ADVERTISEMENT

ಅಂಗವಿಕಲರ ಬದುಕಿಗೆ ಕೌಶಲ್ಯದ ಆಸರೆ

ಕೆ.ನರಸಿಂಹ ಮೂರ್ತಿ
Published 27 ಏಪ್ರಿಲ್ 2012, 6:15 IST
Last Updated 27 ಏಪ್ರಿಲ್ 2012, 6:15 IST

ಕೋಲಾರ: ಮುದ್ದು ಸುರಿಸುವ ಪುಟಾಣಿ ಮಕ್ಕಳು ಇಲ್ಲಿ ಹಾಡುತ್ತಾ- ಕುಣಿಯುತ್ತಾ- ನಲಿದಾಡುತ್ತಿದ್ದಾರೆ. ಇವರಲ್ಲಿ ಕೆಲವರು ಅಂಧರು, ಹಲವರು ಬುದ್ಧಿಮಾಂದ್ಯರು, ಕಿವುಡ-ಮೂಕರು ಮತ್ತು ದೈಹಿಕ ಅಂಗವಿಕಲತೆಗೆ ತುತ್ತಾದವರು.
 
ಆದರೆ ದೇಹದ ವೈಫಲ್ಯವನ್ನು ಮನಸಿನ ಸಾಮರ್ಥ್ಯದಿಂದ ಮೀರುವ ಪ್ರಯತ್ನ ಮಾಡುತ್ತಿದ್ದಾರೆ.
ಇದು ಸಾಮಾನ್ಯ ಮಕ್ಕಳಿರುವ ಬೇಸಿಗೆ ಶಿಬಿರವಲ್ಲ. ಅಂಥ ಶಿಬಿರಗಳಿಗೆ ಪ್ರವೇಶವನ್ನೇ ಕಾಣದ ವಿಶೇಷ ಮಕ್ಕಳಿಗೆಂದೇ ನಡೆಯುತ್ತಿರುವ ಶಿಬಿರ.

ಅವರನ್ನು ನೋಡಲು ತಾಲ್ಲೂಕಿನ ತಲಗುಂದ ಗ್ರಾಮಕ್ಕೆ ಬರಬೇಕು. ಅಂಗವಿಕಲ ಮಕ್ಕಳಿಗಾಗಿ ನಡೆಯುತ್ತಿರುವ ಜ್ಞಾನ ಮಂದಿರ ವಿದ್ಯಾಸಂಸ್ಥೆಯು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ 68 ಅಂಗವಿಕಲ ಮಕ್ಕಳನ್ನು ಒಟ್ಟಿಗೆ ಸೇರಿಸಿ ಉಚಿತ ಬೇಸಿಗೆ ತರಬೇತಿ ಶಿಬಿರವನ್ನು ಕಳೆದ ಒಂದು ವಾರದಿಂದ ನಡೆಸುತ್ತಿದೆ. ರಜೆ ಕಾಲದ ಮೌನ ಆ ಶಾಲೆಯ ಆವರಣದಲ್ಲಿ ಇಲ್ಲ. ಬದಲಿಗೆ ಮಕ್ಕಳ ಕಲಿಕೆ, ಕಲರವ, ಸಂಜ್ಞಾಭಾಷೆಯ ಜಾತ್ರೆಯೇ ನೆರೆದಿದೆ.

ವಾಕ್-ಶ್ರವಣ ದೋಷವುಳ್ಳ 18, ಅಂಧರಾದ 8, ಬುದ್ಧಿಮಾಂದ್ಯತೆಯುಳ್ಳ 28 ಮತ್ತು ದೈಹಿಕ ಅಂಗವಿಕಲರಾದ 14 ಮಂದಿ ಇರುವ ಸನಿವಾಸ ಬೇಸಿಗೆ ಶಿಬಿರದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಹಲವು ಚಟುವಟಿಕೆಗಳು ನಡೆಯುತ್ತಿವೆ.ಕುಶಲ ಕಲಿಕೆ ಮತ್ತು ಆತ್ಮವಿಶ್ವಾಸ ಮೂಡಿಸುವಿಕೆಯೇ ಪ್ರಮುಖ ಉದ್ದೇಶವಾದ ಶಿಬಿರದಲ್ಲಿ ಮಕ್ಕಳ ಅಂಗವೈಕಲ್ಯಕ್ಕೆ ಅನುಗುಣವಾಗಿ ಗುಂಪುಗಳನ್ನು ವಿಂಗಡಿಸಲಾಗಿದೆ.

