ADVERTISEMENT

ಅಪರೂಪದ ಕಾಡುಪಾಪ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 8:40 IST
Last Updated 14 ಮಾರ್ಚ್ 2011, 8:40 IST

ಶಿಡ್ಲಘಟ್ಟ: ತಾಲ್ಲೂಕಿನ ಕೊತ್ತನೂರು ಗ್ರಾಮದ ಸಮೀಪದ ತೋಪಿನಲ್ಲಿ ಭಾನುವಾರ ಮುದ್ದು ಮುಖದ ದೊಡ್ಡಕಂಗಳ ಬಹಳ ನಾಚಿಕೆಯ ಸ್ವಭಾವದ ಅಪರೂಪದ ಅತಿಥಿಯ ದರ್ಶನವಾಯಿತು. ಅದುವೇ ಕಾಡುಪಾಪ.  ಇಂಗ್ಲಿಷ್‌ನಲ್ಲಿ ಸ್ಲೆಂಡರ್ ಲೋರಿಸ್ ಎಂದು ಕರೆಯುವ ಇದನ್ನು ತೆಲುಗಿನಲ್ಲಿ ‘ಅಡವಿ ಪಾಪ’ ಎನ್ನುತ್ತಾರೆ. ತೆಲುಗಿನಲ್ಲಿ ಪಾಪ ಎಂದರೆ ಹುಡುಗಿ. ಹೆಣ್ಣಿನ ಸಹಜ ನಾಚಿಕೆ ಗುಣ ಹೊಂದಿರುವ  ಹಾಗೂ ಅಡವಿಯಲ್ಲಿರುವ ಕಾರಣ ಅಡವಿ ಪಾಪ ಎನ್ನುತ್ತಾರೆ.

ಕನ್ನಡದ ಪಾಪೆ ಎಂಬುದು ಕಣ್ಣನ್ನು ಸೂಚಿಸುತ್ತದೆ. ದೊಡ್ಡ ಕಣ್ಣುಗಳ ಇದನ್ನು ಕನ್ನಡದಲ್ಲಿ ಈ ಅರ್ಥದಲ್ಲಿ ಕಾಡುಪಾಪ ಎನ್ನುತ್ತಾರೆ. ಕಾಡಿನಲ್ಲಿನ ಪ್ರಾಣಿಗಳಲ್ಲೇ ಅತ್ಯಂತ ಮುಗ್ಧ, ನಿರಪಾಯಕಾರಿ, ಭಯ ಹಾಗೂ ನಾಚಿಕೆಯ ಸ್ವಭಾವದ ಪ್ರಾಣಿಯಾದ್ದರಿಂದ ಕಾಡಿನ ಮಗು ಅಥವಾ ಕಾಡು ಪಾಪ ಎಂಬ ಹೆಸರು ಬಂದಿದೆ. ಹೆಚ್ಚು ನಾಚಿಕೆಯ ಸ್ವಭಾವವನ್ನು ತೋರುವುದರಿಂದ ಕಾವ್ಯಮಯವಾಗಿ ಜಾನಪದದಲ್ಲಿ ಇದನ್ನು ‘ಬಿದಿರ ಮೇಗಳ ಚದುರೆ’ ಎಂದು ಕರೆದಿದ್ದಾರೆ. 

 ಕಾಡುಪಾಪವು ಅಪೂರ್ವವಾದ ಲಕ್ಷಣಗಳನ್ನು ಹೊಂದಿದೆ. ದುಂಡುತಲೆ, ಗಿಡ್ಡಮೂತಿ, ದೊಡ್ಡಕಿವಿ, ಹೊಳೆಯುವ ದುಂಡನೆಯ ದೊಡ್ಡ ಕಣ್ಣುಗಳು, ಹಿಂಗಾಲುಗಳಿಗಿಂತ ಮುಂಗಾಲುಗಳು ದೊಡ್ಡವು ಹಾಗೂ ಬಾಲವಿಲ್ಲ. ತನ್ನ ಹತ್ತಿರದ ಬಂಧುಗಳಾದ ಮಂಗ, ವಾನರ ಮತ್ತು ಮನುಷ್ಯನಂತಹ ಪ್ರಾಣಿಗಳೊಂದಿಗೆ ಹೋಲಿಕೆಯನ್ನು ತೋರಿದರೂ ಅನೇಕ ಆದಿಮ ಲಕ್ಷಣಗಳನ್ನು ಇನ್ನೂ ಉಳಿಸಿಕೊಂಡಿದೆ. ಕಾಡುಪಾಪ ಸಾಮಾನ್ಯವಾಗಿ ಜಾವ, ಮಲಯ ಪರ್ಯಾಯ ದ್ವೀಪಗಳಲ್ಲಿ ಕಂಡು ಬರುತ್ತವೆ. ಅಲ್ಲಿಂದ ಕರ್ನಾಟಕಕ್ಕೆ ಇವುಗಳು ಹೇಗೆ  ಬಂದವು ಎಂಬುದು ಇನ್ನು ನಿಗೂಢವಾಗಿಯೇ ಉಳಿದಿದೆ. ಇತ್ತೀಚೆಗೆ ಇವುಗಳು ಅಪರೂಪವಾಗುತ್ತಿವೆ.

 ‘ನಮ್ಮ ಕಡೆ ತೋಪುಗಳಲ್ಲಿ ಇವು ಅಪರೂಪವಾಗಿ ಕಾಣಿಸುತ್ತವೆ. ನಿಶಾಚರಿ ಜೀವಿಗಳಾದ್ದರಿಂದ ನಮ್ಮ ಕಣ್ಣಿಗೆ ಹೆಚ್ಚಾಗಿ ಬೀಳುವುದಿಲ್ಲ. ನೀಲಗಿರಿ ಮರ, ಆಲದ ಮರ, ಅರಳಿಮರ, ಸರ್ವೆಮರಗಳು ಮತ್ತು ಹುಣಿಸೆಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಹಣ್ಣು, ಕಾಯಿ, ಕೀಟಗಳು, ಜೀರುಂಡೆ, ಮಿಡತೆ, ಹಲ್ಲಿ, ಹಾವುರಾಣಿ, ಹಕ್ಕಿಗಳ ಮೊಟ್ಟೆಗಳು, ಮರಗಪ್ಪೆ ಮುಂತಾದುವುಗಳನ್ನು ತಿನ್ನುತ್ತವೆ ಎಂದು ಕೊತ್ತನೂರಿನ ಸ್ನೇಕ್ ನಾಗರಾಜ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.