ADVERTISEMENT

ಇನ್ನಷ್ಟು ರಸ್ತೆಗಳ ಅಭಿವೃದ್ಧಿಗೆ ಸಿದ್ಧತೆ

ಕೆ.ನರಸಿಂಹ ಮೂರ್ತಿ
Published 3 ಫೆಬ್ರುವರಿ 2012, 10:05 IST
Last Updated 3 ಫೆಬ್ರುವರಿ 2012, 10:05 IST

ಕೋಲಾರ: ನಗರದಲ್ಲಿ ನಿಧಾನಗತಿಯಲ್ಲಿ ಆರಂಭವಾಗಿರುವ ರಸ್ತೆಗಳ ಅಭಿವೃದ್ಧಿಯ ಕೆಲಸ ಇನ್ನು ಕೆಲವೇ ದಿನಗಳಲ್ಲಿ ವೇಗ ಪಡೆಯಲಿದೆ. ಇನ್ನಷ್ಟು ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಎಲ್ಲ ರೀತಿಯಲ್ಲಿ ಸಿದ್ಧವಾಗುತ್ತಿದೆ. ಎಲ್ಲವೂ ಇಲಾಖೆ ಅಂದುಕೊಂಡಂತೆ ನಡೆದರೆ ಏಪ್ರಿಲ್ ಹೊತ್ತಿಗೆ ನಗರದ ಹೊರ ಆವರಣದ ರಸ್ತೆಗಳು ಪೂರ್ಣ ಅಭಿವೃದ್ಧಿಗೊಳ್ಳಲಿವೆ.

ಕೆಲವು ತಿಂಗಳ ಹಿಂದೆ ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತದವರೆಗಿನ ರಸ್ತೆಯ ಅಭಿವೃದ್ಧಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಶುರುವಾದಾಗ ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ಅಡೆ-ತಡೆಗಳ ನಡುವೆಯೂ ಕಾಮಗಾರಿ ಪೂರ್ಣಗೊಂಡು ಇದೀಗ ಆ ರಸ್ತೆಯಲ್ಲಿ ಜನ ಮತ್ತು ವಾಹನ ಸವಾರರು ಖುಷಿಯಿಂದ ಸಂಚರಿಸುತ್ತಿದ್ದಾರೆ. ಇದೇ ವೇಳೆ, ನಗರದ ಎಂ.ಬಿ.ರಸ್ತೆಯ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗೂ ಚಾಲನೆ ದೊರೆತಿದೆ. ಡೂಲೈಟ್ ವೃತ್ತದಿಂದ ಕ್ಲಾಕ್ ಟವರ್‌ವರೆಗಿನ ರಸ್ತೆ ಅಭಿವೃದ್ಧಿಯೂ ಶುರುವಾಗಿದೆ..

ಇವುಗಳ ಬೆನ್ನಿಗೇ ನಗರದ ಹೊರವಲಯ ಇನ್ನಷ್ಟು ರಸ್ತೆಗಳ ಅಭಿವೃದ್ಧಿಗೂ ಇಲಾಖೆ ಮುಂದಾಗಿ. ಈ ಕಾಮಗಾರಿಗಳೆಲ್ಲವೂ ತಲಾ 1 ಕೋಟಿ ರೂಪಾಯಿ ಅಂದಾಜು ವೆಚ್ಚದ್ದು ಎಂಬುದು ಗಮನಾರ್ಹ ಸಂಗತಿ.

ಜಿಪಂ ರಸ್ತೆ:
ಹತ್ತಾರು ತಿಂಗಳಿಂದ ಹಳ್ಳಗಳಿಗೆ ಆಶ್ರಯತಾಣವಾಗಿ ಅಧ್ವಾನದ ಸ್ಥಿತಿಯಲ್ಲಿರುವ ಜಿಲ್ಲಾ ಪಂಚಾಯಿತಿ ಮುಂಭಾಗದ ರಸ್ತೆಯ ಅಭಿವೃದ್ಧಿ ಕಾರ್ಯಕ್ಕೂ ಸಣ್ಣ ಮಟ್ಟದಲ್ಲಿ ಚಾಲನೆ ನೀಡಲಾಗಿದೆ. ದೇವನಹಳ್ಳಿ ಕೆಂಪಾಪುರ ರಸ್ತೆ ಎಂದು ಇಲಾಖೆ ಕರೆಯುವ ಈ ರಸ್ತೆಯ ಅಭಿವೃದ್ಧಿ ಅರಳ್ಳಿ ಕ್ರಾಸ್‌ನಿಂದ ಶ್ರೀನಿವಾಸಪುರ ಟೋಲ್‌ಗೇಟ್ ವೃತ್ತದವರೆಗೂ ನಡೆಯಲಿದೆ. 0.95 ಕಿಮೀ ವ್ಯಾಪ್ತಿಯ ಈ ಜೋಡಿ ರಸ್ತೆಯನ್ನು ರೂ 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ.


