ADVERTISEMENT

ಅಭ್ಯರ್ಥಿ ಹಿಂದೆ, ಬೆಂಬಲಿಗರು ಮುಂದೆ...

ಕರಗವೂ ನಾಚುವಂಥ ವೇಗದ ನಡಿಗೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 9:45 IST
Last Updated 26 ಏಪ್ರಿಲ್ 2013, 9:45 IST

ಕೋಲಾರ: ವಿಧಾನಸಭೆ ಚುನಾವಣೆ ಪ್ರಚಾರದ ಕಾವು ಬೇಸಿಗೆಯ ಬಿಸಿಯನ್ನು ನಾಚಿಸುವಂತೆ ದಿನದಿಂದ ಏರುತ್ತಿದೆ. ಅಭ್ಯರ್ಥಿಗಳ ನಡಿಗೆಯಲ್ಲಿ ವೇಗ ಹೆಚ್ಚಾಗುವ ಮುನ್ನವೇ ಅವರ ಬೆಂಬಲಿಗರು ಮುನ್ನುಗ್ಗುತ್ತಿದ್ದಾರೆ.

ಕರಗವೂ ನಾಚುವ ರೀತಿಯ ನಡಿಗೆಯಲ್ಲಿ ಪ್ರಚಾರ ಭರದಿಂದ ನಡೆಯುತ್ತಿದೆ. ಕರಗ ಹೊತ್ತ ಪೂಜಾರರಂತೆ ಅಭ್ಯರ್ಥಿಗಳು ಬಿರುಸು ನಡಿಗೆ ನಡೆಯುತ್ತಿರುವ ವೇಳೆಯಲ್ಲೆ ಬೆಂಬಲಿಗರು ವೀರಕುಮಾರರ ಆವೇಶದಲ್ಲಿ ಅಭ್ಯರ್ಥಿಯನ್ನು ಹಿಂದಿಕ್ಕಿ ಮುಂದಕ್ಕೆ ಓಡುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಸಮಸ್ಯೆಗಳ ಕುರಿತು ಹೇಳೋಣ ಎಂದು ನಿಂತ ಮತದಾರರು ಮಾತ್ರ ತಬ್ಬಿಬ್ಬಾಗುತ್ತಿದ್ದಾರೆ.

ಅಭ್ಯರ್ಥಿಯ ಬಳಿ ಸಮಸ್ಯೆಯನ್ನು ಹೇಳೋಣ ಎಂದು ನಿಂತರೆ ಅವರ ಜೊತೆಗಿನ ಮುಖಂಡರು `ನಮ್ಮನ್ನು ಪಕ್ಕಕ್ಕೆ ಸರಿಸಿ ಈಗ ಟೈಮಿಲ್ಲ. ಆಮೇಲೆ ಮಾತಾಡೋಣ' ಎಂದು ಮುಂದೆ ಸಾಗುತ್ತಾರೆ. ಅವರ ನಡುವೆ ಅಭ್ಯರ್ಥಿಯೂ ಕೈ ಮುಗಿಯುತ್ತಾ ಮುಂದೆ ಹೋಗಿ ಬಿಡುತ್ತಾರೆ. ನಮ್ಮ ಜೊತೆ ಮಾತಾಡೋರೇ ಇಲ್ಲ. ನಾವು ಯಾರಿಗಂತ ಮತ ಹಾಕಬೇಕೆಂಬುದೇ ತೋಚದಾಗಿದೆ? ಎನ್ನುತ್ತಾರೆ ಶ್ರೀನಿವಾಸಪುರ ತಾಲ್ಲೂಕಿನ ಬೈಯಪ್ಪಲ್ಲಿ ಗ್ರಾಮದ ಯುವಕ ಪ್ರಕಾಶ್.

