ADVERTISEMENT

ಸಿದ್ದಾಪುರ: ಕೂದಲೆಳೆ ಅಂತರದಲ್ಲಿ ಪಾರಾದ ಕಾಡಾನೆ, ಅರಣ್ಯ ಇಲಾಖೆ ತಂಡ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 4:02 IST
Last Updated 8 ಜುಲೈ 2025, 4:02 IST
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಸಮೀಪ ಕೊಂಡಗೇರಿಯಲ್ಲಿ ಸೋಮವಾರ 19 ಆನೆಗಳಿದ್ದ ಕಾಡಾನೆ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿ ತೋಟದಿಂದ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದರು
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಸಮೀಪ ಕೊಂಡಗೇರಿಯಲ್ಲಿ ಸೋಮವಾರ 19 ಆನೆಗಳಿದ್ದ ಕಾಡಾನೆ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿ ತೋಟದಿಂದ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದರು   

ಸಿದ್ದಾಪುರ (ಕೊಡಗು ಜಿಲ್ಲೆ): ಸಮೀಪದ ಕೊಂಡಗೇರಿಯಲ್ಲಿ 19 ಆನೆಗಳಿದ್ದ ಕಾಡಾನೆ ಹಿಂಡನ್ನು ತೋಟದಿಂದ ಕಾಡಿಗಟ್ಟುವ ವೇಳೆ ಸೋಮವಾರ ಅಡಿಕೆ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು, ಕೂದಲೆಳೆಯ ಅಂತರದಲ್ಲಿ ಕಾಡಾನೆಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಾರಾಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ಶಿವರಾಮು, ‘19 ಆನೆಗಳಿರುವ ಹಿಂಡು ಮತ್ತು ಒಂದು ಒಂಟಿ ಸಲಗವನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಕಾಡಾನೆಗಳ ಹಿಂಡು ರಸ್ತೆ ದಾಟುವಾಗ ನಡುವೆ ಸಿಕ್ಕ ಅಡಿಕೆ ಮರವನ್ನು ಮುರಿದಿವೆ. ಅದು ವಿದ್ಯುತ್ ತಂತಿಯ ಮೇಲೆ ಬಿದ್ದು, ತಂತಿ ತುಂಡಾಯಿತು. ಇದೇ ಸಮಯದಲ್ಲಿ ಮರಿಯಾನೆಯೊಂದು ಕೆಳಗೆ ಬಿದ್ದು, ಮರು ಗಳಿಗೆಯಲ್ಲೇ ಎದ್ದು ಹಿಂಡಿನೊಂದಿಗೆ ಹೆಜ್ಜೆ ಹಾಕಿದೆ. ನಮ್ಮ ತಂಡ ವಿದ್ಯುತ್‌ ಅವಘಡದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಆನೆಯೂ ಸುರಕ್ಷಿತವಾಗಿದ್ದು, ಹಿಂಡಿನೊಂದಿಗೆ ಇದೆ’ ಎಂದು ತಿಳಿಸಿದರು.

ಆರಂಭದಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಮರಿಯಾನೆ ಕೆಳಗೆ ಬಿದ್ದಿತ್ತು ಎಂದೇ ಅಂದಾಜಿಸಲಾಗಿತ್ತು. ಆದರೆ, ನಂತರ ಮರಿಯಾನೆ ಸರಾಗವಾಗಿ ಹಿಂಡಿನೊಂದಿಗೆ ಸಾಗಿದ್ದನ್ನು ಕಂಡು ವಿದ್ಯುತ್ ಆಘಾತಕ್ಕೆ ಒಳಗಾಗಿಲ್ಲ ಎಂಬುದು ಖಚಿತವಾಯಿತು ಎಂದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

ADVERTISEMENT

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಶಿವರಾಂ, ಉಪವಲಯ ಅರಣ್ಯಾಧಿಕಾರಿ ಸಂಜೀತ್ ಸೋಮಯ್ಯ, ಆರ್.ಆರ್.ಟಿ, ಆನೆ ಕಾರ್ಯಪಡೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.