ADVERTISEMENT

ವಿಬಿ–ಜಿ ರಾಮ್ ಜಿ ಕಾಯ್ದೆ ಕೊಡಗಿಗೆ ಸಹಕಾರಿ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 7:36 IST
Last Updated 30 ಜನವರಿ 2026, 7:36 IST
ಮೈಸೂರಿನ ಸಂಸದರ ಕಚೇರಿಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪತ್ರಿಕಾಗೋಷ್ಠಿ ನಡೆಸಿದರು. ಪ್ರಜಾವಾಣಿ ಚಿತ್ರ.
ಮೈಸೂರಿನ ಸಂಸದರ ಕಚೇರಿಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪತ್ರಿಕಾಗೋಷ್ಠಿ ನಡೆಸಿದರು. ಪ್ರಜಾವಾಣಿ ಚಿತ್ರ.   

ಮಡಿಕೇರಿ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (ಮನರೇಗಾ) ಕಾಯ್ದೆಯ ಬದಲಿಗೆ ಹೊಸದಾಗಿ ಜಾರಿಗೆ ತಂದಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ’ (ವಿಬಿ– ಜಿ ರಾಮ್‌ ಜಿ) ಕಾಯ್ದೆಯು ಕೊಡಗು ಜಿಲ್ಲೆಗೆ ಸಹಕಾರಿಯಾಗಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಕಾಂಗ್ರೆಸ್ ಈ ಕಾಯ್ದೆ ಕುರಿತು ಅಪಪ್ರಚಾರ ನಡೆಸುತ್ತಿದೆ. ಈ ಕಾಯ್ದೆ ಕುರಿತು ಅವರು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಗ್ರಾಮ ಪಂಚಾಯಿತಿಗಳ ಅಧಿಕಾರ ಕಿತ್ತುಕೊಂಡಿದೆ ಎಂಬ ಆರೋಪ ಸತ್ಯಕ್ಕೆ ದೂರ. ಸ್ಥಳೀಯ ಅಗತ್ಯತೆಗೆ ತಕ್ಕಂತೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಈ ನಿಟ್ಟಿನಲ್ಲಿ ಪ್ರಾಕೃತಿಕ ವಿಕೋಪ ಎದುರಿಸುವಂತಹ ಕೊಡಗು ಜಿಲ್ಲೆಗೆ ಅದನ್ನು ತಡೆಯಲು ಬೇಕಾದ ತಡೆಗೋಡೆ ಮತ್ತಿತರ ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೊಳ್ಳಬಹುದು ಎಂದರು.

ADVERTISEMENT

ಈ ಹಿಂದೆ ಇದ್ದ ನರೇಗಾ ಕಾಯ್ದೆಯಲ್ಲಿ ಸೋರಿಕೆ ಹೆಚ್ಚಾಗಿತ್ತು. ಮೇಲ್ವಿಚಾರಣೆ ಕಷ್ಟಸಾಧ್ಯವಾಗಿದ್ದು, ಉತ್ತರದಾಯಿತ್ವ ಯಾರಿಗೂ ಇರಲಿಲ್ಲ. ಆದರೆ, ಈ ಹೊಸ ಕಾಯ್ದೆಯಲ್ಲಿ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.

ಕೃತಕ ಬುದ್ದಿಮೆತ್ತೆ, ಬಯೊಮೆಟ್ರಿಕ್ ಸೇರಿದಂತೆ ವಿನೂತನ ತಂತ್ರಜ್ಞಾನದ ಅಳವಡಿಕೆಯಿಂದ ಮೇಲ್ವಿಚಾರಣೆ ಮಾಡಬಹುದು, ಸೋರಿಕೆ ತಡೆಗಟ್ಟಬಹುದು. ರಾಜ್ಯಗಳ ಪಾಲು ಹೆಚ್ಚಿಸುವ ಮೂಲಕ ಅವರಿಗೂ ಉತ್ತರದಾಯಿತ್ವ ನೀಡಲಾಗಿದೆ. ಈ ಮೂಲಕ ಹಳೆಯ ಕಾಯ್ದೆಯಲ್ಲಿದ್ದ ಎಲ್ಲ ಬಗೆಯ ಲೋಪಗಳನ್ನು ತೆಗೆದು ಹಾಕಲಾಗಿದೆ ಎಂದರು.

ಕೆಲಸದ ದಿನಗಳನ್ನು 120ರಿಂದ 125ಕ್ಕೆ ಹೆಚ್ಚಿಸಲಾಗಿದೆ. ಗ್ರಾಮೀಣ ಜನರ ಬದುಕನ್ನು ಸುಧಾರಿಸಲು ಇದೊಂದು ಲಾಭದಾಯಕ ಕಾಯ್ದೆ. ಜನರು ಕಾಂಗ್ರೆಸ್‌ನ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಕಾಯ್ದೆಯಿಂದ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದು ಹಾಕಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ನಮಗೆ ಗಾಂಧೀಜಿ ಅವರೇ ಆದರ್ಶ. ಅವರ ತತ್ವ, ಸಿದ್ಧಾಂತಗಳನ್ವಯವೇ ಈ ಕಾಯ್ದೆಯನ್ನು ರೂಪಿಸಲಾಗಿದೆ. ಮಾತ್ರವಲ್ಲ, ಆಡಳಿತವನ್ನೂ ನಡೆಸುತ್ತಿದ್ದೇವೆ. ಕಾಂಗ್ರೆಸ್‌ನವರಿಗೆ ಹೆಸರು ಮಾತ್ರ ಮುಖ್ಯವೇ ಹೊರತು ಗಾಂಧೀಜಿ ಅವರ ತತ್ವವಲ್ಲ’ ಎಂದು ತಿರುಗೇಟು ನೀಡಿದರು.

