ADVERTISEMENT

ಸುವರ್ಣಾಕ್ಷರಗಳಲ್ಲಿ ಸಿಂಚನಾ ದಾಖಲೆ

ಯೋಗದಲ್ಲಿ ಹ್ಯಾಟ್ರಿಕ್ ವಿಶ್ವದಾಖಲೆ ಮಾಡಿದ 6ನೇ ತರಗತಿ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 3:55 IST
Last Updated 29 ಅಕ್ಟೋಬರ್ 2025, 3:55 IST
ಬಾಲಕಿ ಸಿಂಚನಾ ಮಾಡುತ್ತಿದ್ದ ಯೋಗಾಸನಗಳನ್ನು ವೇದಿಕೆ ಮೇಲಿದ್ದ ಗಣ್ಯರು ಅಚ್ಚರಿಯಿಂದ ವೀಕ್ಷಿಸಿದರು
ಬಾಲಕಿ ಸಿಂಚನಾ ಮಾಡುತ್ತಿದ್ದ ಯೋಗಾಸನಗಳನ್ನು ವೇದಿಕೆ ಮೇಲಿದ್ದ ಗಣ್ಯರು ಅಚ್ಚರಿಯಿಂದ ವೀಕ್ಷಿಸಿದರು   

ಮಡಿಕೇರಿ: ಬೀಸುತ್ತಿದ್ದ ಕುಳಿರ್ಗಾಳಿ, ಮೋಡ ಮುಸುಕಿದ ವಾತಾವರಣದ ಮಧ್ಯೆ ಬಾಲಕಿ ಸಿಂಚನಾ ಯೋಗದಲ್ಲಿ ನಿರ್ಮಿಸಿದ 3 ವಿಶ್ವದಾಖಲೆಗಳು ಸುವರ್ಣಾಕ್ಷರಗಳಲ್ಲಿ ದಾಖಲಾದವು.

ದೇಹವನ್ನು ಬಿಲ್ಲಿನಂತೆ ಬಗ್ಗಿಸುತ್ತಾ, ಚಕ್ರದಂತೆ ತಿರುಗಿಸುತ್ತಾ ಮಾಡಿದ ಯೋಗಾಸನಗಳು ಎಲ್ಲರನ್ನೂ ಅಚ್ಚರಿಗೊಳ್ಳುವಂತೆ ಮಾಡಿದವು. ಮಾತ್ರವಲ್ಲ, ದಾಖಲೆಗಾಗಿ ನಿಗದಿಪಡಿಸಿದ್ದ ಗುರಿಯನ್ನೂ ಮೀರಿ ಮಾಡಿದ ಸಾಧನೆಗಳು ಎಲ್ಲರನ್ನೂ ಮೂಕವಿಸ್ಮಿತಗೊಳಿಸಿದವು.

ಈ ಎಲ್ಲ ಅಪರೂಪದ ದೃಶ್ಯಗಳು ತಾಲ್ಲೂಕಿನ ಮದೆನಾಡು ಗ್ರಾಮದ ಬಿಜಿಎಸ್‌ ಶಾಲೆಯ ಸಭಾಂಗಣದಲ್ಲಿ ಮಂಗಳವಾರ ಕಂಡು ಬಂತು.

ADVERTISEMENT

‘ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಇಲ್ಲಿ ನಿರ್ಮಿಸಿದ 3 ದಾಖಲೆಗಳು ಗೋಲ್ಡನ್ ಬುಕ್‌ ಆಫ್ ವರ್ಲ್ಡ್‌ ರೆಕಾರ್ಡ್‌ನಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾಗಿವೆ. ಸಿಂಚನಾ ಕೊಡಗಿನ ಚಿನ್ನದ ಹುಡುಗಿ’ ಎಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯಾ ವಿಭಾಗದ ಮುಖ್ಯಸ್ಥ ಮನೀಷ್ ಬಿಷ್ಣೋಯಿ ಘೋಷಿಸುತ್ತಿದ್ದಂತೆ, ಸಭಿಕರ ಚಪ್ಪಾಳೆ ಮುಗಿಲು ಮುಟ್ಟಿದವು.

