ADVERTISEMENT

ಕೊಡಗು| ಏರಿದ ತಾಪಮಾನ 3 ದಿನಗಳಿಗೊಮ್ಮೆ ನೀರು!

ನದಿಯಲ್ಲಿ ಕಡಿಮೆಯಾಗುತ್ತಿದೆ ನೀರಿನ ಮಟ್ಟ, ಬತ್ತುತ್ತಿವೆ ಕೊಳವೆಬಾವಿಗಳು,

ರೆಜಿತ್ ಕುಮಾರ್
Published 11 ಏಪ್ರಿಲ್ 2023, 5:53 IST
Last Updated 11 ಏಪ್ರಿಲ್ 2023, 5:53 IST
ಜನಪರ ಯುವಕ ಸಂಘ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮರದಲ್ಲಿ ಮಣ್ಣಿನ ಮಡಿಕೆ ಅಳವಡಿಸಿ, ನೀರು ಹಾಕಿದರು.
ಜನಪರ ಯುವಕ ಸಂಘ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮರದಲ್ಲಿ ಮಣ್ಣಿನ ಮಡಿಕೆ ಅಳವಡಿಸಿ, ನೀರು ಹಾಕಿದರು.   

ಸಿದ್ದಾಪುರ: ಬೇಸಿಗೆ ಆರಂಭವಾಗುತ್ತಿದ್ದಂತೆ ಸಿದ್ದಾಪುರ ಭಾಗದಲ್ಲೂ ಸಮಸ್ಯೆ ಎದುರಾಗಿದೆ. ಕಾವೇರಿ ನದಿ ಬತ್ತುತ್ತಿದ್ದು, ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಆತಂಕ ಎದುರಾಗಿದೆ.

ಸಿದ್ದಾಪುರ ಭಾಗದ ಗ್ರಾಮ ಪಂಚಾಯಿತಿ ನಿರ್ವಹಣೆ ಮಾಡುತ್ತಿರುವ ವಿವಿಧ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ದಿಡ್ಡಳ್ಳಿ ವ್ಯಾಪ್ತಿಯ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ 3 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಗುಹ್ಯ ಹಾಗೂ ಕರಡಿಗೋಡು ವ್ಯಾಪ್ತಿಯಲ್ಲೂ ನೀರಿನಮಟ್ಟ ಕಡಿಮೆ ಇದ್ದು, 3 ದಿನಕ್ಕೊಮ್ಮೆ ನೀರು ಪೂರೈಸಲು ಚಿಂತಿಸಲಾಗುತ್ತಿದೆ. ದುಬಾರೆ ಹಾಡಿಯಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ದೂರದ ನದಿಯಿಂದಲೇ ಕುಡಿಯುವ ನೀರನ್ನು ಹೊತ್ತು ಸಾಗಬೇಕಾದ ಸ್ಥಿತಿ ಸೃಷ್ಟಿಯಾಗಿದೆ.

ಬಿಸಿಲ ಬೇಗೆಗೆ ಕಾವೇರಿ ನದಿ ಬತ್ತಲಾರಂಭಿಸಿದ್ದು, ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ. ನದಿಗೆ ಸೇರಬೇಕಿದ್ದ ಸಣ್ಣ ತೋಡುಗಳು, ಜಲಮೂಲಗಳು ಬಿಸಿಲಿನಿಂದಾಗಿ ಸಂಪೂರ್ಣ ಬತ್ತಿವೆ. ಮತ್ತೊಂದೆಡೆ ಕಾಫಿ ಬೆಳೆಗಾರರು ಕಾಫಿ ತೋಟಗಳಿಗೆ ನದಿಯಿಂದ ನೀರು ಹಾಯಿಸುತ್ತಿದ್ದು, ನದಿ ನೀರಿನ ಇಳಿಕೆಗೆ ಇದೂ ಕಾರಣವಾಗಿದೆ. ನದಿ ದಡದ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ಬಿಸಿಲು ಮುಂದುವರೆದರೆ ನೀರಿನ ಹರಿವು ನಿಲ್ಲುವ ಸಾಧ್ಯತೆ ಇದೆ.

