ADVERTISEMENT

ಮುಂದಿನ ಎರಡು ದಿನ ರೆಡ್‌ ಅಲರ್ಟ್

ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ, ದುಬಾರೆಗೆ ಪ್ರವಾಸಿಗರ ಪ್ರವೇಶ ನಿಷೇಧ

​ಪ್ರಜಾವಾಣಿ ವಾರ್ತೆ
Published 28 ಮೇ 2025, 15:37 IST
Last Updated 28 ಮೇ 2025, 15:37 IST

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಬಿರುಸು ತಗ್ಗಿದ್ದರೂ ನಿಂತಿಲ್ಲ. ಅಲ್ಲಲ್ಲಿ ಬಿಟ್ಟು ಬಿಟ್ಟು ಬಿರುಸಿನಿಂದ ಸುರಿಯುತ್ತಿದೆ. ಗಾಳಿಯೂ ವೇಗವಾಗಿ ಬೀಸುತ್ತಿದ್ದು, ಆತಂಕ ದೂರವಾಗಿಲ್ಲ. ಈ ನಡುವೆ ಹವಾಮಾನ ಇಲಾಖೆ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆ ಬೀಳುವ ಮುನ್ನಚ್ಚರಿಕೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ.

ಇದರ ಬೆನ್ನಲ್ಲೇ ಜಿಲ್ಲಾಡಳಿತ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳು, ಅಂಗನವಾಡಿಗಳು, ಪಿಯು ಕಾಲೇಜುಗಳಿಗೆ ಮೇ 29 ಮತ್ತು 30ರಂದು ರಜೆ ಘೋಷಿಸಿದೆ. ಇದರಿಂದ ಶಾಲಾ ಪ್ರಾರಂಭೋತ್ಸವೂ ಮುಂದೂಡಿಕೆಯಾಗಿದೆ. ಆದರೆ, ಎಸ್‌ಎಸ್‌ಎಲ್‌ಸಿ –2 ಪರೀಕ್ಷೆಗಳು ಎಂದಿನಂತೆ ನಡೆಯುತ್ತವೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.

ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ADVERTISEMENT

ಮತ್ತೊಂದೆಡೆ, ಬೇಸಿಗೆಯಲ್ಲೇ ಬಂದಿರುವ ಮಳೆಗಾಲದಂತಹ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಮಡಿಕೇರಿ ಸಮೀಪ‍ದ ಅಬ್ಬಿ ಫಾಲ್ಸ್ ಬುಧವಾರ ಪ್ರವಾಸಿಗರಿಂದ ತುಂಬಿ ಹೋಗಿತ್ತು.

ಮಳೆಯ ಬಿರುಸು ಭಾನುವಾರ, ಸೋಮವಾರಕ್ಕೆ ಹೋಲಿಸಿದರೆ ತಗ್ಗಿದೆ ಎಂದು ಅನ್ನಿಸಿದರೂ ಮಳೆ ನಿಂತಿಲ್ಲ. ನಿರಂತರವಾಗಿ  ಮಳೆ ಸುರಿಯುತ್ತಲೇ ಇರುವುದರಿಂದ ಜನಜೀವನ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ವೇಗವಾಗಿ ಬೀಸುತ್ತಿರುವ ಗಾಳಿಯಿಂದ ದುರಸ್ತಿ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಸೆಸ್ಕ್ ಮನವಿ ಮಾಡಿದೆ. ಇದರಿಂದ ಅನೇಕ ಗ್ರಾಮಗಳು, ಮಡಿಕೇರಿಯ ಹಲವು ಬಡಾವಣೆಗಳಿಗೆ ವಿದ್ಯುತ್ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ. ವಿದ್ಯುತ್ ಇಲ್ಲದೇ ಜನಜೀವನ ನಿಜಕ್ಕೂ ಹೈರಣಾಗಿದೆ.

ಮಡಿಕೇರಿಯ ಟಿ.ಜಾನ್ ಲೇಔಟ್‌ನ ಹಲವು ಮನೆಗಳಿಗೆ ಕಳೆದೆರಡು ದಿನಗಳಿಂದ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ. ಇದರಿಂದ ಮಳೆ ನೀರನ್ನೇ ಪಾತ್ರೆ ತೊಳೆಯಲು ಉಪಯೋಗಿಸುವ ಸನ್ನಿವೇಶ ಸೃಷ್ಟಿಯಾಗಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಶೀತಮಯ ವಾತಾವರಣ ಸೃಷ್ಟಿಯಾಗಿದೆ. ಬೀಸುತ್ತಿರುವ ಗಾಳಿಗೆ ಜನರು ನಡುಗುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.