ಇದು ಕೇವಲ ಒಂದು ಕ್ಷೇತ್ರದ ಮತದಾರರ ಸಮಸ್ಯೆ ಅಲ್ಲ. ಎಲ್ಲ ಕ್ಷೇತ್ರಗಳಲ್ಲೂ ಮತದಾರರಲ್ಲಿ ಈ ಅಸಮಾಧಾನ ಮೂಡಿದೆ. ಆದರೆ ಅವರ ಅಸಮಾಧಾನದ ನುಡಿಗಳಿಗೆ ಕಿವಿಗೊಡುವಷ್ಟು ಸಮಯ ಅಭ್ಯರ್ಥಿಗಳು ಹಾಗೂ ಬೆಂಬಲಿಗರಿಗೆ ಉಳಿದಿಲ್ಲ. ಇರುವ ಕಡಿಮೆ ಅವಧಿಯಲ್ಲೇ ಎಲ್ಲ ಹಳ್ಳಿ, ಪ್ರದೇಶಗಳನ್ನೂ ಸುತ್ತಿ ಮತಯಾಚಿಸುವ ಅನಿವಾರ್ಯತೆ ಅಭ್ಯರ್ಥಿಗಳದು. ಹೀಗಾಗಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಕರಗ ಮತ್ತು ವೀರಕುಮಾರರ ಆವೇಶವನ್ನು ಮೈಗೂಡಿಸಿಕೊಂಡಿದ್ದಾರೆ. ಮತದಾರರು ಸಾಮಾನ್ಯ ಭಕ್ತರಂತೆ ಕೈಮುಗಿಯುತ್ತಿದ್ದಾರೆ!

ಕಾಣದ ಅಭ್ಯರ್ಥಿ: ನಗರದಲ್ಲಿ ಗುರುವಾರ ಪಕ್ಷೇತರ ಅಭ್ಯರ್ಥಿ ಆರ್.ವರ್ತೂರು ಪ್ರಕಾಶ್ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ, ಬೆಂಬಲಿಗರ ಸಮೂಹದ ನಡುವೆ ಸೇರಿಹೋಗಿದ್ದರಿಂದ ಅವರನ್ನು ಪತ್ತೆ ಹಚ್ಚುವುದು ಕಷ್ಟಕರವಾದ ಸನ್ನಿವೇಶ ನಿರ್ಮಾಣವಾಗಿತ್ತು.

ಬೆಂಬಲಿಗರ ನಡುವಿನ ನೂಕುನುಗ್ಗಲಿನಲ್ಲೇ ಅವರು ಮತದಾರರತ್ತ ಕೈ ಬೀಸಿ ತಮ್ಮ ಇರುವಿಕೆಯನ್ನು ಸಾರುತ್ತಿದ್ದರು. ನಗರದ ರಹಮತ್ ನಗರ, ಮಿಲ್ಲತ್ ನಗರ, ನೂರ್ ನಗರ, ವಿನಾಯಕ ನಗರ, ಸಾರಿಗೆ ನಗರ, ಆಜಾದ್ ನಗರ, ಅರಹಳ್ಳಿ ಗೇಟ್, ಬೀಡಿ ಕಾಲೋನಿ, ನಿಸಾರ್ ನಗರದ ಕಿರುಗಲ್ಲಿಗಳಲ್ಲಿ ಈ ದೃಶ್ಯ ಸಾಮಾನ್ಯವಾಗಿತ್ತು. ಬಿಜೆಪಿ ಅಭ್ಯರ್ಥಿ ಎಂ.ಎಸ್.ಆನಂದ್, ಕೆಜೆಪಿ ಅಭ್ಯರ್ಥಿ ಅಬ್ದುಲ್ ರೆಹಮಾನ್ ಪರ ಪ್ರಚಾರದಲ್ಲಿ ಹೇಳಿಕೊಳ್ಳುವಂಥ ನೂಕುನುಗ್ಗಲೇನೂ ಕಂಡುಬರುತ್ತಿಲ್ಲ.

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್.ರಮೇಶ್‌ಕುಮಾರ್ ಮತ್ತು ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿಯವರ ಪ್ರಚಾರದಲ್ಲೂ ಇದಕ್ಕಿಂತ ಹೆಚ್ಚಿನ ವ್ಯತ್ಯಾಸವೇನೂ ಇರಲಿಲ್ಲ. ಈ ಇಬ್ಬರನ್ನು ಹಿಂದಿಕ್ಕಿ ಬೆಂಬಲಿಗರು ಮುಂದೆ ನುಗ್ಗುತ್ತಿದ್ದರು. ಮತದಾರರು ಬೆರಗಿನಿಂದ ನೋಡುತ್ತಿದ್ದರು.

