ಮಡಿಕೇರಿ ಸಮೀಪದ ಅಬ್ಬಿ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಬುಧವಾರ ಮಳೆಯಲ್ಲೇ ನೆರೆದಿದ್ದರು.
ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮೈಸೂರು: ರಾಜ್ಯದ ಕರಾವಳಿ ಜಿಲ್ಲೆಗಳು, ಮಲೆನಾಡು ಪ್ರದೇಶ ಸೇರಿದಂತೆ ಹಲವೆಡೆ ಬುಧವಾರ ವರುಣನ ಅಬ್ಬರ ಮುಂದುವರಿದಿದೆ. ಮೈಸೂರು ಭಾಗದ ಮಡಿಕೇರಿ ಮತ್ತು ಹಾಸನದಲ್ಲಿ ಮಳೆಯು ಬಿರುಗಾಳಿಯೊಂದಿಗೆ ಸುರಿಯಿತು.
ಸಕಲೇಶಪುರ ತಾಲ್ಲೂಕಿನ ಬಾಣಗೇರಿ ಗ್ರಾಮದ ಬಳಿ ಸೇತುವೆ ಮೇಲೆ ನೀರು ಹರಿದಿದ್ದರಿಂದ ಬಾಣಗೇರಿ, ಹೆತ್ತೂರು, ಬ್ಯಾಕರದಳ್ಳಿ, ವನಗೂರು ಕೂಡು ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ಕೊಡಗಿನಲ್ಲಿ ಮೇ 29ರಂದೂ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಹಲವೆಡೆ ಮಳೆ ಮುಂದುವರಿದಿದೆ.
ಕಲಬುರಗಿ ನಗರದಲ್ಲಿ ಸಂಜೆ ಅರ್ಧ ತಾಸು ಬಿರುಸಿನ ಮಳೆ ಸುರಿಯಿತು. ಜಿಲ್ಲೆಯ ಕಾಳಗಿ ಹಾಗೂ ಚಿತ್ತಾಪುರ ತಾಲ್ಲೂಕಿನ ಹಲವೆಡೆ ಉತ್ತಮ ಮಳೆಯಾಗಿದೆ.
ಬೀದರ್ ನಗರ, ಕಮಲನಗರ ಪಟ್ಟಣದದಲ್ಲಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಸತತ ಮಳೆಗೆ ಮಾಂಜ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು, ಔರಾದ್ ತಾಲ್ಲೂಕಿನ ಕೌಠಾ (ಬಿ) ಸೇತುವೆ ಸಮೀಪದಿಂದ ಬೀದರ್ ತಾಲ್ಲೂಕಿನ ಇಸ್ಲಾಂಪುರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿಯುತ್ತಿದೆ.
ರಾಯಚೂರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಳೆಯಾಗಿದೆ. ಯಾದಗಿರಿ ನಗರದಲ್ಲಿ ಸಾಧಾರಣ ಮಳೆಯಾಗಿದೆ. ತಾಲ್ಲೂಕಿನ ಹತ್ತಿಕುಣಿ, ಹೊನಗೇರಾ, ಕಟಗಿ ಶಾಪುರ, ಮಲ್ಕಪ್ಪನಳ್ಳಿ, ಅಚ್ಚೋಲ, ಅರಕೇರಾ, ಮುದ್ನಾಳ, ಬಸವಂತಪುರ, ಗ್ರಾಮಗಳಲ್ಲಿ ಜೋರು ಮಳೆಯಾಗಿದೆ. ಶಹಾಪುರ, ಗುರುಮಠಕಲ್, ಸೈದಾಪುರ, ಸುರಪುರ, ಹುಣಸಗಿ, ವಡಗೇರಾ, ಕೆಂಭಾವಿಯಲ್ಲಿ ವರ್ಷಧಾರೆ ಮುಂದುವರೆದಿದೆ.
ಸತತ ಮಳೆಯಿಂದಾಗಿ ಕಲಬುರಗಿ ನಗರದ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ದಿನವಿಡೀ ಸುರಿದ ಮಳೆ, ಸಂಜೆ ಬಳಿಕ ಮಳೆ ಬಿರುಸು ಪಡೆಯಿತು. ಜೊತೆಗೆ ಗಾಳಿಯ ವೇಗವೂ ಹೆಚ್ಚಾಯಿತು.
