ADVERTISEMENT

ಜಿಲ್ಲಾ ಪಂಚಾಯಿತಿಗೆ ಸುಂದರ ಕಟ್ಟಡ ಸಿದ್ಧ

ಕೊಡಗು: ಬಹುತೇಕ ಕಾಮಗಾರಿ ಪೂರ್ಣ; ಶೀಘ್ರವೇ ಸ್ಥಳಾಂತರ ಸಾಧ್ಯತೆ, ಕೊನೆಗೂ ಐತಿಹಾಸಿಕ ‘ಅರಮನೆ’ಗೆ ಮುಕ್ತಿ

ಅದಿತ್ಯ ಕೆ.ಎ.
Published 11 ಜೂನ್ 2019, 19:30 IST
Last Updated 11 ಜೂನ್ 2019, 19:30 IST
ಕೊಡಗು ಜಿಲ್ಲಾ ಪಂಚಾಯಿತಿ ನೂತನ ಕಟ್ಟಡದ ಪ್ರವೇಶ ದ್ವಾರ
ಕೊಡಗು ಜಿಲ್ಲಾ ಪಂಚಾಯಿತಿ ನೂತನ ಕಟ್ಟಡದ ಪ್ರವೇಶ ದ್ವಾರ   

ಮಡಿಕೇರಿ: ಬಹುಕಾಲದಿಂದಲೂ ಸ್ವಂತ ಕಟ್ಟಡವಿಲ್ಲದೇ ಮಡಿಕೇರಿಯ ಐತಿಹಾಸಿಕ ‘ಅರಮನೆ’ಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಕೊಡಗು ಜಿಲ್ಲಾ ಪಂಚಾಯಿತಿಗೆ ಸ್ವಂತ ಕಟ್ಟಡ ಭಾಗ್ಯ ಸಿಗುವ ದಿನಗಳು ಹತ್ತಿರವಾಗಿದೆ.

ನೂತನ ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರವೇ ಆ ಕಟ್ಟಡಕ್ಕೆ ಕಚೇರಿ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ. ನಗರದ ಹೊರವಲಯದಲ್ಲಿ ಸುಂದರ ಕಟ್ಟಡ ತಲೆಯೆತ್ತಿದ್ದು ಕಣ್ಮನ ಸೆಳೆಯುತ್ತಿದೆ.

ಇಷ್ಟು ವರ್ಷ ಕುಸಿಯುವ ಹಂತದಲ್ಲಿದ್ದ ‘ಅರಮನೆ’ಯಲ್ಲೇ ಕೆಲಸ ನಿರ್ವಹಿಸಬೇಕಾದ ಅನಿವಾರ್ಯ ಸಿಬ್ಬಂದಿಗೆ ಇತ್ತು. ಅದಕ್ಕೆ ಶೀಘ್ರವೇ ಮುಕ್ತಿ ಸಿಗಲಿದ್ದು, ಹೊಸ ಕಟ್ಟದಲ್ಲಿ ಕೆಲಸ ಮಾಡಲು ಸಿಬ್ಬಂದಿ ಅಣಿ ಆಗಬೇಕಿದೆ. ಅನೇಕ ವರ್ಷಗಳ ಬೇಡಿಕೆಯಂತೆ ನಗರದ ಹೊರವಲಯದ ವಿದ್ಯಾನಗರದ ಸುಂದರ ಪ್ರದೇಶದಲ್ಲಿ ನೂತನ ಕಟ್ಟಡ ತಲೆಯೆತ್ತಿದೆ.

ADVERTISEMENT

ವಿಶಾಲವಾದ ಜಾಗದಲ್ಲಿ ಕಟ್ಟಡವೂ ಆಕರ್ಷಣೀಯವಾಗಿದೆ. ಅಂದಾಜು ₹ 26 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಟ್ಟಡದಲ್ಲಿ ಅತ್ಯಾಧುನಿಕ ಸೌಲಭ್ಯ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. 2016ರಲ್ಲಿ ಜಿಲ್ಲಾ ಪಂಚಾಯಿತಿ‌ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. 3 ವರ್ಷಗಳ ಬಳಿಕ ಕಟ್ಟಡ ಸಿದ್ಧವಾಗಿದೆ.

ಕಟ್ಟಡದ ರೂಪುರೇಷೆ ಹೇಗಿದೆ: ಅಂದಾಜು 5 ಎಕರೆ ವಿಸ್ತೀರ್ಣವನ್ನು ಜಿಲ್ಲಾ ಪಂಚಾಯಿತಿಗೆ ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿ 1.60 ಎಕರೆ ಪ್ರದೇಶದಲ್ಲಿ ಕಟ್ಟಡ ಮೇಲೆದಿದ್ದೆ. ಮೂರು ಅಂತಸ್ತಿನ ಕಟ್ಟಡವಿದೆ. ಅತ್ಯಾಧುನಿಕ ಫರ್ನಿಚರ್, ಲಿಫ್ಟ್ ವ್ಯವಸ್ಥೆ, ವಿಶಾಲ ಸಭಾಂಗಣ, ಕುಡಿಯುವ ನೀರು, ಶೌಚಾಲಯ ಹೊಂದಿದ್ದು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲಗಳು ಲಭಿಸಲಿದೆ. ನೆಲಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಏನೇನಿದೆ?: ಮೊದಲನೇ ಮಹಡಿಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಕಚೇರಿ, ಅದರ ಪಕ್ಕದಲ್ಲೇ ಉಪಾಧ್ಯಕ್ಷರ ಕೊಠಡಿಯಿದೆ. ಶಾಸಕರು, ವಿಧಾನ ಪರಿಷತ್‌ ಸದಸ್ಯ ಹಾಗೂ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಿಗೂ ಪ್ರತ್ಯೇಕ ಕೊಠಡಿಗಳಿವೆ.ಅದೇ ರೀತಿ 2ನೇ ಮಹಡಿಯಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಕಚೇರಿಗಳಿವೆ. 3ನೇ ಮಹಡಿಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ), ಮುಖ್ಯ ಲೆಕ್ಕಾಧಿಕಾರಿ, ಮೀಟಿಂಗ್ ಹಾಲ್, ವಿಡಿಯೊ ಕಾನ್ಫೆರನ್ಸ್ ಹಾಲ್, ಯೋಜನಾಧಿಕಾರಿ ಕಚೇರಿ, ಉಪ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಯೋಜನಾ ನಿರ್ದೇಶಕ ಕಚೇರಿಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.