ADVERTISEMENT

ಅಸಮರ್ಪಕ ವಿದ್ಯುತ್ ಪೂರೈಕೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 9:21 IST
Last Updated 18 ಡಿಸೆಂಬರ್ 2013, 9:21 IST

ಕೋಲಾರ: ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ನಗರದ ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕಚೇರಿ ಮುಂಭಾಗ ಮಂಗಳವಾರ ಬೆಸ್ಕಾಂ ಶವದ ಪ್ರತಿಕೃತಿಯೊಡನೆ ಧರಣಿ ನಡೆಸಿದರು.

ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ದಿನ­ದಲ್ಲಿ 2 ಗಂಟೆ ಕೂಡ ಸಮರ್ಪಕ ವಿದ್ಯುತ್ ಪೂರೈಸದಿರುವುದರಿಂದ ರೈತರು ಬೆಳೆದ ಬೆಳೆಗಳು ನಾಶವಾಗು­ತ್ತಿವೆ. ಕುಡಿಯುವ ನೀರಿಗೂ ಪರದಾಡು­ವಂತಾಗಿದೆ. ಬೆಸ್ಕಾಂ ಕೂಡಲೇ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಮ­ರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಸಮರ್ಪಕ ಮಳೆ­ಯಿಲ್ಲದೆ ಬರಗಾಲ ಆವರಿಸಿದೆ. ಬರುವ ಅಲ್ಪ ಸ್ವಲ್ಪ ನೀರಿನಿಂದ ರೈತರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಬೆಸ್ಕಾಂ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ನಿಗದಿಪಡಿಸಿರುವಂತೆ 8 ಗಂಟೆ ಕಾಲ 3 ಫೇಸ್ ಹಾಗೂ 6 ಗಂಟೆ ಕಾಲ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಪ್ರತಿ ಗಂಟೆಗೆ 16 ಬಾರಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ದಿನದಲ್ಲಿ ಕೇವಲ 2 ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದು ರೈತ ವಿರೋಧಿ ಕಾರ್ಯವೈಖರಿ ಎಂದು ಆರೋಪಿಸಿದರು.

ಬೆಸ್ಕಾಂಗೆ ಸಂಬಂಧಿಸಿದ ದೂರು ನೀಡಲು ಸಹಾಯವಾಣಿಯನ್ನು ಸಂಪ­ರ್ಕಿಸಿದರೆ ಕರೆ ಸ್ವೀಕರಿಸುವವರೇ ಇರು­ವುದಿಲ್ಲ. ವಿದ್ಯುತ್ ಉತ್ಪಾದಿಸುವ ಜಲಾ­ಶಯಗಳು ತುಂಬಿ ಹರಿ­ಯುತ್ತಿದ್ದರೂ ಜಿಲ್ಲೆಯಲ್ಲಿ ಮಾತ್ರ ವಿದ್ಯುತ್ ಪೂರೈಕೆ ಇಲ್ಲದ ಸನ್ನಿವೇಶ ನಿರ್ಮಾಣವಾಗಿದೆ. ಸಮರ್ಪಕ ವಿದ್ಯುತ್ ನೀಡದಿದ್ದರೆ ಬೆಸ್ಕಾಂ ಇಲಾಖೆಗೆ ಶಾಶ್ವತವಾಗಿ ಬೀಗ ಮುದ್ರೆ ಜಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘದ ಪ್ರಮುಖರಾದ ಕೆ.ಶ್ರೀನಿವಾಸಗೌಡ, ನಾರಾಯಣಗೌಡ, ರಮೇಶ್, ಹರಿಕುಮಾರ್, ನಾಗರಾಜ ಗೌಡ, ಮುನೇಗೌಡ, ಶಿವಾರೆಡ್ಡಿ, ಪುರುಷೋತ್ತಮ್, ಆಂಜಿನಪ್ಪ, ವೆಂಕಿ, ಮಾಸ್ತಿ ಬಾಬು, ಉದಯ್, ವಿಶ್ವನಾಥ್, ಸುಬ್ರಮಣಿ, ಎಚ್.ವಿ ಚಂದ್ರಪ್ಪ, ಮಂಜುನಾಥ್, ಕೃಷ್ಣ, ರಾಜೇಶ್, ಶಾಮ್ ನಾಯಕ್, ಸೈಯದ್, ಅಮರನಾರಾಯಣಸ್ವಾಮಿ, ಗಣೇಶ್, ಮಂಜುನಾಥ್ ರೆಡ್ಡಿ, ಮುಂಜುನಾಥ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.