಸದ ದುರ್ವಾಸನೆಯೊಂದಿಗೆ ಬೀದಿ ನಾಯಿಗಳ ಕಾಟವೂ ಇಲ್ಲಿ ವಿಪರೀತವಾಗಿದೆ. ಹೋಟೆಲ್, ಕಲ್ಯಾಣ ಮಂಪಟಗಳ ಆಹಾರ ತ್ಯಾಜ್ಯ, ಮಾಂಸದಂಗಡಿಗಳ ತ್ಯಾಜ್ಯದಿಂದ ಹಲವು ಬೀದಿನಾಯಿಗಳು ಇಲ್ಲಿಯೇ ವಾಸವಾಗಿವೆ.

ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು, ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಹಾಗೂ ಪಾದಚಾರಿ ಗಳನ್ನು ಈ ನಾಯಿಗಳು ಅಟ್ಟಿಸಿಕೊಂಡು ಹೋದ ಉದಾಹರಣೆಗಳೂ ಇವೆ. ದಾರಿಹೋಕರು ದುರ್ನಾತ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಗಾಳಿ ಬೀಸಿದಾಗಲೆಲ್ಲ ತ್ಯಾಜ್ಯ ರಾಶಿಯಿಂದ ಕಾಗದ, ಪ್ಲಾಸ್ಟಿಕ್ ಹಾರಿ ರಸ್ತೆಗೆ ಬೀಳುತ್ತವೆ. ನಾಯಿಗಳು ಮಾಂಸ ಇತ್ಯಾದಿ ಕಸವನ್ನು ಬೀದಿಗೆಳೆದು ತರುತ್ತಿವೆ.

ಶನಿವಾರಸಂತೆಯ ತ್ಯಾಜ್ಯ ವಿಲೇವಾರಿಗೆ ಜಾಗ ಗುರುತಿಸಲಾಗಿದೆ ಎಂದು ಜನಪ್ರತಿನಿಧಿಗಳು ಅನೇಕ ವರ್ಷಗಳಿಂದ ಹೇಳುತ್ತಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂಬ ಅಸಮಾಧಾನ ಜನರಲ್ಲಿದೆ.

ಪ್ರತಿ ದಿನ ಬೆಳಿಗ್ಗೆ ಗ್ರಾಮ ಪಂಚಾಯಿತಿ ಪೌರಕಾರ್ಮಿಕರು ಟ್ರಾಕ್ಟರ್‌ನಲ್ಲಿ ಊರಿನ ತ್ಯಾಜ್ಯವನ್ನೆಲ್ಲ ಸಂಗ್ರಹಿಸಿ ತಂದು ಸ್ವಾಗತ ಫಲಕದ ಬಳಿಯೇ, ಆರೋಗ್ಯ ಕೇಂದ್ರಕ್ಕೆ ತೆರಳುವ ರಸ್ತೆ ಪಕ್ಕದಲ್ಲೇ ಸುರಿಯುತ್ತಾರೆ.

‘ಸ್ವಚ್ಛ ಭಾರತ ಯೋಜನೆಯಲ್ಲಿ ರಾಜ್ಯದಲ್ಲೇ ಕೊಡಗು ಜಿಲ್ಲೆ ಎರಡನೇ ಸ್ಥಾನ ಗಳಿಸಿರುವಾಗ ಶನಿವಾರಸಂತೆಯ ಗ್ರಾಮ ಪಂಚಾಯಿತಿ ಈ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಿ. ತ್ಯಾಜ್ಯ ವಿಲೇವಾರಿ ಸ್ಥಳಾಂತರಕ್ಕೆ ಶೀಘ್ರ ಕ್ರಮ ಕೈಗೊಳ್ಳಲಿ. ಜನತೆಯ ಆರೋಗ್ಯ ಕಾಪಾಡಲಿ’ ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾ, ಉಪಾಧ್ಯಕ್ಷ ಎಸ್.ಆರ್.ಮಧು, ಸದಸ್ಯರಾದ ಸರ್ದಾರ್ ಅಹಮ್ಮದ್ ಹಾಗೂ ಎಸ್.ಎನ್.ರಘು ನೇತೃತ್ವದ ನಿಯೋಗವು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರ ಬಳಿ ತೆರಳಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

ಘಟಕ ನಿರ್ಮಾಣ ನನೆಗುದಿಗೆ

ಶನಿವಾರಸಂತೆ ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಕೆಲ ವರ್ಷಗಳಿಂದ ಪ್ರಯತ್ನ ನಡೆಯುತ್ತಿದ್ದರೂ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳವಿಲ್ಲದ ಕಾರಣ, ಪಕ್ಕದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದಿನ ಜಿಲ್ಲಾಧಿಕಾರಿ ಸ್ಥಳ ಗುರುತಿಸಿದ್ದರು. ಅಲ್ಲಿನ ಜನಪ್ರತಿನಿಧಿಗಳ ಹಾಗೂ ಗ್ರಾಮಸ್ಥರ ವಿರೋಧದಿಂದ ಘಟಕ ನಿರ್ಮಾಣ ನನೆಗುದಿಗೆ ಬಿದ್ದಿದೆ. ರಾಜಕೀಯ ಕಾರಣದಿಂದ ಎರಡು ಪಂಚಾಯಿತಿಗಳ ಸಂಘರ್ಷದಿಂದ ಶನಿವಾರಸಂತೆಯ ಕೆಲ ನಾಗರಿಕರು ಪಟ್ಟ ಪ್ರಯತ್ನವೂ ವಿಫಲವಾಗಿದೆ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿದೆ.

***

ದುಂಡಳ್ಳಿ ಗ್ರಾ.ಪಂ ವ್ಯಾಪ್ತಿಯ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವ ಭರವಸೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಿಂದ ದೊರೆತಿದೆ.

–ಸರ್ದಾರ್ ಅಹಮ್ಮದ್, ಗ್ರಾಮ ಪಂಚಾಯಿತಿ ಸದಸ್ಯ

***

ಪಟ್ಟಣದ ತ್ಯಾಜ್ಯ ವಿಲೇವಾರಿ ಸಮಸ್ಯೆ ಗಂಭೀರವಾಗಿದ್ದು, ಅದರ ನಿವಾರಣೆಗೆ ಶಾಸಕರು ಮುಂದಾಳತ್ವ ವಹಿಸಬೇಕು. ರಾಜಕೀಯ, ಪಕ್ಷಭೇದ ಮರೆತು ಸಂಘಟಿತರಾಗಿ ಕೆಲಸ ಮಾಡಬೇಕು

–ಬಿ.ಟಿ.ರಂಗಸ್ವಾಮಿ, ಬೆಳೆಗಾರ, ಶನಿವಾರಸಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.