ADVERTISEMENT

ಭೀತಿ ಇಲ್ಲದೇ ಎಲ್ಲರೂ ದಸರೆ ನೋಡುವಂತಾಗಲಿ: ಕೆ.ರಾಮರಾಜನ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2023, 7:15 IST
Last Updated 5 ನವೆಂಬರ್ 2023, 7:15 IST
ಕೆ.ರಾಮರಾಜನ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
ಕೆ.ರಾಮರಾಜನ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.   

ಮಡಿಕೇರಿ: ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆಯನ್ನು ಯಾವುದೇ ಭೀತಿ ಇಲ್ಲದೇ, ಎಲ್ಲರೂ ವೀಕ್ಷಣೆ ಮಾಡುವಂತಹ ವ್ಯವಸ್ಥೆ ರೂಪಿಸಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಪ್ರತಿಪಾದಿಸಿದರು.

ಈ ಮೂಲಕ ದಸರಾ ಮಂಟಪಗಳ ಶೋಭಾಯಾತ್ರೆಯ ಸ್ವರೂಪ ಬದಲಾವಣೆಯ ಚರ್ಚೆಗೆ ಮುನ್ನುಡಿ ಬರೆದರು.

ದೊಡ್ಡ ಮೈದಾನವೊಂದನ್ನು ಗುರುತಿಸಿ, ವ್ಯವಸ್ಥಿತವಾಗಿ ಕುಳಿತು ಮಂಟಪಗಳ ಪ್ರದರ್ಶನವನ್ನು ಕಣ್ತುಂಬಿಕೊಳ್ಳುವಂತೆ ಮಾಡಬೇಕು. ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ರಕ್ಷಣೆ ಇದೆ ಎಂಬ ಮನೋಭಾವ ಎಲ್ಲರಲ್ಲೂ ಮೂಡುವಂತಾಗಬೇಕು ಎಂದು ಅವರು ಇಲ್ಲಿ ತಮ್ಮ ಮನದಾಳದ ಅಭಿಪ್ರಾಯಗಳನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು.

ADVERTISEMENT

ಮಡಿಕೇರಿ ದಸರೆ ಕುರಿತು ಇಲ್ಲಿ ತಮ್ಮ ಕಚೇರಿಯಲ್ಲಿ ಶನಿವಾರ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

‘ನಾನು ಇಲ್ಲಿಗೆ ಬರುವುದಕ್ಕಿಂತ ಮುಂಚೆ ಅಂದುಕೊಂಡ ವೈಭವದ ದಸರೆ ನಡೆಯಲಿಲ್ಲ ಮತ್ತು ನಡೆಯುತ್ತಿಲ್ಲ ಎಂಬ ನೋವು ನನ್ನಲ್ಲಿದೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಮಿತವಾಗಿ ಬಳಸಿ ನಮ್ಮ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸಬೇಕಿದೆ’ ಎಂದು ಅವರು ಹೇಳಿದರು.

ಶೋಭಾಯಾತ್ರೆಯನ್ನು ಸಾಮರ್ಥ್ಯ ಇರುವವರು ಮಾತ್ರವೇ ನೋಡುವಂತಾಗಿದೆ. ಆದರೆ, ಮಕ್ಕಳು, ವೃದ್ಧರು, ಮಹಿಳೆಯರು ಕುಟುಂಬ ಸಮೇತರಾಗಿ ನೋಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ವಿಷಾದಕರ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ನಗರ ಪೊಲೀಸ್ ಠಾಣೆಯ ಬಳಿ ಯುವಕ, ಮಹಿಳೆ ಮತ್ತು ಮಗುವೊಂದು ಕೆಳಗೆ ಬಿದ್ದು ಮೇಲೇಳಲಾಗದೇ ಕಷ್ಟಪಡುತ್ತಿದ್ದರು. ಈ ವೇಳೆ ನಾನು ಮತ್ತು ನಮ್ಮ ತಂಡ ಲಘು ಲಾಠಿಪ್ರಹಾರ ನಡೆಸಿ ಅವರನ್ನು ರಕ್ಷಿಸಿದೆವು. ಸ್ವಲ್ಪ ತಡವಾಗಿದ್ದರೆ ಭಾರಿ ಅನಾಹುತವಾಗುತ್ತಿತ್ತು. ಮಡಿಕೇರಿ ದಸರೆಗೂ ಅಳಿಸಲಾಗದ ಕಪ್ಪುಚುಕ್ಕೆಯಾಗುತ್ತಿತ್ತು’ ಎಂದು ಅವರು ತಿಳಿಸಿದರು.

