ಮಡಿಕೇರಿ: ವಿಶ್ವ ಲಸಿಕಾ ಸಪ್ತಾಹ ಏ. 24ರಿಂದ ಆರಂಭವಾಗಿದ್ದು, 30ರವರೆಗೂ ನಡೆಯಲಿದೆ. ಈ ಅವಧಿಯಲ್ಲಿ ಲಸಿಕೆಗೆ ಬಾಕಿ ಇರುವ ಮಕ್ಕಳನ್ನು ಗುರುತಿಸಿ, ವಿಶೇಷ ಲಸಿಕಾ ಕಾರ್ಯಕ್ರಮಗಳನ್ನು ಆಯೋಜಿಸಿ, ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ 7 ದಡಾರ ಹಾಗೂ 2 ರುಬೆಲ್ಲಾ ಪ್ರಕರಣಗಳು ಕಂಡು ಬಂದಿವೆ. ಹಾಗಾಗಿ, ಈ ವರ್ಷ ಹೆಚ್ಚು ನಿಗಾ ವಹಿಸಿ ಲಸಿಕೆ ಹಾಕಲಾಗುತ್ತಿದೆ. ಸದ್ಯ, ಲಸಿಕೆ ಹಾಕುವಿಕೆಯಲ್ಲಿ ಶೇ 99.09ರಷ್ಟು ಪ್ರಗತಿ ಸಾಧಿಸಿರುವ ಕೊಡಗು ಜಿಲ್ಲೆಯು ರಾಜ್ಯದಲ್ಲೇ 4ನೇ ಸ್ಥಾನದಲ್ಲಿದೆ.
ಕೊಡಗು ಜಿಲ್ಲೆಯಲ್ಲಿ ಇನ್ನೂ 234 ಮಕ್ಕಳು ಲಸಿಕೆಗೆ ಬಾಕಿ ಇದ್ದು, ಅವರಿಗೆ ಲಸಿಕೆ ಹಾಕಲು ವಿಶೇಷ ಶಿಬಿರಗಳನ್ನು ಆರೋಗ್ಯ ಇಲಾಖೆ ಆಯೋಜಿಸಿದೆ.
ವಲಸಿಗರು ಇರುವಂತಹ ಪ್ರದೇಶವನ್ನು ಹೈರಿಸ್ಕ್ ಪ್ರದೇಶ ಎಂದು ಗುರುತಿಸಿರುವ ಇಲಾಖೆಯು ಅಲ್ಲಿ 3 ಹೊರ ವಲಯ ಲಸಿಕಾ ಶಿಬಿರ ಮಾಡಲಿದೆ. ಇವುಗಳಲ್ಲಿ ಹೆಚ್ಚಿನವು ಲೈನ್‌ಮನೆಗಳೇ ಆಗಿವೆ. ಲಸಿಕೆ ಹಾಕಿಸದ ಸ್ಥಳೀಯರು ಇರುವ ಪ್ರದೇಶದಲ್ಲಿ 46 ಕಾರ್ಯಕ್ರಮಗಳನ್ನು ಮಾಡಲು ಉದ್ದೇಶಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಹಾಡಿಗಳು ಹಾಗೂ ಕಾಡಂಚಿನ ಪ್ರದೇಶಗಳೇ ಆಗಿವೆ.ಹೈರಿಸ್ಕ್ ಇಲ್ಲದ ಪ್ರದೇಶದಲ್ಲೂ 5 ಶಿಬಿರ ಆಯೋಜಿಸಲಾಗುತ್ತದೆ. ಪ್ರತಿ ಶಿಬಿರಕ್ಕೆ ಕನಿಷ್ಠ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಅಲೆಮಾರಿಗಳಿರುವ ಪ್ರದೇಶ 3, ಕಲ್ಲು ಹೊಡೆಯುವವರು ಇರುವ ಪ್ರದೇಶ 10, ನಿರ್ಮಾಣ ಚಟುವಟಿಕೆಯಲ್ಲಿರುವ ವಲಸಿಗರು ಇರುವ ಪ್ರದೇಶ 10, ಇತರೆ ವಲಸಿಗರು ಇರುವ ಪ್ರದೇಶ–1,185 ಎಂದು ಗುರುತಿಸಲಾಗಿದೆ. ಇತರೆ ವಲಸಿಗರಲ್ಲಿ ಹೆಚ್ಚಿನವರು ಎಸ್ಟೇಟ್ ಕಾರ್ಮಿಕರೇ ಆಗಿದ್ದಾರೆ.
ಇವುಗಳ ಮಧ್ಯೆ 3 ತಿಂಗಳಿಂದ ಆರೋಗ್ಯ ಕಾರ್ಯಕರ್ತರು ಖಾಲಿ ಇರುವ 249 ಪ್ರದೇಶಗಳಿವೆ. ತಲುಪಲು ಕಷ್ಟಕರವಾಗಿರುವ 145 ಪ್ರದೇಶ, ಹಾಗೂ ಹಾಡಿಗಳು, ಕಾಡಂಚಿನ 433 ಪ್ರದೇಶಗಳನ್ನು ಗುರುತಿಸಲಾಗಿದೆ.
ಆಶಾ ಕಾರ್ಯಕರ್ತೆಯರು ಫೆಬ್ರುವರಿ, ಮಾರ್ಚ್‌ನಲ್ಲಿ ಮನೆ ಮನೆ ಸಮೀಕ್ಷೆ ನಡೆದಿದ್ದು, ಅಲ್ಲಿ ಈ ಎಲ್ಲ ಮಾಹಿತಿಗಳನ್ನೂ ಸಂಗ್ರಹಿಸಲಾಗಿದೆ ಎಂದು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಮಧುಸೂದನ್ ‘ಪ್ರಜಾವಾಣಿ’ಗೆ ತಿಳಿಸಿದರು.
12 ರೋಗಗಳನ್ನು ಲಸಿಕೆಗಳಿಂದ ತಡೆಗಟ್ಟಬಹುದು
ಬಾಲಕ್ಷಯ, ಹೆಪಾಟೈಟಿಸ್–ಬಿ, ಪೊಲಿಯೊ, 2 ಬಗೆಯ ನ್ಯುಮೊನಿಯಾ, ಡಿಪ್ತಿರಿಯಾ, ನಾಯಿಕೆಮ್ಮು, ದಡಾರ, ರುಬೆಲ್ಲಾ, ಮಿದುಳು ಜ್ವರ, ಅತಿಸಾರ ಭೇದಿ, ಟೆಟಾನಸ್,
ಲಸಿಕೆ ಹಾಕಿಸುವ ಸಮಯ
ಹುಟ್ಟಿದಾಗ, ಒಂದೂವರೆ ತಿಂಗಳಿನಲ್ಲಿ, ಎರಡೂವರೆ, ಮೂರುವರೆ ತಿಂಗಳಿನಲ್ಲಿ, 9–12 ತಿಂಗಳ ಒಳಗೆ, 16–24 ತಿಂಗಳ ಒಳಗಡೆ, 5 ವರ್ಷಕ್ಕೆ, 10 ವರ್ಷಕ್ಕೆ, 15 ವರ್ಷಕ್ಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.