ADVERTISEMENT

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿದ ಥಂಡಿ

ಕುಸಿದ ತಾಪಮಾನ, ಶೀತಗಾಳಿಗೆ ಥರಗುಟ್ಟಿದ ಜನ, ಬೆಳೆಗಳ ಬೆಳವಣಿಗೆಗೂ ಆತಂಕ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 4:02 IST
Last Updated 20 ಡಿಸೆಂಬರ್ 2021, 4:02 IST
ಬಸವರಾಜ ಬಿರಾದಾರ
ಬಸವರಾಜ ಬಿರಾದಾರ   

ಕಲಬುರಗಿ: ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ತೀವ್ರ ಕುಸಿತ ಕಂಡಿದೆ. ವಿಪರೀತ ಚಳಿ ಗಾಳಿ ಬೀಸುತ್ತಿದೆ. ಬಿಸಿಲೂರಿನ ಜನ ಮೈ ಕೊರೆಯುವ ಚಳಿಗೆ ಥರಗುಟ್ಟಿದ್ದಾರೆ.

‘ಜನವರಿ ಮೊದಲ ವಾರದ ವೇಳೆಗೆ ಉಷ್ಣಾಂಶ ಇನ್ನೂ ಕುಸಿಯಲಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ತಜ್ಞರು ತಿಳಿಸಿದ್ದಾರೆ.

‘ವಾಡಿಕೆ ಪ್ರಕಾರ, ಡಿಸೆಂಬರ್‌ ಅಂತ್ಯದ ವೇಳೆ ಚಳಿ ಕಡಿಮೆಯಾಗಬೇಕು. ಆದರೆ, ಹವಾಮಾನದಲ್ಲಿ ಆದ ಬದಲಾವಣೆ ಕಾರಣ ಚಳಿ ದಿನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸಕ್ತ ವರ್ಷ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಕಡೆ ವಾಡಿಕೆಗಿಂತ ಅಧಿಕ ಮಳೆಯಾದ ಕಾರಣ ಭೂಮಿಯಲ್ಲಿ ಹೆಚ್ಚಿನ ತೇವಾಂಶವಿದೆ. ಇದೇ ಕಾರಣಕ್ಕೆ ಚಳಿಯೂ ಹೆಚ್ಚಾಗಿದೆ’ ಎನ್ನುವುದು ವಿಜ್ಞಾನಿಗಳ
ಅನಿಸಿಕೆ.

ADVERTISEMENT

ಉಷ್ಣಾಂಶವು ಭಾನುವಾರ ಕಲಬುರಗಿಯಲ್ಲಿ ಕನಿಷ್ಠ 13 ಡಿಗ್ರಿ ಮತ್ತು ಬೀದರ್‌ನಲ್ಲಿ 11 ಡಿಗ್ರಿಗೆ ಕುಸಿಯಿತು. ಕಳೆದ ವರ್ಷಡಿಸೆಂಬರ್‌ 20ರವರೆಗೂ ಕಲಬುರಗಿಯಲ್ಲಿ ಕನಿಷ್ಠ ಉಷ್ಣಾಂಶ 17 ಡಿಗ್ರಿ ಹಾಗೂ ಬೀದರ್‌ನಲ್ಲಿ 14 ಡಿಗ್ರಿ ಆಸುಪಾಸು ದಾಖಲಾಗಿತ್ತು. ಕಲಬುಗರಗಿಯಲ್ಲಿ 2018ರ ಡಿ.20ರಂದು ಗರಿಷ್ಠ 33 ಡಿಗ್ರಿ ಮತ್ತು ಕನಿಷ್ಠ 18 ಡಿಗ್ರಿ, 2019ರಂದು ಗರಿಷ್ಠ 32 ಡಿಗ್ರಿ ಮತ್ತು ಕನಿಷ್ಠ 19 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು.

ಈ ಎರಡೂ ಜಿಲ್ಲೆಗಳನ್ನು ಕೇಂದ್ರವಾಗಿ 100 ಕಿ.ಮೀ ವರೆಗಿನ ಎಲ್ಲ ಕಡೆ ಇಷ್ಟೇ ಪ್ರಮಾಣದ ತಾಪಮಾನ ದಾಖಲಾಗುತ್ತದೆ ಎನ್ನುವುದು ಭಾರತೀಯ ಹವಾಮಾನ ಇಲಾಖೆಯ ಮಾಹಿತಿ.

