ADVERTISEMENT

ನಾಪೋಕ್ಲು | ಕಾಡಾನೆ ಹಾವಳಿ: ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 4:48 IST
Last Updated 16 ಜುಲೈ 2025, 4:48 IST
ನಾಪೋಕ್ಲು ಸಮೀಪದ ಯವಕಪಾಡಿ ಗ್ರಾಮದ ಕುಡಿಯರ ಕಾಲೊನಿಯಲ್ಲಿ ಕುಡಿಯರ ಬಿದ್ದಪ್ಪ ಅವರ ಮನೆಯ ಮೇಲೆ ಕಾಡಾನೆಯೊಂದು ತೆಂಗಿನ ಮರವನ್ನು ಬೀಳಿಸಿರುವುದು 
ನಾಪೋಕ್ಲು ಸಮೀಪದ ಯವಕಪಾಡಿ ಗ್ರಾಮದ ಕುಡಿಯರ ಕಾಲೊನಿಯಲ್ಲಿ ಕುಡಿಯರ ಬಿದ್ದಪ್ಪ ಅವರ ಮನೆಯ ಮೇಲೆ ಕಾಡಾನೆಯೊಂದು ತೆಂಗಿನ ಮರವನ್ನು ಬೀಳಿಸಿರುವುದು    

ನಾಪೋಕ್ಲು: ಸಮೀಪದ ನರಿಯಂದಡ, ಯವಕಪಾಡಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಗ್ರಾಮಸ್ಥರು ಹೈರಾಣಾಗಿದ್ದಾರೆ.

ಯವಕಪಾಡಿ ಗ್ರಾಮದ ಕುಡಿಯರ ಕಾಲೊನಿಯಲ್ಲಿ ಕಾಡಾನೆಗಳು ದಾಂದಲೆ ನಡೆಸಿವೆ. ಯವಕಪಾಡಿ ಗ್ರಾಮದ ನಿವಾಸಿ ಕುಡಿಯರ ಬಿದ್ದಪ್ಪ ಅವರ ಐನ್ ಮನೆಯ ಮೇಲೆ ತೆಂಗಿನ ಮರ ಬೀಳಿಸಿ ಮನೆಗೆ ಹಾನಿ ಉಂಟು ಮಾಡಿದೆ. ಕುಟುಂಬದವರು ಕೆಲಸದ ನಿಮಿತ್ತ ಬೇರೆಡೆ ತೆರಳಿದ್ದರಿಂದ ಯಾವುದೇ ಅನಾಹುತವಾಗಿಲ್ಲ.

ಕುಡಿಯರ ಗಣೇಶ್ ಮಾತನಾಡಿ, ‘ಬಿರುಸಿನ ಮಳೆಯಿದ್ದುದರಿಂದ ಎಲ್ಲರೂ ಬೇರೆಡೆ ತೆರಳಿದ್ದೆವು. ಮನೆ ಖಾಲಿ ಇತ್ತು. ತೆಂಗಿನ ಮರ ಮುರಿದು ಬಿದ್ದು ಸಮಸ್ಯೆಯಾಗಿದೆ . ಮುತ್ತಜ್ಜನ ಕಾಲದಿಂದ ವಾಸವಿದ್ದ ಮನೆ ಧ್ವಂಸವಾಗಿದೆ. ಸರ್ಕಾರ ಕಾಲೊನಿಗೆ ರಸ್ತೆ ನಿರ್ಮಿಸಿದ್ದು ಬಿಟ್ಟರೆ ಕಾಡುಪ್ರಾಣಿಗಳಿಂದ ಉಂಟಾಗುವ ಉಪಟಳದ ಬಗ್ಗೆ ಯಾವುದೇ ಪರಿಹಾರ ನೀಡುತ್ತಿಲ್ಲ. ಕಾಡು ಪ್ರಾಣಿಗಳಿಂದ ಬಡಜನರು ಸಮಸ್ಯೆ ಅನುಭವಿಸುತ್ತಿದ್ದು ಸರ್ಕಾರಕ್ಕೆ ಕಾಳಜಿ ಇಲ್ಲ’ ಎಂದು ಆರೋಪಿಸಿದರು.

ADVERTISEMENT

ಅರಣ್ಯ ಇಲಾಖೆ ಸಿಬ್ಬಂದಿ ಯಾರು ಆಗಮಿಸಿಲ್ಲ. ಸಂತ್ರಸ್ತರಿಗೆ ಸ್ಥಳದಲ್ಲೇ ಪರಿಹಾರ ನೀಡುವ ಕಾರ್ಯ ಆಗಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಕುಡಿಯರ ಭರತ್ ಚಂದ್ರ ದೇವಯ ಒತ್ತಾಯಿಸಿದರು.

ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾತನಾಡಿ, ‘ಎರಡು ವರ್ಷದಿಂದ ಈ ಭಾಗದಲ್ಲಿ ವಾಸಿಸುವವರ ಮನೆ ಆಸ್ತಿ ನಾಶವಾಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಯವಕಪಾಡಿ, ಮರಂದೋಡ, ಕುಂಜಿಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಕಾಫಿ ತೋಟಗಳು ಹಾನಿಯಾಗಿವೆ. ಇಲ್ಲಿ ಒಂಟಿ ಸಲಗ ಅಡ್ಡಾಡುತ್ತಿದ್ದು ಪ್ರತಿವರ್ಷ ಸಮಸ್ಯೆ ಆಗುತ್ತಿದೆ. ಒಂಟಿ ಸಲಗವನ್ನು ಹಿಡಿಯಲು ಕೇಂದ್ರ ಸರ್ಕಾರದಿಂದ ಆದೇಶವಾಗಿದ್ದರೂ ಅರಣ್ಯ ಇಲಾಖೆ ಆನೆ ಸೆರೆ ಹಿಡಿಯಲು ವಿಫಲವಾಗಿದೆ. ಆನೆ ದಾಳಿಯಿಂದ ಹಾನಿಗೊಳಗಾದ ಮನೆಯನ್ನು ನಿರ್ಮಿಸಲು ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.