ADVERTISEMENT

ಮಾಲ್ದಾರೆ ಅರಣ್ಯ ವ್ಯಾಪ್ತಿಯಲ್ಲಿ ಮಾಲ್ದಾರೆ ಜನಪರ ಯುವಕ ಸಂಘ ಹಾಗೂ ಅರಣ್ಯ ಇಲಾಖೆ ವತಿಯಿಂದ ಪಕ್ಷಿಗಳಿಗೆ ಮಡಿಕೆಯಲ್ಲಿ ನೀರನ್ನು ಒದಗಿಸುವ ವಿನೂತನ ಪ್ರಯತ್ನ ಮಾಡಲಾಗಿದೆ. ಅರಣ್ಯ ವ್ಯಾಪ್ತಿಯ ಮರಗಳಿಗೆ ಮಡಿಕೆಯನ್ನು ಕಟ್ಟಿದ್ದು, ಮಡಿಕೆಗಳಿಗೆ ನೀರು ಹಾಕಲಾಗುತ್ತಿದೆ. ಪಕ್ಷಿಗಳಿಗೆ ನೀರು ಒದಗಿಸುವ ಯುವಕರ ತಂಡದ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ವಿಪರೀತ ತಾಪದಿಂದಾಗಿ ಅರಣ್ಯದಲ್ಲಿನ ಕೆಲವು ಕೆರೆಗಳ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ವನ್ಯಪ್ರಾಣಿಗಳಿಗೂ ಹಾಹಾಕಾರ ಆರಂಭವಾಗಿದೆ. ಕಾಡಾನೆಗಳು ಸೇರಿದಂತೆ ಕಾಡು ಪ್ರಾಣಿಗಳಿಗೆ ಪ್ರತಿ ದಿನ ಯಥೇಚ್ಛ ನೀರಿನ ಅಗತ್ಯವಿದ್ದು, ನೀರಿಗಾಗಿ ದೂರದ ಪ್ರದೇಶಗಳಿಗೆ ತೆರಳಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ.

ವಿರಾಜಪೇಟೆ; ಟ್ಯಾಂಕರ್‌ನಲ್ಲಿ ನೀರು ಪೂರೈಕೆ

ವಿರಾಜಪೇಟೆ ತಾಲ್ಲೂಕಿನಲ್ಲೂ ನೀರಿನ ಬವಣೆ ಆರಂಭವಾಗಿದ್ದು, ಪಟ್ಟಣದಲ್ಲಿ ಒಟ್ಟು 3 ಬಡಾವಣೆಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮಳೆ ಇಲ್ಲದ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಇನ್ನು 10ರಿಂದ 15 ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆಗಳಿವೆ.

ಒಟ್ಟು ಪಟ್ಟಣದಲ್ಲಿ 24 ಕೊಳವೆಬಾವಿಗಳಿವೆ. ಇವುಗಳಲ್ಲಿ 3 ಕೊಳವೆಬಾವಿಗಳು ಸಂ‍ಪೂರ್ಣ ಬತ್ತಿವೆ. ಹೀಗಾಗಿ, ನೆಹರೂ ನಗರ, ಮೊಗರಗಲ್ಲಿ ಹಾಗೂ ಗೌರಿಕೆರೆ ಬಡಾವಣೆಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ಭೇತ್ರಿ ಗ್ರಾಮದ ಸಮೀಪ ಕಾವೇರಿ ನದಿಯಿಂದ ನೀರನ್ನು ಪಂಪ್‌ ಮಾಡುವುದಕ್ಕೂ ಸಮಸ್ಯೆ ಎದುರಾಗಿದೆ. ನದಿ ನೀರಿನ ಮಟ್ಟ ದಿನೇ ದಿನೇ ತಳ ಸೇರುತ್ತಿದೆ. ಸಮರ್ಪಕವಾಗಿ ಪಂಪ್‌ ಮಾಡಲು ಸಾಧ್ಯವಾಗದೇ ನೀರು ಪೂರೈಕೆಯಲ್ಲಿ ಆಗಾಗ್ಗೆ ವ್ಯತ್ಯಯವಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ ವಿರಾಜಪೇಟೆ ಪುರಸಭೆಯ ಮುಖ್ಯಾಧಿಕಾರಿ ಚಂದ್ರಮೋಹನ್‌ ಸಂಪರ್ಕಿಸಿದಾಗ ಅವರು, ‘ಸದ್ಯ 3 ಕಡೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದೇವೆ. ಎಲ್ಲೂ ನೀರಿನ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಕಾವೇರಿ ನದಿಯಲ್ಲಿ ನೀರಿನಮಟ್ಟ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಕೊಳವೆಬಾವಿಗಳಲ್ಲೂ ನೀರು ಕಡಿಮೆಯಾಗುತ್ತಿದೆ. ಇನ್ನು 15 ದಿನಗಳವರೆಗೆ ಮಳೆಯಾಗದೇ ಹೋದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.