ಥರಗುಟ್ಟಿದ ಜನ: ಡಿಸೆಂಬರ್‌ ಆರಂಭದಿಂದಲೂ ಹಿತಕರವಾಗಿದ್ದ ಬಿಸಿಲೂರಿನ ಚಳಿ ಈಗ ಚರ್ಮ ಸುಕ್ಕುಗಟ್ಟುವಂತೆ ಮಾಡಿದೆ. ಮೂಲೆ ಸೇರಿದ್ದ ಸ್ವೆಟರ್, ಜರ್ಕಿನ್, ಮಫ್ಲರ್, ಉಲನ್‌ ಟೊಪ್ಪಿಗೆ, ಸ್ಕಾರ್ಪ್‌, ಕಿವಿ ಪಟ್ಟಿ, ಮಂಕಿಕ್ಯಾಪ್‌ ಮೈಕೊಡವಿಕೊಂಡು ಎದ್ದಿವೆ. ಏರ್‌ಕೂಲರ್‌ಗಳ ವ್ಯಾಪಾರವೇ ಹೆಚ್ಚಾಗಿ ಕಾಣಿಸುತ್ತಿದ್ದ ಮಳಿಗೆಗಳಲ್ಲಿ ಈಗ ಉಣ್ಣೆಯ ಬಟ್ಟೆಗಳ ವ್ಯಾಪಾರ ಜೋರಿದೆ.

*

ಬೆಳೆಗಳ ಮೇಲೆ ಏನು ಪರಿಣಾಮ?

ಪರಿಸರದಲ್ಲಿ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ಗೆ ಕುಗ್ಗಿದರೆ ಬೆಳೆಗಳ ಬೆಳವಣಿಗೆ ಕುಂಠಿತವಾಗುತ್ತದೆ. ಸಾಮಾನ್ಯವಾಗಿ ರಾತ್ರಿಯೇ ಶೀತಗಾಳಿ ಹೆಚ್ಚಾಗುವುದರಿಂದ ನೆಲದ ಸತ್ವಕ್ಕೆ ಪೆಟ್ಟು ಬೀಳಬಹುದು. ಪೋಷಕಾಂಶಗಳ ಕೊರತೆಯಿಂದ ಸಸಿಗಳ ಬೆಳವಣಿಗೆ ಕುಂಠಿತವಾಗುತ್ತದೆ. ಕೀಟ ಹಾಗೂ ರೋಗಬಾಧೆ ಕೂಡ ಹೆಚ್ಚಬಹುದು.

ತೊಗರಿ, ಜೋಳ, ಹತ್ತಿ, ಜೇಣು ಕೃಷಿ, ತೋಟಗಾರಿಕೆ ಬೆಳಗಳಿಗೆ ಇದರಿಂದ ಹೆಚ್ಚು ತೊಂದರೆ ಉಂಟಾಗಬಹುದು.

ಪರಿಹಾರ ಏನು?:ಬೆಳೆಗಳನ್ನು ಬೆಚ್ಚಗೆ ಇಡಬೇಕಾದರೆ 19:19:19 (ನೈಂಟೀನ್‌ ಆಲ್‌) ಅನ್ನು ಸಿಂಪಡಿಸಬೇಕು. ಒಂದು ಲೀಟರ್‌ ನೀರಿನಲ್ಲಿ 5 ಗ್ರಾಂ ಮಾತ್ರ ನೈಂಟೀನ್‌ ಆಲ್‌ ಬೆರೆಸಿ ಸಿಂಪಡಿಸಿದರೆ ಸಾಕು.ಒಂದು ಲೀಟರ್ ನೈಂಟಿನಾಲ್‌ ಒಂದು ಎಕರೆಗೆ ಸಾಲುತ್ತದೆ ಎನ್ನುವುದು ಕೃಷಿ ವಿಜ್ಞಾನ ಕೇಂದ್ರದ ತಜ್ಞರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.