ಅಪಪ್ರಚಾರವೇ ಪ್ರಚಾರ
ಚುನಾವಣೆ ಘೋಷಣೆಯಾಗುವ ಮುಂಚಿನಿಂದಲೂ ಪರಸ್ಪರ ಅಪಪ್ರಚಾರದ ಮಾತುಗಳನ್ನು ಆಡುತ್ತಲೇ ಬಂದ ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಶ್ರೀನಿವಾಸಗೌಡ ಮತ್ತು ಪಕ್ಷೇತರ ಅಭ್ಯರ್ಥಿ ಆರ್.ವರ್ತೂರು ಪ್ರಕಾಶ್ ಚುನಾವಣೆ ಘೋಷಣೆಯಾದ ಬಳಿಕ ತಮ್ಮ ಮಾತುಗಳಿಗೆ ಕತ್ತಿಯ ಹರಿತವನ್ನು ತಂದುಕೊಂಡಿದ್ದಾರೆ.

ಪರಸ್ಪರರ ಜೀವನಶೈಲಿ, ಅಭಿರುಚಿಗಳು, ಚಾರಿತ್ರ್ಯ ಮೊದಲಾದ ವಿಷಯಗಳನ್ನು ಪ್ರಚಾರದ ಸಂದರ್ಭದಲ್ಲಿ ಹೆಚ್ಚು ಪ್ರಸ್ತಾಪ ಮಾಡುತ್ತಿದ್ದಾರೆ. ಇವರ ಜೊತೆಗೆ ಈಗ ಕಾಂಗ್ರೆಸ್ ಅಭ್ಯರ್ಥಿ ನಸೀರ್ ಅಹ್ಮದ್ ಅವರೂ ಸೇರಿದ್ದಾರೆ.

ಕೋಲಾರ ಕ್ಷೇತ್ರದಲ್ಲಿನ ಪ್ರಚಾರದ ಒಂದು ವಿಶೇಷವೆಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಮತ್ತು ಮುಖಂಡರು ಪ್ರತ್ಯೇಕವಾಗಿ ನಿಂತರೂ, ಸಚಿವ ವರ್ತೂರು ವಿರುದ್ಧ ಸಮಾನವಾದ `ವಿರೋಧಿ ಭಾವನೆ'ಯನ್ನು ವ್ಯಕ್ತಪಡಿಸುತ್ತಿದ್ದಾರೆ. `ವರ್ತೂರು ಪ್ರಕಾಶ್‌ರನ್ನು ಕ್ಷೇತ್ರದಿಂದ ವಾಪಸ್ ಅವರ ಊರಿಗೆ ಕಳಿಸಿ' ಎಂದು ಮತದಾರರಿಗೆ ಕರೆ ಕೊಡುತ್ತಿದ್ದಾರೆ.

ಅದಕ್ಕೆ ತಕ್ಕಂತೆ ವರ್ತೂರು ಕೂಡ, `ವಿದೇಶಗಳಿಗೆ ಹಾರುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಗೌಡರು ಬೇಕೋ? ಅಥವಾ ಉದ್ಯಮಿಯಾಗಿರುವ ನಸೀರ್ ಅಹ್ಮದ್ ಬೇಕೋ? ಜನರ ಸಮಸ್ಯೆ ಪರಿಹರಿಸಲು ಪ್ಲಂಬರ್ ಕೆಲಸ ಮಾಡಲೂ ಹಿಂಜರಿಯದ ತಾವು ಬೇಕೋ?' ಎಂಬ ಪ್ರಶ್ನೆಯನ್ನು ಮತದಾರರ ಮುಂದಿಡುತ್ತಿದ್ದಾರೆ.

ದಿನ ಕಳೆದಂತೆ ಮುಖಂಡರ ಗಂಟಲು ದೊಡ್ಡದಾಗುತ್ತಿರುವ ವೇಳೆಯಲ್ಲೇ ವರ್ತೂರು, `ದಯಮಾಡಿ ನನ್ನ ಕೈ ಬಿಡಬೇಡಿ' ಎಂಬ ಆರ್ತಮೊರೆಯನ್ನು ಮತದಾರರ ಮುಂದೆ ಇಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT