ನಾಪೋಕ್ಲು: ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ ಮತ್ತು ನರಿಯಂದಡ ಗ್ರಾಮದ ತೋಟಗಳಲ್ಲಿ ಶುಕ್ರವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿದ್ದು, ಅಪಾರ ಹಾನಿಯಾಗಿದೆ.
ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು, ತೆಂಗು, ಅಡಿಕೆ, ಕಾಫಿ ಗಿಡಗಳನ್ನು ನಾಶಪಡಿಸಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಸುಮಾರು 20ಕ್ಕೂ ಅಧಿಕ ಕಾಡಾನೆಗಳು ಸುತ್ತಲಿನ ಗ್ರಾಮಗಳಲ್ಲಿ ಓಡಾಡುತ್ತಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಕೋಕೇರಿ ಗ್ರಾಮದ ಕಾಫಿ ಬೆಳೆಗಾರ ಚೆರುವಾಳಂಡ ಕಿಶನ್ ಸೋಮಯ್ಯ ಅವರ ತೋಟದಲ್ಲಿ ಸಂಗ್ರಹಿಸಿಟ್ಟಿದ್ದ ಗೊಬ್ಬರ ಚೀಲಗಳನ್ನು ಕಾಡಾನೆಗಳು ಹಾಳುಗೆಡವಿವೆ. ನರಿಯಂದಡ ಗ್ರಾಮದ ತೋಟಂಬೈಲ್ ಅನಂತಕುಮಾರ್ ಅವರ ತೋಟಗಳಲ್ಲಿ ಬೆಳೆ ಹಾನಿ ಮಾಡಿವೆ.
ಅಪಾರ ಪ್ರಮಾಣದಲ್ಲಿ ಕಾಫಿ, ಬಾಳೆ, ಅಡಿಕೆ ಗಿಡಗಳಿಗೆ ಹಾನಿಯಾಗಿದ್ದು, ಕಾಡಾನೆಗಳನ್ನು ಒಂದು ಭಾಗದಿಂದ ಓಡಿಸಿದರೆ ಮತ್ತೊಂದು ಭಾಗದಿಂದ ನುಸುಳುತ್ತವೆ. ಗ್ರಾಮದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿರುವ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಸೆರೆ ಹಿಡಿಯುವ ಮೂಲಕ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕಿಶನ್ ಸೋಮಯ್ಯ ಒತ್ತಾಯಿಸಿದರು.
ನಾಪೋಕ್ಲು ಸಮೀಪದ ನರಿಯಂದಡ ಗ್ರಾಮದ ತೋಟಂಬೈಲ್ ಅನಂತಕುಮಾರ್ ಅವರ ತೋಟದಲ್ಲಿನ ಬಾಳೆಗಿಡಗಳು ನಾಶವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.