ಡಿಂಬಾಸನ ಭಂಗಿಯಲ್ಲಿ 1 ನಿಮಿಷಕ್ಕೆ 10 ಸುತ್ತು ಬರುವ ಗುರಿ ನಿಗದಿ ಮಾಡಲಾಗಿತ್ತು. ಆದರೆ, ಸಿಂಚನಾ ನಿಮಿಷಕ್ಕೆ 15 ಸುತ್ತು ಬರುವ ಮೂಲಕ ಅಚ್ಚರಿ ಮೂಡಿಸಿದಳು. ಖಂಡಪೀಡಾಸನ ಭಂಗಿಯಲ್ಲಿ 1 ನಿಮಿಷ ಇರುವ ಗುರಿ ಇತ್ತು. ಆದರೆ, 1.44 ನಿಮಿಷ ಇರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು. ಧನುರಾಸನ ಭಂಗಿಯಲ್ಲಿ ಒಂದು ನಿಮಿಷಕ್ಕೆ 18 ಬಾರಿ ಸುತ್ತುವ ಮೂಲಕ ಅಂತರರಾಷ್ಟ್ರೀಯ ದಾಖಲೆ ನಿರ್ಮಿಸಿದಳು.

‘ಧನುರಾಸನ ಮತ್ತು ಡಿಂಬಾಸನ ತುಂಬಾ ಕ್ಲಿಷ್ಟಕರವಾದ ಆಸನಗಳು. ಈ ಭಂಗಿಯಲ್ಲಿ ನಿಲ್ಲುವುದೇ ಬಲು ಕಷ್ಟ. ಇಂತಹ ಆಸನದ ಸ್ಥಿತಿಯಲ್ಲಿ ಗಿರಗಿರನೇ ತಿರುಗಿದ್ದು ಅಚ್ಚರಿ ಮೂಡಿಸಿದೆ. ಇದು ಹ್ಯಾಟ್ರಿಕ್ ವಿಶ್ವದಾಖಲೆ’ ಎಂದು ಶ್ಲಾಘಿಸಿದರು.

‘ಸಿಂಚನಾ ಅವರ ತಾಯಿ ರೇಣುಕಾ ಮತ್ತು ತಂದೆ ಕೀರ್ತಿಕುಮಾರ್ ಅವರು ತಮ್ಮ ಪುತ್ರಿಯನ್ನು ಇಡೀ ರಾಷ್ಟ್ರಕ್ಕೆ ಆಸ್ತಿಯನ್ನಾಗಿ ರೂಪಿಸಿದ್ದಾರೆ. ಈಕೆಯ ಸಾಧನೆಯಲ್ಲಿ ಶಾಲೆಯ ಆಡಳಿತ ಮಂಡಳಿಯಿಂದಲೂ ಅನನ್ಯವಾದ ಬೆಂಬಲ ದೊರೆತಿದೆ’ ಎಂದರು.

ಈ ಹಿಂದೆ ಜೂನ್ 21ರಲ್ಲಿ ಡಿಂಬಾಸನದ ಸ್ಥಿತಿಯಲ್ಲಿ 30 ನಿಮಿಷ 5 ಸೆಕೆಂಡ್‌ಗಳವರೆಗೆ ಇರುವ ದಾಖಲೆ ನಿರ್ಮಿಸಿದ್ದು ಸಹ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದೆ ಎಂದೂ ಹೇಳಿದರು.

ಯೋಗ ಶಿಕ್ಷಕರಾದ ಮಹೇಶ್ ಕುಮಾರ್ ಮಾತನಾಡಿ, ‘ಎಲ್ಲರೂ ಯೋಗಾಸನ ಮಾಡಬೇಕು. ಕನಿಷ್ಠ ತಮ್ಮ ಕೈಯಿಂದಾಗುವ ಯೋಗಾನಸಗಳನ್ನಾದರೂ ನಿತ್ಯವೂ ಮಾಡಿ’ ಎಂದು ಕಿವಿಮಾತು ಹೇಳಿದರು.

ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್‌ಗೌಡ ಇಬ್ಬರೂ ಸಿಂಚನಾಳಿಗೆ ತಲಾ ₹ 25 ಸಾವಿರ ನಗದು ಪುರಸ್ಕಾರ ನೀಡಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರು–ಕೊಡಗು ಶಾಖಾಮಠದ ಸೋಮೇಶ್ವರನಾಥ ಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಶಾಲೆಯ ಪ್ರಾಂಶುಪಾಲ ಉದಯರವಿ ಭಾಗವಹಿಸಿದ್ದರು.