ಎಲ್ಲರೂ ಎಚ್ಚರಿಕೆ ವಹಿಸಲೇಬೇಕು

‘ಮಂಟಪಗಳ ಸುತ್ತ ಜನರ ಓಡಾಟ ಹೆಚ್ಚಾದ ವೇಳೆ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಕೆಲವರು ಕಟ್ಟಡದ ಮೇಲೆ ಕುಳಿತು ಕೂಡ ನೋಡಿದ್ದಾರೆ. ಕೆಲವರ ಮೇಲೆ ಸಿಡಿಮದ್ದು ಹಾರಿದ್ದನ್ನೂ ನಾನು ಗಮನಿಸಿದ್ದೇನೆ. ಗಾಬರಿಯಾದರೆ ಪರಿಸ್ಥಿತಿ ಏನಾಗಬಹುದು’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ಮದ್ಯಪಾನ ನಿಷೇಧಿಸಿದ್ದರೂ ಇತರೆಡೆ ಮದ್ಯ ಸೇವಿಸಿ ದಸರೆಗೆ ಬಂದು ಮಹಿಳೆಯರಿಗೆ ತೊಂದರೆ ಕೊಡುತ್ತಾರೆ. ಇದರಿಂದ ಹಲವು ಜನರು ಕುಟುಂಬ ಸಮೇತರಾಗಿ ದಸರಾಗೆ ಆಗಮಿಸಲು ಹಿಂದೇಟು ಹಾಕುವುದು ಕಂಡು ಬಂದಿದೆ ಎಂದು ತಿಳಿಸಿದರು.

‘ಡಿ.ಜೆ. ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿಯೂ ಇದೆ. ನಮ್ಮದೇ ಸಂಸ್ಕೃತಿಯನ್ನು ಬಿಂಬಿಸುವ ವಾದ್ಯ ಸಂಗೀತಗಳಿಗೆ ಶೋಭಾಯಾತ್ರೆಯಲ್ಲಿ ಅವಕಾಶ ಮಾಡಿಕೊಡದೇ ಹೋದರೆ ನಮ್ಮ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ನಾವೇ ನಾಶ ಮಾಡಿದಂತಾಗುತ್ತದೆ’ ಎಂದೂ ಅವರು ಕಿಡಿಕಾರಿದರು.

‘ಇವೆಲ್ಲವೂ ನನಗನ್ನಿಸಿದ ಅಭಿಪ್ರಾಯಗಳು. ಎಲ್ಲರೂ ಚರ್ಚೆ ನಡೆಸಿ, ಎಲ್ಲರಿಗೂ ಒಳಿತಾಗುವ ತೀರ್ಮಾನವನ್ನು ಮುಂದಿನ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಕೈಗೊಳ್ಳುವಂತಾಗಬೇಕು’ ಎಂದು ಹೇಳಿದರು.

ಕೆ.ರಾಮರಾಜನ್
ಹಲವು ಸಲಹೆಗಳನ್ನು ಮುಂದಿಟ್ಟ ಎಸ್.ಪಿ ಮುಂದಾಗುವ ಅಪಾಯಗಳನ್ನು ಕುರಿತು ಎಚ್ಚರಿಕೆ ನೀಡಿದ ಪೊಲೀಸ್ ವರಿಷ್ಠಾಧಿಕಾರಿ
‘ವೈಜ್ಞಾನಿಕ ಮಂಟಪಗಳ ನಿರ್ಮಾಣದಿಂದ ಒಂದಲ್ಲ ಒಂದು ದಿನ ಸಮಸ್ಯೆ’
‘ಮಡಿಕೇರಿ ರಸ್ತೆ ತೀರಾ ಕಿರಿದಾಗಿದೆ. ಕೆಲವು ಮಂಟಪಗಳು ರಸ್ತೆಗಿಂತಲೂ ದೊಡ್ಡದಾಗಿದ್ದವು. ಹೀಗೆ ಮಾಡಿದರೆ ಜನರು ಓಡಾಡುವುದಾದರೂ ಹೇಗೆ’ ಎಂದು ಪ್ರಶ್ನಿಸಿದ ಅವರು ‘ಪ್ರಶಸ್ತಿಗಾಗಿ ಪೈಪೋಟಿಯಿಂದ ಮಂಟಪಗಳನ್ನು ನಿರ್ಮಿಸಲಾಗುತ್ತಿದೆ. ಈ ವೇಳೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಂಟಪಗಳನ್ನು ನಿರ್ಮಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸಲಹೆ ನೀಡಿದರು. ‘ಮಂಟಪವೊಂದರ ವಾಹನದ ತೂಕ ಸಮತೋಲನ ಆಗದ ಹಿನ್ನೆಲೆಯಲ್ಲಿ ಟ್ರಾಕ್ಟರ್ ಮುಗುಚಿದೆ. ಈ ಘಟನೆ ನಮಗೆ ಪಾಠವಾಗಬೇಕು. ಮುಂದಿನ ದಿನಗಳಲ್ಲಿ ಎಲ್ಲ ಮಂಟಪ ಸಮಿತಿಯವರು ಜಾಗೃತರಾಗಬೇಕು. ಅವೈಜ್ಞಾನಿಕ ಮಂಟಪಗಳ ನಿರ್ಮಾಣ ಒಂದಲ್ಲ ಒಂದು ದಿನ ಸಮಸ್ಯೆಯಾಗುತ್ತದೆ’ ಎಂದೂ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.