`ಶುಕ್ರವಾರದಿಂದ ಡಾಂಬರೀಕರಣ ಕೆಲಸ ಶುರುವಾಗಲಿದೆ. ಫೆಬ್ರುವರಿ ಕೊನೆ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಲಿದೆ~ ಎಂದು ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಮುನಿಸ್ವಾಮಿ ಗುರುವಾರ `ಪ್ರಜಾವಾಣಿ~ಗೆ ತಿಳಿಸಿದರು.

ಕೆರೆ ಏರಿವರೆಗೆ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೆಯಿಂದ ಕೋಡಿಕಣ್ಣೂರು ಕೆರೆ ಏರಿಯವರೆಗೆನ ರಸ್ತೆಯೂ ಹಳ್ಳ-ಕೊಳ್ಳಗಳಿಂದ ತುಂಬಿದ್ದು ವಾಹನ ಸವಾರರು ನಿತ್ಯವೂ ಸಂಕಟವನ್ನು ಎದುರಿಸಬೇಕಾಗಿತ್ತು. ಇದೀಗ ಆ ರಸ್ತೆಯ ಅಭಿವೃದ್ಧಿಯನ್ನೂ ಇಲಾಖೆ ಕೈಗೆತ್ತಿಕೊಂಡಿದೆ. ಬಂಗಾರಪೇಟೆ-ಬಾಗೇಪಲ್ಲಿ ರಸ್ತೆ ಎಂದು ಇಲಾಖೆ ಕರೆಯುವ ಈ ರಸ್ತೆ ಎರಡು ಹಂತದಲ್ಲಿ ಅಭಿವೃದ್ಧಿಗೊಳ್ಳಲಿದೆ.

 ಮೊದಲ ಹಂತ ಎಸ್‌ಪಿ ಮನೆಯಿಂದ-ಕೆರೆ ಏರಿವರೆಗೆ, ಎರಡನೇ ಹಂತ ಕೋಡಿಕಣ್ಣೂರಿನಿಂದ ಮೂರಂಡಹಳ್ಳಿ ಕ್ರಾಸ್‌ವರೆಗೆ ಒಟ್ಟಾರೆ 1.6 ಕಿಮೀಯಷ್ಟು ಅಭಿವೃದ್ಧಿಗೊಳ್ಳಲಿದೆ. ಇದೂ ಕೂಡ 1 ಕೋಟಿ ಅಂದಾಜು ವೆಚ್ಚದ ಕಾಮಗಾರಿ. `ಇದೂ ಕೂಡ ಶೀಘ್ರವೇ ಆರಂಭಗೊಳ್ಳಲಿದ್ದು ಮಾರ್ಚಿ ಕೊನೆಯ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಲಿದೆ~ ಎಂಬುದು ಮುನಿಸ್ವಾಮಿಯವರ ವಿಶ್ವಾಸದ ನುಡಿ.

ಕಾಮಗಾರಿಗಳು ನಡೆಯುವ ಹೊತ್ತಿನಲ್ಲೆ ಬೆಂಗಳೂರಿನಿಂದ ಸಹಾಯಕ ಕಾರ್ಯಪಾಲಕ ಗುಣ ಭರವಸೆ ಉಪವಿಭಾಗದ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲನೆ ನಡೆಸಲಿದ್ದಾರೆ. ಗುಣಮಟ್ಟ ಕಾಪಾಡಲು ನಾವೂ ಕೂಡ ಗುತ್ತಿಗೆದಾರರಿಗೆ ಸಾಕಷ್ಟು ಸೂಚನೆಗಳನ್ನು ನೀಡಿದ್ದೇವೆ ಎಂದು ಅವರು ತಿಳಿಸಿದರು.

