ADVERTISEMENT

ಆನಂದ್ ಅಧ್ಯಕ್ಷ, ಪಾರ್ವತಮ್ಮ ಉಪಾಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 8:50 IST
Last Updated 19 ಫೆಬ್ರುವರಿ 2011, 8:50 IST

ಮಾಲೂರು: ತಾಲ್ಲೂಕು ಪಂಚಾಯಿತಿ ಮೊದಲನೆ ಅವಧಿಗೆ ಶುಕ್ರವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿಯ ಆರ್.ಆನಂದ್ ಅಧ್ಯಕ್ಷರಾಗಿ ಮತ್ತು ಪಾರ್ವತಮ್ಮ ಸ್ವಾಮಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಒಟ್ಟು 18 ಸ್ಥಾನಗಳಲ್ಲಿ ಬಿಜೆಪಿ 15,  ಜೆಡಿಎಸ್ 3 ಸ್ಥಾನ ಪಡೆದುಕೊಂಡಿತ್ತು.

ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನೂಟವೇ ಕ್ಷೇತ್ರದ ಆರ್.ಆನಂದ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ದೊಡ್ಡಶಿವಾರ ಮೀಸಲು ಕ್ಷೇತ್ರದ ಪಾರ್ವತಮ್ಮ ಮಾತ್ರ ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕಟಗೊಂಡ ಕೂಡಲೇ ತಾ.ಪಂ. ಕಚೇರಿ ಹೊರಗೆ ಸೇರಿದ್ದ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚುನಾವಣಾಧಿಕಾರಿಗಳಾಗಿ ಕೋಲಾರ ಉಪ ವಿಭಾಗಾಧಿಕಾರಿ  ಪೆದ್ದಪ್ಪಯ್ಯ ಹಾಗೂ ತಹಶೀಲ್ದಾರ್ ಜಿ.ವಿ. ನಾಗರಾಜ್ ಮತ್ತು ಸಿಬ್ಬಂದಿ ಚುನಾವಣೆ ನಡೆಸಿಕೊಟ್ಟರು. ತಾ.ಪಂ ಇಒ ಇ.ರಾಮಕೃಷ್ಣಪ್ಪ ಉಪಸ್ಥಿತರಿದ್ದರು.

ಬಿಜೆಪಿ ತೆಕ್ಕೆಗೆ:
ತಾಲ್ಲೂಕು ಪಂಚಾಯಿತಿ ಅಧಿಕಾರ ಕಳೆದ 15 ವರ್ಷಗಳಿಂದ  ಕಾಂಗ್ರೆಸ್  ಮತ್ತು ಜೆಡಿಎಸ್ ವಶದಲ್ಲಿತ್ತು. ಆದರೆ, ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ನೇತೃತ್ವದಲ್ಲಿ ಈಚೆಗೆ ನಡೆದ ತಾ.ಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷ 18 ಸ್ಥಾನಗಳ ಪೈಕಿ 15 ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ತಾಲ್ಲೂಕು ಪಂಚಾಯಿತಿ ಆಡಳಿತವನ್ನು ಇದೇ ಮೊದಲ ಬಾರಿಗೆ ತನ್ನದಾಗಿಸಿಕೊಂಡಿದೆ.
ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರಲ್ಲಿ ಹರ್ಷೋದ್ಘಾರ ಮೊಳಗಿದ್ದು, ವಿಜಯೋತ್ಸವ ಆಚರಿಸಿ ಪಟಾಕಿ ಸಿಡಿಸಿ ಸಂತಸ ಹಂಚಿಕೊಂಡರು.

ತಾಲ್ಲೂಕು ಪಂಚಾಯಿತಿ  ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ  ಮಾತನಾಡಿದ ಆರ್.ಆನಂದ್, ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಮೊದಲನೇ ಪ್ರಾಶಸ್ತ್ಯ ನೀಡುವ ಜೊತೆ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತವನ್ನು ಶಾಸಕ  ಎಸ್.ಎನ್.ಕೃಷ್ಣಯ್ಯಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಜನತೆಗೆ ನೀಡಲಾಗುತ್ತದೆ. ಬೇಸಿಗೆ ಆರಂಭವಾಗುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂಜಾಗ್ರತ ಕ್ರಮ  ವಹಿಸುವುದಾಗಿ ಹೇಳಿದರು.

ಸ್ವಚ್ಛತೆ ಮತ್ತು ಚರಂಡಿಗಳ ನಿರ್ಮಾಣ ಸೇರಿದಂತೆ ವಸತಿ ಹೀನ ಕಡು ಬಡವರಿಗೆ ಮನೆಗಳನ್ನು ಮಂಜೂರು ಮಾಡಿ, ಎಲ್ಲ ಗ್ರಾಮಗಳಲ್ಲಿಯೂ ಬೀದಿ ದೀಪ ಅಳವಡಿಸಲು ಮುಂದಾಗುವುದಲ್ಲದೇ, ಸರ್ಕಾರದಿಂದ ಬರುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಿ.ಎಂ.ನಾರಾಯಣಗೌಡ, ಜಿ.ಪಂ ಸದಸ್ಯರಾದ ರಾಮಸ್ವಾಮಿ ರೆಡ್ಡಿ, ಯಲ್ಲಮ್ಮ, ಪುರಸಭಾ ಅಧ್ಯಕ್ಷೆ ಗುಲಾಬ್‌ಜಾನ್, ಉಪಾಧ್ಯಕ್ಷ ಎ.ರಾಜಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ಆಂಜಿನಪ್ಪ, ತಾ.ಪಂ. ಸದಸ್ಯರಾದ  ಪುಟ್ಟಸ್ವಾಮಿ, ಎಸ್.ವಿ.ಲೋಕೇಶ್, ಕೃಷ್ಣಪ್ಪ, ತಾ.ಪಂ. ಮಾಜಿ ಉಪಾಧ್ಯಕ್ಷ ಬಿ.ವಿ.ಪಾಪಣ್ಣ, ಮುಖಂಡರಾದ ನೂಟವೇ ವೆಂಕಟೇಶ್‌ಗೌಡ, ಎ.ಅಶ್ವತರೆಡ್ಡಿ, ದೊಡ್ಡಿ ರಾಜಪ್ಪ, ಕೆ.ಶೇಷಗಿರಿ, ಗೋಪಾಲ ಕೃಷ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.