ADVERTISEMENT

‘ರಾಷ್ಟ್ರಾಭಿಮಾನ ಬೆಳೆದರೆ ದೇಶ ಪ್ರಗತಿ’

ಮಡಿಕೇರಿಯಲ್ಲಿ ಯೋಧನಮನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಜುಲೈ 2018, 13:45 IST
Last Updated 8 ಜುಲೈ 2018, 13:45 IST
ಕೊಡಗು ಯೋಧಾಭಿಮಾನಿ ಬಳಗದ ಸದಸ್ಯರು ಭಾನುವಾರ ಮಡಿಕೇರಿಯ ಸುದರ್ಶನ ವೃತ್ತದಿಂದ ಬೈಕ್ ಜಾಥಾ ನಡೆಸಿದರು
ಕೊಡಗು ಯೋಧಾಭಿಮಾನಿ ಬಳಗದ ಸದಸ್ಯರು ಭಾನುವಾರ ಮಡಿಕೇರಿಯ ಸುದರ್ಶನ ವೃತ್ತದಿಂದ ಬೈಕ್ ಜಾಥಾ ನಡೆಸಿದರು   

ಮಡಿಕೇರಿ:‘ಪ್ರತಿಯೊಬ್ಬರಲ್ಲಿಯೂ ದೇಶದ ಬಗ್ಗೆ ಗೌರವ ಬೆಳೆದಾಗ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರ ಆತ್ಮಕ್ಕೆ ಶಾಂತಿ ಸಿಗುತ್ತದೆ’ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಕಂಡ್ರತಂಡ ಸಿ. ಸುಬ್ಬಯ್ಯ ಹೇಳಿದರು.

ನಗರದ ಕೊಡವ ಸಮಾಜದಲ್ಲಿ ಭಾನುವಾರ ಕೊಡಗು ಯೋಧಾಭಿಮಾನಿ ಬಳಗದ ಆಶ್ರಯದಲ್ಲಿ ‘ಯಾರಿಗಾಗಿ ನಮ್ಮವರ ಬಲಿದಾನ’ ಯೋಧನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಸೈನಿಕರು ತಮ್ಮ ಕುಟುಂಬವನ್ನು ಬಿಟ್ಟು ದೇಶ ರಕ್ಷಣೆಗಾಗಿ ಗಡಿಯಲ್ಲಿ ಸದಾ ಕಟ್ಟೆಚ್ಚರದಿಂದ ಕಾಯುವ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು’ ಎಂದು ಸಲಹೆ ಮಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರನ್ನು ನಾವು ಇಂದು ಮರೆಯುತ್ತಿದ್ದೀವೆ. ಇದೀಗ ಯುವಕರು ಸೈನಿಕರನ್ನು ಮರೆಯುವ ಸ್ಥಿತಿಗೂ ತಲುಪಿದ್ದಾರೆ. ಇದರಿಂದ ದೇಶಕ್ಕೆ ದ್ರೋಹ ಮಾಡಿದಂತೆ ಆಗುತ್ತಿದೆ’ ಎಂದು ಎಚ್ಚರಿಸಿದರು. ನಿವೃತ್ತ ಮೇಜರ್‌ ಜನರಲ್ ಕುಪ್ಪಂಡ ಪಿ. ನಂಜಪ್ಪ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯತಂದುಕೊಡಲು ಹಗಲಿರುಳು ಶ್ರಮಿಸಿ, ಜೀವತ್ಯಾಗ ಮಾಡಿದ ಮಹಾತ್ಮರನ್ನು ನಾವು ಸದಾ ನೆನೆಯಬೇಕು; ಯುವಕರಲ್ಲಿ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳುವುದರಿಂದ ದೇಶದ ಪ್ರಗತಿ ಹೆಚ್ಚುತ್ತದೆ’ ಎಂದು ಹೇಳಿದರು.

