ಕೋಲಾರ: ಆರು ಬಾರಿ ಸಂಸದರಾಗಿ, ಮೂರು ಬಾರಿ ಕೇಂದ್ರ ಸಚಿವರಾಗಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಲಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಬುಧವಾರ ಹೇಳಿದರು.
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಲಾರವೂ ಸೇರಿದಂತೆ ರಾಜ್ಯದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.
ತಮ್ಮ ಪ್ರತಿಸ್ಪರ್ಧಿ ಯಾರು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ವಿವಿಧ ಪಕ್ಷದ ಅಭ್ಯರ್ಥಿಗಳು ಬದಲಾಗಬಹುದು. ಹೀಗಾಗಿ ನಾಮಪತ್ರ ಸಲ್ಲಿಸುವ ಕೊನೆಯ ದಿನ ಮುಗಿದ ಬಳಿಕವಷ್ಟೇ ಕಣದಲ್ಲಿ ಉಳಿದವರನ್ನು ಪ್ರತಿಸ್ಪರ್ಧಿಯ ಬಗ್ಗೆ ಸ್ಪಷ್ಟವಾಗಿ ಹೇಳಬಹುದು ಎಂದರು.
ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿ ಶಾಸಕರಾಗಿದ್ದವರು. ಹಣಕ್ಕಾಗಿ ತಮ್ಮನ್ನು ಮಾರಿಕೊಂಡು ಬಿಜೆಪಿಗೆ ಸೇರ್ಪಡೆಯಾದವರು. ಅವರ ಬಗ್ಗೆ ಹೇಳುವಂಥದ್ದು ಏನೂ ಇಲ್ಲ. ಕ್ಷೇತ್ರದ ಜನರಿಗೆ ಎಲ್ಲವೂ ಗೊತ್ತಿದೆ ಎಂದರು.
ಜೆಡಿಎಸ್ ಪಕ್ಷಕ್ಕೆ ಸ್ಥಳೀಯರಾದ ಅರ್ಹ ಅಭ್ಯರ್ಥಿಗಳೇ ಇಲ್ಲದ ಸನ್ನಿವೇಶ ನಿರ್ಮಾಣವಾಗಿರುವುದು ವಿಷಾದನೀಯ. ಕ್ಷೇತ್ರದಲ್ಲಿ ಅರ್ಹರಿದ್ದರೂ, ಅವರನ್ನು ಕಡೆಗಣಿಸಿ ಬೆಂಗಳೂರಿನಿಂದ ಹಣವಂತರನ್ನು ಕರೆತಂದು ಕಣಕ್ಕೆ ಇಳಿಸುತ್ತಿರುವುದು ಬೇಸರದ ಸಂಗತಿ ಎಂದರು.
ಮಾಲೂರು ಮಾಜಿ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಖಚಿತ. ಇನ್ನೆರಡು ದಿನದೊಳಗೆ ಇದು ಸ್ಪಷ್ಟವಾಗಲಿದೆ. ಪಕ್ಷದ ಹಿರಿಯ ಮುಖಂಡ ಜಾಫರ್ ಷರೀಫ್ ಅವರು ಪಕ್ಷ ಬಿಡದಂತೆ ಮನ ಒಲಿಸುವ ಪ್ರಯತ್ನ ನಡೆದಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.