ಮಳೆ ಗಾಳಿಯ ಅಬ್ಬರದ ಪರಿಣಾಮ ಅಂಕೋಲಾ ತಾಲ್ಲೂಕಿನ ಹಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಂಗಮೇಟ ಮಜರೆಯಲ್ಲಿ ಕಡಲು ಕೊರೆತ ಆರಂಭಗೊಂಡಿದೆ. ಕೆಲ ತಿಂಗಳ ಹಿಂದೆ ನಿರ್ಮಿಸಿದ್ದ ಅಲೆ ತಡೆಗೋಡೆಯು ಅಲೆಗಳ ಅಬ್ಬರಕ್ಕೆ ಸಮುದ್ರ ಪಾಲಾಗಿದೆ.
‘ಕಳೆದ ವರ್ಷ ಕಡಲುಕೊರೆತದಿಂದ ಹಲವು ಮನೆಗಳಿಗೆ ಹಾನಿ ಆಗಿತ್ತು. ಮನೆ ಕಳೆದುಕೊಂಡವರನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ಕೊರೆತ ತಡೆಯಲು ತಡೆಗೋಡೆ ನಿರ್ಮಿಸಿದ್ದರೂ ಮಳೆಗಾಲದ ಆರಂಭದಲ್ಲೇ ಅವು ನಾಶವಾಗಿವೆ. ಸಮೀಪದ ಇನ್ನಷ್ಟು ಮನೆಗಳು ಸಮುದ್ರ ಪಾಲಾಗುವ ಆತಂಕವಿದೆ’ ಎಂದು ಹಾರವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ದುರ್ಗೇಕರ ಹೇಳಿದರು.
ಮಹಿಳೆ ಕಾರು ಚಾಲಕ ಸಾವು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ದಿನವಿಡೀ ಮಳೆಯಾಗಿದೆ. ಸ್ವಲ್ಪ ಹೊತ್ತು ಧಾರಾಕಾರ ಸುರಿದರೆ ನಂತರ ಸ್ವಲ್ಪ ಹೊತ್ತು ಹದವಾಗಿ ಸುರಿಯುತ್ತಿತ್ತು. ಮಳೆಯಿಂದಾಗಿ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಮೂಡುಬಿದಿರೆ ಸಮೀಪದ ಇರುವೈಲಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತುಳಿದು ಲಿಲ್ಲಿ ಡಿಸೋಜ (52) ಎಂಬುವರು ವಿದ್ಯುತ್ ಅಘಾತದಿಂದ ಮೃತಪಟ್ಟಿದ್ದಾರೆ. ಗಾಳಿ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಅವರ ಮನೆಯ ಕೊಟ್ಟಿಗೆಯ ಬಳಿ ನೆಲಕ್ಕೆ ಬಿದ್ದಿತ್ತು. ಅದನ್ನು ಗಮನಿಸದ ಮಹಿಳೆ ವಿದ್ಯುತ್ ತಂತಿ ಮೇಲೆ ಕಾಲಿಟ್ಟಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಗರದ ಕೊಟ್ಟಾರ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಮಳೆ ನೀರು ಹರಿಯುವ ಕಾಲುವೆಗೆ ಬಿದ್ದಿದೆ. ಕಾರು ಚಲಾಯಿಸುತ್ತಿದ್ದ ವಿಡಿಯೊಗ್ರಾಫರ್ ಕಾಸರಗೋಡು ಜಿಲ್ಲೆಯ ಉಪ್ಪಳದ ಸೂರ್ಯನಾರಾಯಣ (49) ಮೃತಪಟ್ಟಿದ್ದಾರೆ.
ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ವಿಡಿಯೋಗ್ರಫಿ ಮಾಡಲು ತೆರಳುತ್ತಿದ್ದರು. ಅವರೇ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಕಾಲುವೆಗೆ ಉರುಳಿ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ರೆಡ್ ಅಲರ್ಟ್: ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು ಮೇ 29ರಂದು ಶಿಕ್ಷಣ ಸಂಸ್ಥೆಗಳು ಟ್ಯೂಷನ್ ಕೇಂದ್ರಗಳು ಅಂಗನವಾಡಿಗಳು ಮದರಸಾಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ಇನ್ಬಶೇಖರ್ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.