ADVERTISEMENT

World Environment Day: 2 ಸಾವಿರಕ್ಕೂ ಹೆಚ್ಚು ಮರ ನೆಟ್ಟ ಶಿಕ್ಷಕ

ಗೋಣಿಕೊಪ್ಪಲಿನಲ್ಲಿ ‍ಪರಿಸರ ಜಾಗೃತಿ ಮೂಡಿಸುತ್ತಿರುವ ಕೃಷ್ಣಚೈತನ್ಯ

ಕೆ.ಎಸ್.ಗಿರೀಶ್
Published 5 ಜೂನ್ 2025, 7:15 IST
Last Updated 5 ಜೂನ್ 2025, 7:15 IST
ಗೋಣಿಕೊಪ್ಪಲಿನಲ್ಲಿ ಶಿಕ್ಷಕ ಕೃಷ್ಣಚೈತನ್ಯ ಅವರು ಬೆಳೆಸಿರುವ ಔಷಧೀಯ ಗಿಡ, ಮರಗಳು
ಗೋಣಿಕೊಪ್ಪಲಿನಲ್ಲಿ ಶಿಕ್ಷಕ ಕೃಷ್ಣಚೈತನ್ಯ ಅವರು ಬೆಳೆಸಿರುವ ಔಷಧೀಯ ಗಿಡ, ಮರಗಳು   

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ 200ಕ್ಕೂ ಅಧಿಕ ಉಪನ್ಯಾಸಗಳನ್ನು ನೀಡಿರುವ ವಿಜ್ಞಾನ ಶಿಕ್ಷಕ ಕೃಷ್ಣಚೈತನ್ಯ ಜಿಲ್ಲೆಯ ಪರಿಸರ ಕಾರ್ಯಕರ್ತರಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹವರು. 2002ರಿಂದ ಆರಂಭವಾದ ಇವರ ಪರಿಸರ ಕುರಿತ ಉಪನ್ಯಾಸಗಳು 23 ವರ್ಷಗಳನ್ನು ಪೂರೈಸಿವೆ. ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಪರಿಸರ ಕುರಿತು ಅರಿವು ಮೂಡಿಸಿದ ಶ್ರೇಯ ಇವರದು.

ಜಿಲ್ಲೆಯಲ್ಲಿನ 20ಕ್ಕೂ ಅಧಿಕ ಶಾಲೆಗಳಲ್ಲಿ ಇವರು ಹಾವು, ಪಕ್ಷಿಗಳ ಸಂರಕ್ಷಣೆ, ಪರಿಸರ ಸಂರಕ್ಷಣೆ ಕುರಿತು ಮಾತುಗಳನ್ನಾಡಿದ್ದಾರೆ. 35ಕ್ಕೂ ಹೆಚ್ಚು ಪರಿಸರ ಕುರಿತ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಾತ್ರವಲ್ಲ, 2,100ಕ್ಕೂ ಹೆಚ್ಚು ಗಿಡ, ಮರಗಳನ್ನು ನೆಟ್ಟು ಬೆಳೆಸಿದ್ದಾರೆ.

ಗೋಣಿಕೊಪ್ಪಲು ಪ್ರೌಢಶಾಲೆ ಆವರಣದಲ್ಲಿ ಇವರು ಬೆಳೆಸಿದ ಗಿಡಗಳು ಈಗ ಮರಗಳಾಗಿವೆ. ಕ್ಯಾಂಪಸ್‌ನಲ್ಲಿ ಪ್ರಾಣಿ, ಪಕ್ಷಿಗಳು, ಚಿಟ್ಟೆಗಳಿಗೆ ಪೂರಕವಾದ ಹೂವು, ಹಣ್ಣಿನ ಗಿಡಗಳು, ಅಲಂಕಾರಿಕ ಗಿಡಗಳು ಇಲ್ಲಿವೆ.

ADVERTISEMENT

ಹೊಂಗೆ ಮರ, ಬಸರಿ, ನೇರಳೆ, ಪನ್ನೇರಳೆ, ಸಪೋಟ, ಹೀಗೆ ಹಲವು ಮರಗಳ ಮಧ್ಯೆ ಹೋದರೆ ಕಾಡೊಳಗೆ ಹೋದಂತಹ ಅನುಭವವಾಗುತ್ತದೆ. ಸುಮಾರು 100ಕ್ಕೂ ಅಧಿಕ ಚಿಟ್ಟೆಗಳು ಇಲ್ಲಿದ್ದು, ಚಿಟ್ಟೆ ಉದ್ಯಾನದ ಹಾಗೆ ಈ ಹಸಿರ ‍ಪರಿಸರ ಕಂಗೊಳಿಸುತ್ತಿದೆ. 60ಕ್ಕೂ ಹೆಚ್ಚು ಇಂಗುಗುಂಡಿಗಳನ್ನು ಮಾಡಿ ಅಂತರ್ಜಲ ವೃದ್ಧಿಗೂ ಇವರು ಕಾರಣರಾಗಿದ್ದಾರೆ.

ಪ್ರತಿ ವರ್ಷವೂ ಪಕ್ಷಿ ವೀಕ್ಷಣೆ, ಜಾಥಾ, ಚಾರಣ, ಬೆಂಕಿಯಿಂದ ಅರಣ್ಯ ರಕ್ಷಿಸುವುದು ಹೇಗೆ ಮೊದಲಾದ ವಿಷಯಗಳ ಕುರಿತು ಇವರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿದ್ದಾರೆ. ಪರಿಸರ ಸಂರಕ್ಷಣೆಗೆ ಪೂರಕವಾಗಿ ಪ್ರಬಂಧ ಸ್ಪರ್ಧೆ, ಚಿತ್ರರಚನೆ ಸ್ಪರ್ಧೆಗಳನ್ನು ಮಕ್ಕಳಿಗಾಗಿ ಆಯೋಜಿಸುತ್ತಿದ್ದಾರೆ.

ಇವರು ಆರಂಭಿಸಿದ ‘ಟೈಗರ್ ಪಗ್’ ಎಂಬ ಪರಿಸರ ಸಂಘಕ್ಕೆ 2008ರಲ್ಲಿ ಇಂಡೊ–ನಾರ್ವೆ ಪರಿಸರ ಕಾರ್ಯಕ್ರಮದಡಿ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ‘ಏಕಬಳಕೆ ಪ್ಲಾಸ್ಟಿಕ್ ನಿಷೇಧ’ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದ ರಾಯಭಾರಿಯಾಗಿ ಇವರನ್ನು ನೇಮಕ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.