ಇಲ್ಲಿಯವರೆಗೆ ಸಿಂಚನಾ ಅಂತರರಾಷ್ಟ್ರೀಯ ಮಟ್ಟದ ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ 2, ಗೋಲ್ಡನ್ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ 8, ರಾಷ್ಟ್ರಮಟ್ಟದ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ 1 ಹಾಗೂ ರಾಜ್ಯಮಟ್ಟದ ಕರ್ನಾಟಕ ಅಚೀವರ್ಸ್ ಬುಕ್ ಆಫ್‌ ರೆಕಾರ್ಡ್‌ನಲ್ಲಿ 1 ದಾಖಲೆ ನಿರ್ಮಿಸಿದ್ದಾಳೆ.

ಬಾಲಕಿ ಸಿಂಚನಾಳಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಪ್ರಮಾಣಪತ್ರವನ್ನು ವಿತರಿಸಲಾಯಿತು
ಬಾಲಕಿ ಸಿಂಚನಾಳ ಯೋಗ ಪ್ರದರ್ಶನವನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವೀಕ್ಷಿಸಿದರು

ಸಿಂಚನಾ ಸಾಧನೆ ನೋಡಿದ್ದೇ ನಮ್ಮ ಪುಣ್ಯ; ಪೊನ್ನಣ್ಣ

‘11 ವರ್ಷ ವಯಸ್ಸಿನ ಸಿಂಚನಾ ಇಂತಹ ಕ್ಲಿಷ್ಟಕರ ಪ್ರದರ್ಶನ ಮಾಡಿರುವುದು ಸೋಜಿಗ ಮೂಡಿಸಿದೆ. ಈಕೆಯ ಸಾಧನೆಯ ಹಿಂದೆ ತಾಯಿ ಮತ್ತು ತಂದೆ ಅವರ ಶ್ರಮ ಸೇರಿದೆ. ಈಕೆ ನಾಡಿನ ಜನರ ಮನ ಗೆದ್ದಿದ್ದಾಳೆ. ಆಕೆಯ ಸಾಧನೆಯನ್ನು ಸುವರ್ಣಾಕ್ಷರಗಳಲ್ಲಿ ಬರೆದುದನ್ನು ವೀಕ್ಷಿಸುವ ಅವಕಾಶ ಸಿಕ್ಕಿದ್ದೇ ನಮ್ಮ ಪುಣ್ಯ’ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜಿಎಸ್ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಹ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಮನಸ್ಸಿನಲ್ಲಿರುವ ಕ್ಲೇಶ ತೆಗೆಯಲು ಬೇಕು ಯೋಗ; ನಿರ್ಮಲಾನಂದನಾಥ ಸ್ವಾಮೀಜಿ‌

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ‘ಯೋಗದಿಂದ ಮನಸ್ಸಿನಲ್ಲಿರುವ ಕ್ಲೇಶ ಕೊಳೆ ತೆಗೆಯಬಹುದು’ ಎಂದು ಹೇಳಿದರು. ಅಷ್ಟಾಂಗಯೋಗ ಶಿಷ್ಟಾಂಗ ಯೋಗ ಕುರಿತು ಸವಿಸ್ತಾರವಾಗಿ ಮಾತನಾಡಿದ ಅವರು ಸಿಂಚನಾ ಕ್ಲಿಷ್ಟಕರವಾದ ಯೋಗಾಸನ ಮಾಡಿರುವುದರ ಹಿಂದೆ ಅಕೆಯ ದೀರ್ಘಕಾಲದ ಶ್ರಮ ಅಭ್ಯಾಸ ಇದೆ ಎಂದರು. ಯಾವುದೆ ಕೆಲಸವನ್ನು ಗೊಣಗಿಕೊಂಡು ಮಾಡದೇ ಶ್ರದ್ಧೆ ಗೌರವದಿಂದ ಮಾಡಿದರೆ ಯಶಸ್ಸು ಖಂಡಿತಾ ಸಿಗುತ್ತದೆ ಎಂದು ಹೇಳಿದರು. ಒಬ್ಬ ತಾಯಿ ಮನಸ್ಸು ಮಾಡಿದರೆ ಪಾಂಡವರಂತಹ ಮಕ್ಕಳು ಜನಿಸುತ್ತಾರೆ ಒಬ್ಬ ತಾಯಿ ಕಣ್ಣು ಮುಚ್ಚಿದರೆ ಕೌರವರಂತಹ ಮಕ್ಕಳು ಹುಟ್ಟುತ್ತಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.