ಕಿವುಡ- ಮೂಕ ಮಕ್ಕಳಿಗೆ ಸಂಜ್ಞಾಭಾಷೆ, ಶಬ್ದಗಳನ್ನು ಗುರುತಿಸುವಿಕೆ, ಮಾತನಾಡುವುದು, ವಿವಿಧ ಬಗೆಯಲ್ಲಿ ಸಂವಹನ ಸಾಧಿಸುವುದನ್ನು ಹೇಳಿಕೊಡಲಾಗುತ್ತಿದೆ. ಬುದ್ಧಿಮಾಂದ್ಯರಿಗೆ ಸ್ವಚ್ಛತೆ ಬಗ್ಗೆ ಹೆಚ್ಚು ಅರಿವು ಮೂಡಿಸುವ ಪ್ರಯತ್ನ ನಡೆದಿದೆ. ಇದರ ಜೊತೆಗೆ ಪೇಪರ್ ಕಟಿಂಗ್, ಬಣ್ಣ ಹಚ್ಚುವುದು, ನೃತ್ಯ, ತೋಟಗಾರಿಕೆಯ ಪಾಠಗಳೂ ನಡೆಯುತ್ತಿವೆ.

ದೃಷ್ಟಿದೋಷವುಳ್ಳವರಿಗೆ ಸ್ಥಳ ಗುರುತಿಸುವುದು, ಪಾತ್ರೆಗಳನ್ನು ಗುರುತಿಸುವುದು, ಕೋಲು ಹಿಡಿದು ನಡೆಯುವುದು, ಬ್ರೈಲ್ ಲಿಪಿ ಕಲಿಸುವುದು ಸೇರಿದಂತೆ ಪ್ರತ್ಯೇಕ ಪಠ್ಯಕ್ರಮ ರೂಪಿಸಲಾಗಿದೆ. ದೈಹಿಕ ಅಂಗವಿಕಲರಿಗೆ ಗ್ರಹಿಸುವ ಸಾಮರ್ಥ್ಯ ಹೆಚ್ಚಿರುವುರಿಂದ ಅವರಿಗೆ ಹಲವು ಕೌಶಲಗಳನ್ನುಹೇಳಿಕೊಡಲಾಗುತ್ತಿದೆ. ಏ.18ರಿಂದ ಶುರುವಾಗಿರುವ ಶಿಬಿರದಲ್ಲಿ ಈಗಾಗಲೇ ಈ ಮಕ್ಕಳು ಪುಣ್ಯಕೋಟಿ ನಾಟಕವನ್ನೂ ಕಲಿತು ಪ್ರದರ್ಶಿಸಿದ್ದಾರೆ.ತಮ್ಮಂತೆಯೇ ಇರುವ ಇತರ ಮಕ್ಕಳೊಂದಿಗೆ ಸಂತಸದಿಂದ ಸಮಯ ಕಳೆಯಲು ಈ ಶಿಬಿರ ಅತ್ಯುತ್ತಮ ಅವಕಾಶ ಒದಗಿಸಿಕೊಟ್ಟಿದೆ.

ಮಕ್ಕಳ ಬೆನ್ನುತಟ್ಟುವುದೇ ಉದ್ದೇಶ...

ಅಂಗವಿಕಲ ಮಕ್ಕಳಿಗಾಗಿ ವಿಶೇಷ ಬೇಸಿಗೆ ಶಿಬಿರವನ್ನು ಮೂರು ವರ್ಷದಿಂದ ಹಮ್ಮಿಕೊಳ್ಳಲಾಗುತ್ತಿದೆ. ಇದು ನಾಲ್ಕನೇ ವರ್ಷ. ಶಿಬಿರದ ಒಟ್ಟಾರೆ ಚಟುವಟಿಕೆಗಳು ಕಡಿಮೆ ಸಾಮರ್ಥ್ಯದ ಮಕ್ಕಳನ್ನು ಹುರಿದುಂಬಿಸುವ ಸಲುವಾಗಿಯೇ ರೂಪುಗೊಂಡಂಥವು.

