ADVERTISEMENT

ಪತಿಯ ಹತ್ಯೆಗಾಗಿ ಕಾರು ಖರೀದಿಸಿದ್ದ ಪತ್ನಿ! ಪ್ರಿಯಕರನ ಜೊತೆ ಸೇರಿ ಕೊಲೆ

ಸುಳುಗಳಲೆ ನಿವಾಸಿ ಸಂತೋಷ್ ಹತ್ಯೆ ಪ್ರಕರಣ, ಶ್ರುತಿ ಬಂಧನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 4:02 IST
Last Updated 7 ಜನವರಿ 2022, 4:02 IST
ಶನಿವಾರಸಂತೆಯ ಸುಳುಗಳಲೆ ಕಾಲೋನಿಯ ಗೃಹಿಣಿ ಶ್ರುತಿ ಸ್ವತಃ ತಾನೇ ಕೊಲೆ ಮಾಡಿಸಿದ ಪತಿ ಸಂತೋಷ್ ಜತೆಗಿರುವ ಭಾವಚಿತ್ರ
ಶನಿವಾರಸಂತೆಯ ಸುಳುಗಳಲೆ ಕಾಲೋನಿಯ ಗೃಹಿಣಿ ಶ್ರುತಿ ಸ್ವತಃ ತಾನೇ ಕೊಲೆ ಮಾಡಿಸಿದ ಪತಿ ಸಂತೋಷ್ ಜತೆಗಿರುವ ಭಾವಚಿತ್ರ   

ಶನಿವಾರಸಂತೆ: ಸುಳುಗಳಲೆಯ ಸಂತೋಷ್‌‌ ಹತ್ಯೆಗಾಗಿ ಆತನ ಪತ್ನಿ ಶ್ರುತಿ ಹೊಸ ಕಾರು ಖರೀದಿಸಿ, ಪ್ರಿಯಕರ ಚಂದ್ರಶೇಖರ್‌‌ ಜೊತೆ ಸೇರಿ ಸಂಚು ರೂಪಿಸಿದ್ದಳು ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಪೈಂಟರ್ ಸಂತೋಷ್ (30 ) ಹತ್ಯೆ ಸಂಬಂಧ ಪತ್ನಿ ಶ್ರುತಿ (24) ತನ್ನ ಪ್ರಿಯಕರ ಚಂದ್ರಶೇಖರ್ (20), ಆತನ ಸ್ನೇಹಿತ ಕಿರಣನನ್ನು ವಿಚಾರಣೆಗೆ ಒಳಪಡಿಸಿದಾಗ ಈ ವಿಚಾರ ಬಹಿರಂಗಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಂತೋಷ್-ಶ್ರುತಿ ದಂಪತಿಗೆ 5 ವರ್ಷದ ಪುತ್ರಿ ಇದ್ದು ಸಾಕಷ್ಟು ಅನುಕೂಲಕರ ಸ್ಥಿತಿಯಲ್ಲಿದ್ದರು. ಶ್ರುತಿಗೆ ಮೋಜುಮಸ್ತಿ ಮಾಡುವ, ಫೋಟೋ ತೆಗೆಸಿಕೊಳ್ಳುವ ಖಯಾಲಿ. ಪಕ್ಕದ ಮನೆ ಅವಿವಾಹಿತ ಯುವಕ ಚಂದ್ರಶೇಖರ್ ಜೊತೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದ ಈಕೆ ಇತರೆ ಯುವಕರ ಜತೆಯೂ ಸಲಿಗೆ, ಸ್ವಚ್ಛಂದದಲ್ಲಿದ್ದು, ಪುತ್ರಿಯನ್ನು ಕಡೆಗಣಿಸಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ಪತಿಯ ತಂದೆ ತಾಯಿ ನಿವೇಶನವೊಂದನ್ನು ಮಾರಾಟ ಮಾಡಿದ್ದು ಆ ಹಣದಲ್ಲಿ ಸ್ವಲ್ಪ ಹಣವನ್ನು ಶ್ರುತಿ ಖಾತೆಗೆ ವರ್ಗಾಯಿಸಿದ್ದರು. ನಂತರ ಅನಾರೋಗ್ಯದಿಂದ ಇಬ್ಬರೂ ಮೃತಪಟ್ಟಿದ್ದರು. ಅತ್ತೆ ಮಾವ ಮೃತಪಟ್ಟ ನಂತರ ಶ್ರುತಿ ಯಾರ ಹಂಗು ಇಲ್ಲದಂತೆ ಸ್ವಚ್ಛಂದವಾಗಿ ಇರುತ್ತಿದ್ದಳು.

