ADVERTISEMENT

ಜೀವ ಉಳಿಸಲು ರಕ್ತ ನೀಡಲು ಮುಂದಾಗಿ: ಡಾ.ಕರುಂಬಯ್ಯ

ನೆಲ್ಯಹುದಿಕೇರಿಯಲ್ಲಿ 50ಕ್ಕೂ ಅಧಿಕ ಜನರಿಂದ ರಕ್ತದಾನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 4:13 IST
Last Updated 15 ಜೂನ್ 2022, 4:13 IST
ಶಿಬಿರದಲ್ಲಿ 50 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.
ಶಿಬಿರದಲ್ಲಿ 50 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.   

ಸಿದ್ದಾಪುರ: ಆರೋಗ್ಯವಂತ ವ್ಯಕ್ತಿಯು ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತ ಸಿಗದೇ ಹಲವು ಜೀವಹಾನಿ ಸಂಭವಿಸುತ್ತಿವೆ. ಎಲ್ಲರೂ ರಕ್ತದಾನ ಮಾಡಿದರೆ ಸಾವುಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ತಿಳಿಸಿದರು.

ಇಲ್ಲಿನ ನೆಲ್ಯಹುದಿಕೇರಿಯ ವಿ.ಎಸ್.ಎಸ್ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ರಕ್ತನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ, ಶ್ರೀ ಮುತ್ತಪ್ಪ ಯುವ ಕಲಾ ಸಂಘ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ನಡೆದ ಜಿಲ್ಲಾ ಮಟ್ಟದ ಬೃಹತ್ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ನಂತರ ಅವರು ರಕ್ತದಾನ ಮಾಡವ ವಿಧಾನ, ಅರ್ಹತೆ ಹಾಗೂ ಅದರ ಉಪಯೋಗದ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ 50ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು.

ADVERTISEMENT

ಕಾರ್ಯಕ್ರಮಕ್ಕೂ ಮೊದಲು ನೆಲ್ಯಹುದಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶ್ರೀ ಮುತ್ತಪ್ಪ ಯುವಕಲಾ ಸಂಘದ ಸದಸ್ಯರು ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ರಕ್ತದಾನ ಅರಿವು ಜಾಥಾಕ್ಕೆ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ವೆಂಕಟೇಶ್ ಚಾಲನೆ ನೀಡಿದರು.

ನೆಲ್ಯಹುದಿಕೇರಿ ವಿ.ಎಸ್.ಎಸ್.ಎನ್ ಬ್ಯಾಂಕ್ ಅಧ್ಯಕ್ಷ ಕೆದಂಬಾಡಿ ಪ್ರಸನ್ನ, ರೆಡ್‌ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಶ್ರೀ ಮುತ್ತಪ್ಪ ಯುವಕಲಾ ಸಂಘದ ಅಧ್ಯಕ್ಷ ಶರಣ್ ಪ್ರಕಾಶ್ ಮಾತನಾಡಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಎನ್.ಆನಂದ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ರೆಡ್‌ಕ್ರಾಸ್ ಸಂಸ್ಥೆಯ ಖಜಾಂಚಿ ಜೋಸೆಫ್ ಶ್ಯಾಮ್, ಕೆ.ಪಿ.ಎಸ್ ಶಾಲೆಯ ಪ್ರಾಂಶುಪಾಲ ಆಂಥೋನಿ ಆಲ್ವಾಸ್, ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಪಿಡಿಒ ಅನಿಲ್ ಕುಮಾರ್, ಶ್ರೀ ಮುತ್ತಪ್ಪ ಯುವಕಲಾ ಸಂಘದ ಪದಾಧಿಕಾರಿಗಳಾದ ಪ್ರಣವ್, ಶಿಂಜಿತ್, ಜೆಡಿಎಸ್ ಮುಖಂಡ ಶಿಹಾಬುದ್ದೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.