ADVERTISEMENT

ಅರ್ಧ ತಮಿಳುನಾಡಿಗೆ ಮತ್ತರ್ಧ ಕರ್ನಾಟಕಕ್ಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 7:16 IST
Last Updated 15 ಡಿಸೆಂಬರ್ 2017, 7:16 IST
ತಾಲ್ಲೂಕಿನ ಡಿಎನ್.ದೊಡ್ಡಿ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಕಸದರಾಶಿಗಳು ತುಂಬಿರುವುದು
ತಾಲ್ಲೂಕಿನ ಡಿಎನ್.ದೊಡ್ಡಿ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಕಸದರಾಶಿಗಳು ತುಂಬಿರುವುದು   

ಮಾಲೂರು: ತಾಲ್ಲೂಕಿನ ಗಡಿ ಗ್ರಾಮವಾದ ಡಿ.ಎನ್.ದೊಡ್ಡಿ (ದಾದಿನಾಯಕನ ದೊಡ್ಡಿ) ಅರ್ಧ ಭಾಗದ ತಮಿಳುನಾಡಿಗೆ ಮತ್ತರ್ಧ ಕರ್ನಾಟಕಕ್ಕೆ ಸೇರಿದೆ. ಕರ್ನಾಟಕಕ್ಕೆ ಸೇರಿದ ಭಾಗ ಸಮಸ್ಯೆಗಳ ಸುಳಿಗೆ ಸಿಲುಕಿ ನಲುಗುತ್ತಿದೆ. ತಮಿಳುನಾಡು ಸರ್ಕಾರ ಮೂಲ ಸೌಕರ್ಯ ಸೇರಿದಂತೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಿದೆ. ಕರ್ನಾಟಕ ಸರ್ಕಾರ ಮೂಲ ಸೌಕರ್ಯವನ್ನೂ ಒದಗಿಸಿಲ್ಲ.

ಲಕ್ಕೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮದಲ್ಲಿ 400 ಮತದಾರರು ಇದ್ದಾರೆ. ಬಹತೇಕರು ಪರಿಶಿಷ್ಟ ವರ್ಗದ ಜನರು ವಾಸವಾಗಿದ್ದಾರೆ. ಗ್ರಾಮದ ನಡುವೆ ಹಾದುಹೊಗುವ ಮುಖ್ಯ ರಸ್ತೆಯ ಎಡ ಭಾಗಕ್ಕೆ (ಸುಮಾರು 25 ಮನೆಗಳು) ಇರುವ ಗಾಂಧಿ ಬಡಾವಣೆ ತಮಿಳು ನಾಡಿಗೆ ಸೇರಿದೆ. ಈ ಬಡಾವಣೆಗೆ ತಮಿಳು ನಾಡು ಸರ್ಕಾರ ಪೈಪ್ ಲೈನ್ ಮೂಲಕ ಕಾವೇರಿ ನೀರು ಸರಬರಾಜು ಮಾಡುತ್ತಿದೆ. ಉಚಿತ ವಿದ್ಯುತ್, ಅಕ್ಕಿ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಿದೆ.

ಒಂದೇ ಗ್ರಾಮದಲ್ಲಿ ವಾಸಮಾಡುವ ಜನರು ಕೆಲವರು ಸ್ವಚ್ಛವಾದ ಕಾವೇರಿ ನೀರು ಕುಡಿದರೇ, ಕರ್ನಾಟಕಕ್ಕೆ ಸೇರಿದ ಜನರು ಫ್ಲೋರೈಡ್ ನೀರನ್ನು ಕುಡಿಯುತ್ತಿದ್ದಾರೆ.  ಇದರಿಂದ ಕಂಗಾಲಾಗಿರುವ ಜನರು ಗ್ರಾಮವನ್ನು ತಮಿಳು ನಾಡಿಗೆ ಸೇರ್ಪಡೆ ಮಾಡಿದರೆ ತಮಗೂ ಸವಲತ್ತು  ದೊರೆಯುತ್ತದೆ ಎಂಬ ಭಾವನೆ ವ್ಯಕ್ತಪಡಿಸುವರು. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಕೊಳಚೆ ನೀರು ಮನೆಗಳ ಮುಂಭಾಗದಲ್ಲಿ ಹರಿಯುತ್ತಿದೆ. ಸೊಳ್ಳೆ ಕಾಟ ಹೆಚ್ಚಾಗಿದೆ.

ADVERTISEMENT

ಸ್ವಚ್ಛತೆ ಇಲ್ಲದೆ ಎಲ್ಲೆಂದರಲ್ಲಿ ಕಸದ ರಾಶಿ ರಾರಾಜಿಸುತ್ತದೆ. ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಹಾಡಹಗಲೇ  ಕೆಲವರು ಜೂಜಾಟದಲ್ಲಿ ತೊಡಗುವರು. ಗ್ರಾಮದಲ್ಲಿ ಸೂರು ಇಲ್ಲದ ಜನರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ.

‘ಕುಡಿಯಲು ಕಾವೇರಿ ನೀರು, ಪ್ರತಿ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ತಳ್ಳುವ ಗಾಡಿಗಳ ಸೌಕರ್ಯ, ಉಚಿತ ವಿದ್ಯುತ್, ಉಚಿತ ಪಡಿತರ ಜತೆಗೆ ಎಲ್ಲ ಮೂಲ ಸೌಲಭ್ಯದ ಸೌಕರ್ಯ ಕಲ್ಪಿಸಿದೆ' ಎಂದು ತಮಿಳು ನಾಡಿಗೆ ಸೇರಿದ ಗಾಂಧಿ ಬಡಾವಣೆಯ ನಿವಾಸಿ ಶ್ರೀನಿವಾಸ್ ತಿಳಿಸುವರು.

ಗುಡಿಸಲು ವಾಸ
ಗ್ರಾಮದಲ್ಲಿ ಇಂದಿಗೂ ಗುಡಿಸಲುಗಳಲ್ಲಿ ಹಲವರು ವಾಸಿಸುತ್ತಿದ್ದಾರೆ. ಪ್ಲೋರೈಡ್ ನೀರು ಕುಡಿದು ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ರಾಜ್ಯ ಸರ್ಕಾರ ಸೌಲಭ್ಯ ಕಲ್ಪಿಸದೆ ನಿರ್ಲಕ್ಷ್ಯವಹಿಸಿದೆ ಎಂದು ಗ್ರಾಮದ ನಿವಾಸಿ ಮುನಿರಾಜು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.