ಈ ನಡುವೆ ಕೆಲಸ ನಿಮಿತ್ತ ಸಕಲೇಶಪುರದ ಬಿಕ್ಕೋಡು ಗ್ರಾಮಕ್ಕೆ ಬರುತ್ತಿದ್ದ ಸಂತೋಷನನ್ನು ಮುಗಿಸಲು ಹೊಸದಾಗಿ ಖರೀದಿಸಿದ್ದ ಕಾರಿನಲ್ಲಿ ಹಂತಕರು ಹಿಂಬಾಲಿಸಿದರು. ದಾರಿಯುದ್ದಕ್ಕೂ ಹತ್ಯೆಗೆ ಯತ್ನಿಸುತ್ತಲೇ ಇದ್ದರು. ಆದರೆ, ಸಾಧ್ಯವಾಗಿರಲಿಲ್ಲ. ದಟ್ಟವಾದ ಅರಣ್ಯದ ನಡುವೆ ನಿರ್ಜನ ಪ್ರದೇಶ ಐಗೂರು ರಸ್ತೆಯಲ್ಲಿ ಬೈಕ್ ತಡೆದ ಹಂತಕರು,‘ಕಾರಿನಲ್ಲಿ ಪೆಟ್ರೋಲ್ ಮುಗಿದಿದೆ, ತರಲು ಬೈಕ್‌‌ನಲ್ಲಿ ಡ್ರಾಪ್ ಕೊಡಿ’ ಎಂದು ಕೇಳುತ್ತಲೇ, ಮತ್ತೊಬ್ಬ ಹಿಂಭಾಗದಲ್ಲಿ ನಿಂತು ಕಬ್ಬಿಣದ ರಾಡ್‌‌ನಿಂದ ತಲೆಗೆ ಹೊಡೆದಿದ್ದಾನೆ.

ನಂತರ ಹೊಸ ಕಾರಿನಿಂದ ಬೈಕ್‌‌ಗೆ ಡಿಕ್ಕಿ ಹೊಡೆಸಿ ಬೀಳುವಂತೆ ಮಾಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟಂತೆ ಬಿಂಬಿಸಿದ್ದರು.

ಆರೋಪಿಗಳಿಂದ ಮಾಹಿತಿ ತಿಳಿದ ಶ್ರುತಿ ಪತಿ ಸಂತೋಷ್ ಓಡಿಸುತ್ತಿದ್ದ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಶ್ರುತಿ ಯಸಳೂರು ಪೊಲೀಸರಿಗೆ ದೂರು ನೀಡಿದ್ದಳು. ಆದರೆ, ಮರಣೋತ್ತರ ಪರೀಕ್ಷೆ ವೇಳೆ ಸಂತೋಷ್ ಮೈಮೇಲೆ ಯಾವುದೇ ಗಾಯ ಇಲ್ಲದ್ದನ್ನು ಕಂಡು ಪೊಲೀಸರು ಪತ್ನಿ ಶ್ರುತಿಯನ್ನು ಮರು ವಿಚಾರಣೆಗೆ ಒಳಪಡಿಸಿದಾಗ ಪತಿ ಕೊಲೆಮಾಡಿರುವ ವಿಷಯ ತಿಳಿಸಿರುವುದಾಗಿ ಸಕಲೇಶಪುರ ಇನ್ಸ್ ಪೆಕ್ಟರ್ ಕೆ.ಎಂ.ಚೈತನ್ಯಕುಮಾರ್ ವಿವರಿಸಿದರು. ಆರೋಪಿಗಳಾದ ಕಿರಣ್ ಹಾಗೂ ಚಂದ್ರಶೇಖರ್ ಶ್ರುತಿ ಪತಿ ಸಂತೋಷ್‌‌ನಿಂದ ಹಣವನ್ನು ಸಾಲ ಪಡೆದಿದ್ದರು. ಸಾಲ ಕೇಳುತ್ತಿದ್ದ ದ್ವೇಷವೂ ಇತ್ತು ಎನ್ನಲಾಗಿದೆ.

ಸಕಲೇಶಪುರ ಡಿವೈಎಸ್ಪಿ ಅನಿಲ್ ಕುಮಾರ್, ಇನ್ಸ್‌‌ಪೆಕ್ಟರ್ ಕೆ.ಎಂ.ಚೈತನ್ಯ, ಪಿಎಸ್ಐ ಮಂಜುನಾಥ್, ಅಪರಾಧ ವಿಭಾಗದ ಸತೀಶ್ ತನಿಖೆ ವೇಳೆ ಮೃತ ಸಂತೋಷ್ ಪತ್ನಿ ಶ್ರುತಿ, ಆಕೆಯ ಪ್ರಿಯಕರ ಚಂದ್ರಶೇಖರ್, ಮತ್ತೋರ್ವನನ್ನು ಬಂಧಿಸಿದ್ದಾರೆ. ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.