ADVERTISEMENT

ಸಾಮಾಜಿಕ ಚಿಂತಕ ಅರ್ಜುನ್ ದೇವಾಲದಕೆರೆ ಮಾತನಾಡಿ, ‘ಸ್ವಾತಂತ್ರ್ಯ ಹೇಗೆ ಬಂತು ಎಂಬುದನ್ನು ಮಕ್ಕಳಿಗೆ ಸರಿಯಾಗಿ ತಿಳಿಸುವ ಜವಾಬ್ದಾರಿ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಇರಬೇಕಿದೆ. ಎಬಿಸಿಡಿ ಎಂಬುದನ್ನು ‘ಎ’ ಫಾರ್ ಆ್ಯಪಲ್, ‘ಬಿ’ ಫಾರ್ ಬಾಲ್‌ ಎಂಬುದನ್ನು ಬಿಟ್ಟು ‘ಎ’ ಫಾರ್ ಆಜಾದ್‌, ‘ಬಿ’ ಫಾರ್ ಭಗತ್‌ಸಿಂಗ್, ‘ಸಿ’ ಫಾರ್ ಚಿತ್ರರಂಜನ್‌ ದಾಸ್‌ ಎಂದು ಮಕ್ಕಳಿಗೆ ಹೇಳಿಕೊಡಬೇಕು’ ಎಂದು ಸಲಹೆ ಮಾಡಿದರು.

ಸೈನಿಕರ ಶ್ಲಾಘನೀಯ ಸೇವೆ ಮತ್ತು ಬಲಿದಾನವನ್ನು ಕಡೆಗಣಿಸಿ ಕೆಲವು ರಾಜಕೀಯ ವ್ಯಕ್ತಿಗಳು, ಸಿನಿಮಾ ನಟರು ಸೇನೆಯ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವುದು ವಿಷಾದಕರ. ಜನರಲ್ಲಿ ಸೈನಿಕರ ಬಗ್ಗೆ ಗೌರವ ಭಾವನೆ ಇನ್ನಷ್ಟು ಹೆಚ್ಚಾಗಬೇಕಿದೆ ಎಂದು ಹೇಳಿದರು.

ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ‘ರಾಷ್ಟ್ರೀಯ ದಿನಾಚರಣೆಯಂದು ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ತಂದ ಹೋರಾಟಗಾರರನ್ನು ನೆನೆಯುವುದಲ್ಲ; ನಿಮ್ಮೆದುರು ದೇಶ ಕಾಯುವ ಸೈನಿಕರು ಬಂದಾಗ ಒಂದು ಸೆಲ್ಯೂಟ್‌ ಹೊಡೆಯಿರಿ. ಇದರಿಂದ ಅವರಲ್ಲಿ ದೇಶ ಸೇವೆ ಮಾಡುವ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ಶತ್ರುಗಳು ದೇಶದ ಒಳಗೆ ನುಸುಳದಂತೆ ಸದಾ ಕಟ್ಟೆಚ್ಚರದಿಂದ ಕಾಯುತ್ತಿರುವ ಸೈನಿಕರ ಬಗ್ಗೆ ನಿಮ್ಮ ಪ್ರಾರ್ಥನೆ ಇರಲಿ’ ಎಂದು ಹೇಳಿದರು.

‘ಸೈನಿಕರಿಗಾಗಿ ಉತ್ತಮ ಕಾರ್ಯಕ್ರಮಗಳನ್ನು ಮಾಡುವುದು ಸುಲಭದ ವಿಚಾರ ಅಲ್ಲ, ಮುಖ್ಯವಾಗಿ ಆಯೋಜಕರಲ್ಲಿ ಉದ್ದೇಶ ಶುದ್ಧಿ, ಶೀಲ ಹಾಗೂ ಸಮಾನತೆಭಾವ ಬೇಕು. ಇದು ಯೋಧಾಭಿಮಾನಿ ಬಳಗದ ಯುವಕರಲ್ಲಿದೆ’ ಎಂದು ಶ್ಲಾಘಿಸಿದರು.

ಇದೇ ವೇಳೆ ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರ ಕುಟುಂಬದ ಸದಸ್ಯರು ಹಾಗೂ ಗಾಯಾಳು ಸೈನಿಕರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಸುದರ್ಶನ ವೃತ್ತದಿಂದ ಬೈಕ್‌ ಜಾಥಾ ಹಾಗೂ ವೀರ ಸೇನಾನಿಗಳ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗಣ್ಯರು ಗೌರವ ಸಲ್ಲಿಸಿದರು.

ಬಳಗದ ಪ್ರಮುಖರಾದ ಸತ್ಯ, ವಿಜಯ್ ಹಾನಗಲ್, ದೀಪಕ್, ಗುರುಪ್ರಸಾದ್, ಮಿನಾಜ್ ಪ್ರವೀಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.