ಈ ಮಕ್ಕಳನ್ನು ಯಾರೂ ಸಾಮಾನ್ಯ ಬೇಸಿಗೆ ಶಿಬಿರಗಳಿಗೆ ಸೇರಿಸಿಕೊಳ್ಳುವುದಿಲ್ಲ. ಬಹುತೇಕ ಸಂದರ್ಭದಲ್ಲಿ ಅಂಗವಿಕಲ ಮಕ್ಕಳನ್ನು ಮನೆಯಿಂದ ಹೊರಗೆ ಕರೆದೊಯ್ಯುವ ಪೋಷಕರೂ ಕಡಿಮೆ. ನಿರ್ಲಕ್ಷಿತರಾದ ಅಂಗವಿಕಲ ಮಕ್ಕಳಿಗಾಗಿಯೇ ಶಿಬಿರವನ್ನು ಏರ್ಪಡಿಸಲಾಗುತ್ತಿದೆ ಎಂದು ಶಾಲೆಯ ಮುಖ್ಯಸ್ಥರಾದ ಜೋಸೆಫ್ ಗುರುವಾರ `ಪ್ರಜಾವಾಣಿ~ಗೆ ತಿಳಿಸಿದರು.

ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಇಲ್ಲಿ ಚಟುವಟಿಕೆಗಳನ್ನು ಶಿಕ್ಷಕರು ಹೇಳಿಕೊಡುತ್ತಿದ್ದಾರೆ. 8 ದಿನದಿಂದ ಇಲ್ಲಿಯೇ ಇದ್ದೇನೆ. ಸಮಯಕ್ಕೆ ಸರಿಯಾಗಿ ಊಟ-ಪಾಠ ನಡೆಯುತ್ತಿದೆ. ಶಿಕ್ಷಕರು ನಮ್ಮನ್ನು ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಿರುವುದು ಖುಷಿ ತಂದಿದೆ ಎಂದು ಎರಡೂ ಕಾಲು ಊನವಾಗಿರುವ ತಾಲ್ಲೂಕಿನ ಚೌಡದೇನಹಳ್ಳಿಯ 9ನೇ ತರಗತಿ ವಿದ್ಯಾರ್ಥಿನಿ ನವ್ಯಶ್ರೀ ತಿಳಿಸಿದಳು.

ವಿಶೇಷ ಮಕ್ಕಳ ಈ ಶಿಬಿರದಲ್ಲಿ ವಿಶೇಷ ಶಿಕ್ಷಕರದೇ ಪ್ರಧಾನ ಪಾತ್ರ ಎಂಬುದು ಗಮನಾರ್ಹ. ವಿವಿಧ ವೈಕಲ್ಯವುಳ್ಳ ಮಕ್ಕಳಿಗೆ ಪಾಠ ಹೇಳುವ ನಿಟ್ಟಿನಲ್ಲಿ ವಿಶೇಷವಾಗಿ ತರಬೇತಿ ಪಡೆದ ಶಿಕ್ಷಕರೇ ಇಲ್ಲಿ ಮಾರ್ಗದರ್ಶಕರು. ಕಿವುಡ-ಮೂಕ ಮಕ್ಕಳಿಗೆ ಶಿಕ್ಷಕಿ ರೂಪ, ಪವಿತ್ರ, ಬುದ್ಧಿ ಮಾಂದ್ಯಮಕ್ಕಳಿಗೆ ನೇತ್ರಾವತಿ, ಚೈತ್ರ, ಅಂಧ ಮಕ್ಕಳಿಗೆ ಮಾರುತಿ ಮತ್ತು ವೀರಸ್ವಾಮಿ ಕೌಶಲಗಳನ್ನು ಕಲಿಸುತ್ತಿದ್ದಾರೆ. ಶುಕ್ರವಾರ ಶಿಬಿರಕ್ಕೆ ತೆರೆ ಬೀಳಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.