ADVERTISEMENT

ಆಸ್ಪತ್ರೆ ಸೇರಿದ ಗ್ರಾಮಸ್ಥರು

ಶಿವಪುರದಲ್ಲಿ ಜ್ವರಬಾಧೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 4:40 IST
Last Updated 9 ಜುಲೈ 2013, 4:40 IST

ಶ್ರೀನಿವಾಸಪುರ: ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಜ್ವರ ಬಾಧೆ ಕಾಣಿಸಿಕೊಂಡಿದ್ದು, ಗ್ರಾಮದ ಹಲವು ಮಂದಿ ಪಟ್ಟಣದ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡಿದೆ. ಜ್ವರಪೀಡಿತರನ್ನು ಕೀಲು ನೋವು, ತಲೆ ನೋವು ಕಾಡುತ್ತಿದೆ. ಮುಖ, ಕೈ- ಕಾಲು ಊತ ಬರುತ್ತಿದೆ. ಊರಿಗೆ ಊರೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ಗ್ರಾಮದ ನಿವಾಸಿ ಶಿವಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ಜ್ವರ ಬಂದಾಗ ಸಹಿಸಲಾಗದಷ್ಟು ತಲೆ ನೋವು ಬರುತ್ತದೆ. ಕೀಲುಗಳ ನೋವು ಅಸಹನೀಯವಾಗಿರುತ್ತದೆ. ದೇವರೇ ಈ ಬಾಧೆ ಶತ್ರುಗಳಿಗೂ ಬೇಡ ಎನ್ನುತ್ತಾರೆ ಪಟ್ಟಣದ ಖಾಸಗಿ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುರಮ್ಮ. ರತ್ನಮ್ಮ ಅವರ ಕುಟುಂಬದಲ್ಲಿ 7 ಮಂದಿ ಇದ್ದಾರೆ. ಎಲ್ಲರಿಗೂ ಜ್ವರ ಬಂದು ಆಸ್ಪತ್ರೆ ಸೇರಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಕನಿಷ್ಠ ಐದು ದಿನ ಚಿಕಿತ್ಸೆ ತೆಗೆದುಕೊಂಡರೆ ಜ್ವರ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಐದು ದಿನಕ್ಕೆ ಸುಮಾರು ರೂ.7 ರಿಂದ 8 ಸಾವಿರ ಖರ್ಚು ಬರುತ್ತಿದೆ. ಮನೆ ಮಂದಿಗೆಲ್ಲಾ ಜ್ವರ ಬಂದರೆ ಹಣ ಹೊಂದಿಸುವುದಾದರೂ ಹೇಗೆ ಎಂಬುದು ಗುರಪ್ಪ ಅವರ ಪ್ರಶ್ನೆ.

ವಿಷಯವನ್ನು ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರಿಗೆ ತಿಳಿಸಲಾಯಿತು. ಅವರ ಸೂಚನೆ ಮೇರೆಗೆ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಕ್ಯಾಂಪ್ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ. ಹಳ್ಳಿಯ ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ. ಕಾಯಿಸಿದ ನೀರು ಸೇವಿಸುವಂತೆ ವೈದ್ಯರು ಸಲಹೆ ಮಾಡಿದ್ದಾರೆ. ಜ್ವರ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿ.ಶಿವಪ್ಪ ತಿಳಿಸಿದರು.

ಗ್ರಾಮದಲ್ಲಿ ವೈರಸ್‌ನಿಂದ ಜ್ವರ ಹರಡಿದೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಗ್ರಾಮದಲ್ಲಿ ಇದ್ದುಕೊಂಡು ಜ್ವರ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಅನುಕೂಲಸ್ಥರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಷರೀಫ್ ತಮ್ಮನ್ನು ಭೇಟಿ ಮಾಡಿದ್ದ `ಪ್ರಜಾವಾಣಿ'ಗೆ ತಿಳಿಸಿದರು.

ಗ್ರಾಮದ ಕೆಲವರು ನೀರಿಗಾಗಿ ದೊಡ್ಡ ಸಂಪ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಗ್ರಾಮಕ್ಕೆ ನೀರು ಬಿಟ್ಟಾಗ, ತೊಟ್ಟಿಗಳಲ್ಲಿನ ಕಲುಷಿತ ನೀರು ಪೈಪ್‌ಗಳ ಮೂಲಕ ಹರಿಯುತ್ತದೆ. ಅಂಥ ನೀರು ಸೇವನೆಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿರಬಹುದು ಎಂದು ಗ್ರಾಮದ ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಶುದ್ಧವಾದ ತೊಟ್ಟಿಗಳನ್ನು ಆರೋಗ್ಯ ಇಲಾಖೆ ಗುರುತಿಸಿ ಅವುಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.