ರಾಜ್ಯದ ಪಾಲನ್ನು ಹೆಚ್ಚಿಸುವಾಗ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾದ ಸರ್ವಾಧಿಕಾರಿ ಧೋರಣೆ ತಳೆಯಲಾಗಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದು ಸಹ ಸುಳ್ಳು ಆರೋಪ. ಈ ಕಾಯ್ದೆ ರೂಪಿಸುವುದಕ್ಕೂ ಮುನ್ನ ಎಲ್ಲ ರಾಜ್ಯದವರೊಂದಿಗೂ ಆಡಳಿತಾತ್ಮಕವಾಗಿ ಚರ್ಚೆ ನಡೆಸಲಾಗಿತ್ತು’ ಎಂದರು.

ವಿಮಾನ ದುರಂತ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ದೃಷ್ಟಿಯಿಂದ ಹೇಳಿಕೆ ನೀಡಿದ್ದಾರೆ. ಯಾವುದೇ ದುರಂತ ನಡೆದರೂ ತನಿಖೆ ನಡೆಸಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ಮುಖಂಡರಾದ ಮಹೇಶ್ ಜೈನಿ, ಅರುಣ್‌ಕುಮಾರ್, ಉಮೇಶ್‌ ಸುಬ್ರಮಣಿ ಭಾಗವಹಿಸಿದ್ದರು.

‘ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮ’

ಬಿಜೆಪಿ ಕೃಷಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ.ಬಿ.ಸಿ.ನವೀನ್‌ಕುಮಾರ್ ಮಾತನಾಡಿ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ’ (ವಿಬಿ– ಜಿ ರಾಮ್‌ ಜಿ) ಕಾಯ್ದೆಯ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕಾಯ್ದೆಯಲ್ಲಿರುವ ಅಂಶಗಳನ್ನು ಕುರಿತು ಜನರಿಗೆ ಮನವರಿಕೆ ಮಾಡಲು ಬಿಜೆಪಿ ನಿರ್ಧರಿಸಿದೆ. ರಾಜ್ಯದ 7 ಸಾವಿರ ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

‘ಕಾಯ್ದೆ ಪರವಾಗಿ ಗ್ರಾಮಸಭೆಗಳಲ್ಲಿ ನಿರ್ಣಯ’

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ ‘ಕೊಡಗಿನ ಬಹುತೇಕ ಗ್ರಾಮ ‍ಪಂಚಾಯಿತಿಗಳ ಗ್ರಾಮಸಭೆಗಳಲ್ಲಿ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ’ (ವಿಬಿ– ಜಿ ರಾಮ್‌ ಜಿ) ಕಾಯ್ದೆಯ ಪರವಾಗಿ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಹೇಳಿದರು. ‘ನಾಪೋಕ್ಲುವಿನ ಶಾಲೆಗೆ ಸೇರಿದ ಜಾಗದಲ್ಲಿ ಶಾದಿಮಹಲ್ ನಿರ್ಮಿಸುತ್ತಿರುವುದರ ವಿರುದ್ಧ ಬಿಜೆಪಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿತ್ತು. ಆ ಬಳಿಕ ಕಾಮಗಾರಿ ಸ್ಥಗಿತಗೊಳಿಸಿ ಸರ್ವೆ ಮಾಡಲು ಹೇಳಲಾಗಿದೆ. ಸರ್ವೆ ನಡೆಸಿ ಆ ಜಾಗ ಶಾಲೆಗೆ ಸಂಬಂಧಿಸಿಲ್ಲ ಎಂದು ದೃಢವಾದರೆ ಶಾದಿಮಹಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಒಂದು ವೇಳೆ ಆ ಜಾಗ ಶಾಲೆಗೆ ಸೇರಿದ್ದಾದರೇ ಅದನ್ನು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರವೇ ಬಳಕೆ ಮಾಡಿಕೊಳ್ಳಬೇಕು’ ಎಂದರು.

ರೈಲು ಯೋಜನೆ ಸ್ಥಗಿತವೆ ಹೊರತು ರದ್ದಾಗಿಲ್ಲ’

‘ಕುಶಾಲನಗರಕ್ಕೆ ರೈಲು ಸಂಪರ್ಕ ಒದಗಿಸುವ ಯೋಜನೆ ಸ್ಥಗಿತವಾಗಿದೆಯಷ್ಟೇ ಹೊರತು ರದ್ದಾಗಿಲ್ಲ’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಭೂಸ್ವಾಧೀನ ಸಾಧ್ಯವಿಲ್ಲ ಎಂದು ರಾಜ್ಯಸರ್ಕಾರ ಪತ್ರ ಬರೆದಿತ್ತು. ಅದರ ಆಧಾರದ ಮೇಲೆ ರೈಲ್ವೆ ಇಲಾಖೆ ಈ ಯೋಜನೆಯನ್ನು ಸ್ಥಗಿತಗೊಳಿಸಿದೆ. ತನ್ನ ನಿರ್ಧಾರವನ್ನು ಪುನರ್‌ ಪರಿಶೀಲಿಸುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಒಂದು ವೇಳೆ ರಾಜ್ಯ ಸರ್ಕಾರ ಸಹಕಾರ ನೀಡಿದರೆ ನಿಶ್ಚಿತವಾಗಿಯೂ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.