ಹಳ್ಳಗಳು:

60 ಲಕ್ಷ ವೆಚ್ಚದಲ್ಲಿ ಜಿಲ್ಲೆಯ 374 ಕಿಮೀ ವ್ಯಾಪ್ತಿಯ ರಸ್ತೆಗಳಲ್ಲಿ ಹಳ್ಳಮುಚ್ಚುವ ಕೆಲಸವೂ ನಡೆಯುತ್ತಿದೆ. ಅನುದಾನ ಸಾಕಾಗದಿದ್ದರೆ ಕೆಲಸ ಮುಂದುವರಿಸಿ. ನಂತರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಇಲಾಖೆಯ ಉನ್ನತ ಅಧಿಕಾರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ ಕೆಲಸ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.

`ಇದು ಆರಂಭವಷ್ಟೆ. ಏಪ್ರಿಲ್ ಬಳಿಕ ಇಡೀ ನಗರದ ಚಿತ್ರಣವೇ ಬದಲಾಗಲಿದೆ. ಇಷ್ಟು ವರ್ಷ ಕಂಡ ನಗರದ ರಸ್ತೆಗಳ ದೃಶ್ಯಗಳು ಉತ್ತಮಗೊಳ್ಳಲಿವೆ. ಜನ ಸಹಕಾರ ನೀಡಿದರೆ, ಇಲಾಖೆ ಸಲ್ಲಿಸಿದ ಪ್ರಸ್ತಾವನೆಗಳಿಗೆ ಸೂಕ್ತ ಸಮಯದೊಳಗೆ ಅನುಮೋದನೆ ದೊರಕಿದರೆ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಲು ಇಲಾಖೆ ಸಿದ್ಧವಿದೆ. ಎಲ್ಲ ಪ್ರಮುಖ ರಸ್ತೆಗಳನ್ನೂ ಜೋಟಿ ರಸ್ತೆಗಳನ್ನಾಗಿಸುವುದು, ಮಧ್ಯಭಾಗದಲ್ಲಿ ದೀಪಗಳು, ಬ್ಯಾರಿಕೇಡ್‌ಗಳು, ವೃತ್ತಗಳಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆಯ ಉದ್ದೇಶವೂ ಇದೆ ಎನ್ನುತ್ತಾರೆ ಟಿ.ವೆಂಕಟಾಚಲಯ್ಯ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಎಂ.ಮುನಿಸ್ವಾಮಿ

ಬಂಗಾರಪೇಟೆ ವೃತ್ತದಿಂದ-ಕ್ಲಾಕ್ ಟವರ್‌ವರೆಗೆ 1.55 ಕಿಮೀ ವ್ಯಾಪ್ತಿಯಲ್ಲಿ ರಸ್ತೆಯ (ರಾಜ್ಯ ಹೆದ್ದಾರಿ 99) ಅಭಿವೃದ್ಧಿ ಕೆಲಸ, 2 ಮೋರಿಗಳ ನಿರ್ಮಾಣ ನಡೆಯುತ್ತಿದೆ. ಡೂಂಲೈಟ್ ವೃತ್ತದಿಂದ ಕಠಾರಿ ಗಂಗಮ್ಮನ ದೇವಾಲಯದವರೆಗಿನ 200 ಮೀಟರ್‌ನಷ್ಟು ರಸ್ತೆಯನ್ನು ಮರು ನಿರ್ಮಾಣ ಮಾಡಿ ಎತ್ತರಿಸಲಾಗುವುದು. ಟೇಕಲ್ ಕ್ರಾಸ್‌ನಿಂದ ಕ್ಲಾಕ್‌ಟವರ್‌ವರೆಗೆ ಡಾಂಬರೀಕರಣ ಮಾಡಲಾಗುವುದು ಎಂದು `ಪ್ರಜಾವಾಣಿ~ಗೆ ತಿಳಿಸಿದರು ಎಂ.ಮುನಿಸ್ವಾಮಿ, ಲೋಕೋ ಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.